ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಉಸ್ತುವಾರಿ ಹಂಚಿಕೆ, ಕಲ್ಲಿದ್ದಲು ಕೊರತೆ ನೀಗಿಸಲು ಕೇಂದ್ರಕ್ಕೆ ಮನವಿ: ಸಿಎಂ ಬೊಮ್ಮಾಯಿ

ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಜಿಲ್ಲಾ ಉಸ್ತುವಾರಿ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಸ್ಪಷ್ಟಪಡಿಸಿದ್ದಾರೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಜಿಲ್ಲಾ ಉಸ್ತುವಾರಿ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಸ್ಪಷ್ಟಪಡಿಸಿದ್ದಾರೆ.

ಇಂದು ಗೃಹ ಕಚೇರಿ ಕೃಷ್ಣಾ ಬಳಿ ಬೆಂಗಳೂರು ಉಸ್ತುವಾರಿಗಾಗಿ ಎದ್ದಿರುವ ಜಟಾಪಟಿ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ಕೊಡಬೇಕು ಎಂಬುದರ ಬಗ್ಗೆ ಸಂಪುಟ ಸಚಿವರ ಜೊತೆ ಸೌಹಾರ್ದ ಯುತವಾಗಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದಿದ್ದಾರೆ.

ಎಲ್ಲರೂ ನಮ್ಮವರೇ ಇದ್ದಾರೆ. ಹೀಗಾಗಿ ಯಾವುದೇ ರೀತಿಯ ತೊಂದರೆ ಆಗದ ರೀತಿ ನಿರ್ಧಾರ ಮಾಡುತ್ತೇನೆ. ಬೆಂಗಳೂರು ಉಸ್ತುವಾರಿ ‌ಬಹಳ ಮಹತ್ವದ್ದಾದ್ದರಿಂದ ಅದರ ಬಗ್ಗೆ ಎಲ್ಲರ ಜೊತೆ ಚರ್ಚಿಸಿ, ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವುದಾಗಿ ಸಿಎಂ ಹೇಳಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ನೀಗಿಸುವಂತೆ ಕೇಂದ್ರ ಕಲ್ಲಿದ್ದಲು ಸಚಿವರಿಗೆ ಮನವಿ ಮಾಡಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೇಂದ್ರದಿಂದ ಕರ್ನಾಟಕಕ್ಕೆ 10 ವ್ರ್ಯಾಟ್‌ನಷ್ಟು‌ ಕಲ್ಲಿದ್ದಲು ಪೂರೈಕೆಯಾಗುತ್ತಿರುವುದು ಸಾಲುತ್ತಿಲ್ಲ. ರಾಜ್ಯಕ್ಕೆ ಇನ್ನೂ ಹೆಚ್ಚಿನ‌ ಕಲ್ಲಿದ್ದಲಿನ ಅಗತ್ಯವಿದೆ. 10 ರಿಂದ 14 ವ್ರ್ಯಾಟ್‌ನಷ್ಟು ಕಲ್ಲಿದ್ದಲು ಪೂರೈಕೆಯಾದರೆ ಕೊರತೆ ನೀಗಲಿದೆ. ಇದಕ್ಕೆ ಸಂಬಂಧಿಸಿದಂತೆ ಎರಡ್ಮೂರು ಮೈನಿಂಗ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಚನೆ ನೀಡಿ ಕರ್ನಾಟಕದಲ್ಲಿ ಕಲ್ಲಿದ್ದಲು ಕೊರತೆಯಾಗದಂತೆ ನೋಡಿಕೊಳ್ಳುವಂತೆ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com