ಮುಸ್ಲಿಂ ಮದುವೆ ಕೇವಲ ಒಪ್ಪಂದ ಅಷ್ಟೆ, ಹಿಂದೂ ವಿವಾಹದಂತೆ ಸಂಸ್ಕಾರವಲ್ಲ: ಕರ್ನಾಟಕ ಹೈಕೋರ್ಟ್

ಮುಸ್ಲಿಂ ವಿವಾಹವು ಅನೇಕ ಅರ್ಥಗಳನ್ನು ಹೊಂದಿರುವ ಕೇವಲ ಒಂದು ಒಪ್ಪಂದವಾಗಿದೆ. ಹಿಂದೂ ವಿವಾಹದಂತೆ ಒಂದು ಸಂಸ್ಕಾರವಲ್ಲ ಮತ್ತು ವಿಚ್ಛೇದನ ನೀಡಿದಾಕ್ಷಣ ಪತ್ನಿಗೆ ಜೀವನಾಂಶ ನೀಡುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು...
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಮುಸ್ಲಿಂ ವಿವಾಹವು ಅನೇಕ ಅರ್ಥಗಳನ್ನು ಹೊಂದಿರುವ ಕೇವಲ ಒಂದು ಒಪ್ಪಂದವಾಗಿದೆ. ಹಿಂದೂ ವಿವಾಹದಂತೆ ಒಂದು ಸಂಸ್ಕಾರವಲ್ಲ ಮತ್ತು ವಿಚ್ಛೇದನ ನೀಡಿದಾಕ್ಷಣ ಪತ್ನಿಗೆ ಜೀವನಾಂಶ ನೀಡುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಪತ್ನಿಗೆ ಜೀವನಾಂಶ ನೀಡುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪತಿ, ಬೆಂಗಳೂರಿನ ಭುವನೇಶ್ವರಿ ನಗರದ ಎಜಾಜೂರ್ ರೆಹಮಾನ್(52) ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಮುಸ್ಲಿಂ ವಿವಾಹ ಒಂದು ಸಂಸ್ಕಾರವಲ್ಲ. ಎರಡು ಕುಟುಂಬಗಳ ನಡುವಿನ ಒಪ್ಪಂದವಷ್ಟೇ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.

ಆಗಸ್ಟ್ 12, 2011 ರಂದು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಪತ್ನಿಗೆ ಜೀವನಾಂಶ ನೀಡುವಂತೆ ಆದೇಶ ಪತಿಗೆ ಆದೇಶ ನೀಡಿತ್ತು. ಈ ಆದೇಶ ರದ್ದುಗೊಳಿಸುವಂತೆ ಕೋರಿ ರೆಹಮಾನ್ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಹೈಕೋರ್ಟ್ ಪೀಠ, ವಿಚ್ಛೇದನದಿಂದ ಬೇರ್ಪಟ್ಟಾಗ ಪತಿಯಾದ ವ್ಯಕ್ತಿಯು ತನ್ನೆಲ್ಲಾ ಬಾದ್ಯತೆಗಳಿಂದ ಮುಕ್ತನಾಗುವುದಿಲ್ಲ. ಮೆಹರ್‌ ನೀಡಿದಾಕ್ಷಣ ಒಪ್ಪಂದ ಮುಕ್ತಾಯವಾಗುವುದಿಲ್ಲ. ಬದಲಿಗೆ ಕೆಲವು ನ್ಯಾಯಯುತ ಹೊಣೆಗಾರಿಕೆಗಳನ್ನು ಸೃಷ್ಟಿಸುತ್ತದೆ. ವಿಚ್ಛೇದನದಿಂದ ನಿರ್ಗತಿಕಳಾಗುವ ಮಾಜಿ ಪತ್ನಿಗೆ ಪತಿ ಜೀವನಾಂಶ ನೀಡಬೇಕಾಗುತ್ತದೆ’ ಎಂದು ಹೇಳಿದೆ.

ಮೊದಲ ಪತ್ನಿಗೆ ತಲಾಕ್‌ ನೀಡುವ ವೇಳೆ ಮೆಹರ್‌(ಪತ್ನಿಗೆ ಪತಿ ಕೊಡುವ ಉಡುಗೊರೆ) ನೀಡಿರುವುದರಿಂದ ಜೀವನಾಂಶ ನೀಡಲು ಸಾಧ್ಯವಿಲ್ಲ. ಎರಡನೇ ಪತ್ನಿ ಹಾಗೂ ಮಕ್ಕಳ ನಿರ್ವಹಣೆಗೆ ವೆಚ್ಚ ಭರಿಸಬೇಕು ಎಂದು ಪತಿಯು ನೀಡಿದ್ದ ಕಾರಣಗಳನ್ನು ಹೈಕೋರ್ಟ್ ತಳ್ಳಿ ಹಾಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com