ಹಾಸನ: ಶಿಕ್ಷಣ ವ್ಯವಸ್ಥೆ ಬದಲಾಗಬೇಕು, ನನ್ನ ಸಾವು ಬದಲಾವಣೆಗೆ ಬುನಾದಿ ಹಾಕಬೇಕು ಎಂದು ವಿಡಿಯೊ ಮಾಡಿಟ್ಟು ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
ವಿಡಿಯೊ ಮಾಡಿಟ್ಟು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಹಾಸನದಲ್ಲಿ ನಡೆದಿದೆ.
ಶಿಕ್ಷಣ ವ್ಯವಸ್ಥೆ ಬದಲಾವಣೆ ಆಗದಿದ್ದರೆ ಸಾಧನೆ ಸಾಧ್ಯವಿಲ್ಲ ಎಂದು ಸಾಯುವ ಮುನ್ನ ವಿಡಿಯೊದಲ್ಲಿ ಹೇಳಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ಮನಕಲಕುವಂತಿದೆ.
Published: 26th October 2021 12:23 PM | Last Updated: 26th October 2021 03:14 PM | A+A A-

ವಿಡಿಯೊ ಮಾಡಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಹೇಮಂತ್
ಹಾಸನ: ವಿಡಿಯೊ ಮಾಡಿಟ್ಟು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಹಾಸನದಲ್ಲಿ ನಡೆದಿದೆ.
ಶಿಕ್ಷಣ ವ್ಯವಸ್ಥೆ ಬದಲಾವಣೆ ಆಗದಿದ್ದರೆ ಸಾಧನೆ ಸಾಧ್ಯವಿಲ್ಲ. ಶಿಕ್ಷಣ ವ್ಯವಸ್ಥೆ ಬದಲಾವಣೆಗೆ ನನ್ನ ಬಲಿದಾನ ದಾರಿ ದೀಪವಾಗಲಿ ಎಂದು ಸಾಯುವ ಮುನ್ನ ವಿಡಿಯೊದಲ್ಲಿ ಹೇಳಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ಮನಕಲಕುವಂತಿದೆ.
ಹೇಮಂತ್ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಹೇಮಂತ್ ಹಾಸನ ನಗರದ ಖಾಸಗಿ ತಾಂತ್ರಿಕ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಜಿಲ್ಲೆಯ ಅರಸೀಕೆರೆ ತಾಲೂಕಿನ ಹಿರಿಯಾಳು ನಿವಾಸಿ.
ನಾನು ಸತ್ತರೆ ಸುಟ್ಟರೆ ನನ್ನ ದೇಹ ಬೂದಿಯಾಗುತ್ತದೆ, ಇಲ್ಲವೇ ಹೂತರೆ ಕೊಳೆತುಹೋಗುತ್ತದೆ, ಅದರ ಬದಲು ಅಂಗಾಂಗ ದಾನ ಮಾಡಿ. ನನ್ನ ಅಂತ್ಯಕ್ರಿಯೆಯಲ್ಲಿ ಸಿಎಂ, ಶಿಕ್ಷಣ ಸಚಿವರು, ಆದಿ ಚುಂಚನಗಿರಿ ಶ್ರೀಗಳು ಬಾಗಿ ಆಗಬೇಕು ಎಂದು ಹೇಮಂತ್ ಮನವಿ ಮಾಡಿಕೊಂಡಿದ್ದಾನೆ. ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಸೈಬರ್ ಸೆಂಟರ್ನಲ್ಲಿ ಕೆಲಸ ಮಾಡಬಹುದು ಅಷ್ಟೇ. ಆದರೆ ನನ್ನಪ್ಪ ಶಿಕ್ಷಕರು ಅವರ ವಿದ್ಯಾರ್ಥಿಗಳು ದೊಡ್ಡ ಸಾಧನೆ ಮಾಡಿದ್ದಾರೆ. ಹಿಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅದು ಸಾಧ್ಯವಿತ್ತು. ಆದರೆ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಇದು ಸಾದ್ಯವೇ ಇಲ್ಲ. ಸಿಎಂ, ಶಿಕ್ಷಣ ಇಲಾಖೆ, ವಿಟಿಯು ವಿಸಿ ಎಲ್ಲರೂ ಚಿಂತಿಸಿ. ಎಲ್ಲಾ ರಾಜಕೀಯ ಪಕ್ಷದ ಗಣ್ಯ ನಾಯಕರು ಶಿಕ್ಷಣ ಸುಧಾರಣೆಗೆ ಸಹಕರಿಸಿ ಎಂದು ವಿಡಿಯೊದಲ್ಲಿ ವಿದ್ಯಾರ್ಥಿ ಕೋರಿದ್ದಾನೆ.
ಸಂಬಂಧಗಳು ಬೆಳೆಯುತ್ತದೆಯೆಂದರೆ ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ, ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆಯುವುದು ನನಗೆ ಆಸೆಯಾಗಿತ್ತು. ಸ್ವಾಮಿ ವಿವೇಕಾನಂದರ ಸಾಧನೆಗಳಿಂದ ಅವರ ಅಪ್ಪ-ಅಮ್ಮ ಕೀರ್ತಿವಂತರಾದರು. ನನ್ನ ಸಾವಿನಿಂದ ನನ್ನ ಅಪ್ಪ-ಅಮ್ಮನಿಗೆ ಒಳ್ಳೆಯ ಹೆಸರು ಬರಲಿ, ಶಿಕ್ಷಣ ವ್ಯವಸ್ಥೆಯಲ್ಲಿ ಮೂರು ನಿಯಮಗಳನ್ನು ಹೇಳುತ್ತೇನೆ, ಅದನ್ನು ಜಾರಿಗೆ ತಂದರೆ ಶಿಕ್ಷಣ ವ್ಯವಸ್ಥೆ ಖಂಡಿತಾ ಸುಧಾರಣೆಯಾಗುತ್ತದೆ ಎಂದಿದ್ದಾರೆ.
ನನ್ನ ಸಾವು ವ್ಯರ್ಥ ಆಗಲ್ಲ. ಯಾರಾದರು ಒಬ್ಬರ ಬಲಿದಾನ ಆಗಲೇ ಬೇಕಿದೆ. ಇದರಿಂದ ನಾನು ಬದಲಾವಣೆಗೆ ಬುನಾದಿ ಹಾಕುವ ಕೆಲಸ ಮಾಡಿದ್ದೇನೆ. ಅಪ್ಪ ಅಮ್ಮ ಐ ಲವ್ ಯೂ, ನಾನು ನಿಮ್ಮನ್ನ ಮಿಸ್ ಮಾಡಿಕೊಳ್ತೀನಿ. ಈ ವಿಡಿಯೋವನ್ನು ನ್ಯೂಸ್ ಚಾನಲ್ನಲ್ಲಿ ಪ್ರಸಾರ ಮಾಡಿ. ಎಲ್ಲರೂ ಈ ವಿಡಿಯೋವನ್ನು ನೋಡಲಿ ಅಂತ ವಿದ್ಯಾರ್ಥಿ ಹೇಮಂತ್ ಮನವಿ ಮಾಡಿದ್ದಾನೆ. ನನ್ನ ಸಾವಿನ ನಂತರ ಅಪ್ಪ ಅಮ್ಮ ಇಬ್ಬರು ಅನಾಥ ಮಕ್ಕಳನ್ನ ದತ್ತು ಪಡೆದು ಸಾಕಿ. ಆ ಇಬ್ಬರಲ್ಲಿ ನಾನು ಇರುತ್ತೇನೆ ಎಂದು ಹೇಳಿದ್ದಾನೆ.