'ಅಪ್ಪು' ನಿಧನಕ್ಕೆ ಶಕ್ತಿಧಾಮ ಆಶ್ರಿತ ಕೇಂದ್ರದ ಹೆಣ್ಣುಮಕ್ಕಳಿಂದ ಭಾವಪೂರ್ಣ ಶ್ರದ್ಧಾಂಜಲಿ

ಅಗಲಿದ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮೈಸೂರಿನ ಶಕ್ತಿಧಾಮದಲ್ಲಿ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಭಾವಪರವಶರಾದ ಶಕ್ತಿಧಾಮ ಆಶ್ರಯ ಕೇಂದ್ರದ ಮಕ್ಕಳು
ಭಾವಪರವಶರಾದ ಶಕ್ತಿಧಾಮ ಆಶ್ರಯ ಕೇಂದ್ರದ ಮಕ್ಕಳು

ಮೈಸೂರು: ಅಗಲಿದ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮೈಸೂರಿನ ಶಕ್ತಿಧಾಮದಲ್ಲಿ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮೈಸೂರಿನ ಶಕ್ತಿಧಾಮ ಆಶ್ರಿತ ಹೆಣ್ಣು ಮಕ್ಕಳು ನಟ ಪುನೀತ್ ರಾಜ್ ಕುಮಾರ್ ಗೆ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಗೊಂಬೆ ಹೇಳುತೈತೆ.. ಮತ್ತೆ ಹೇಳುತೈತೆ? ನೀನೆ ರಾಜಕುಮಾರ ಎಂದು ಸಾಮೂಹಿಕವಾಗಿ ಹಾಡು ಹೇಳಿ ಮಕ್ಕಳು ಶ್ರದ್ದಾಂಜಲಿ ಅರ್ಪಿಸಿದರು.

ನಟ ಅಪ್ಪು ಅವರು ಶಕ್ತಿಧಾಮಕ್ಕೆ ತಮ್ಮ ಬದುಕಿನ ಉದ್ದಕ್ಕೂ ನೆರವಾಗಿದ್ದರು. ಡಾ.ಪಾರ್ವತಮ್ಮ ರಾಜ್ ಕುಮಾರ್ ಶಕ್ತಿಧಾಮದ ಸ್ಥಾಪಕ ಅಧ್ಯಕ್ಷರಾಗಿದ್ದು, ತಾಯಿಯ ಆಶಯದಂತೆ ನಟ ಪುನೀತ್ ರಾಜ್ ಕುಮಾರ್ ಶಕ್ತಿಧಾಮಕ್ಕೆ ಬಂದು ಹೋಗುತ್ತಿದ್ದರು. ಇದೀಗ ಯುವರತ್ನನ ಅಗಲಿಕೆಯಿಂದ ಶಕ್ತಿಧಾಮದ ಮಕ್ಕಳು ಅತೀವ ದು:ಖಿತರಾಗಿದ್ದು ನಿನ್ನೆ ಇಡೀ ಊಟ ಮಾಡದೆ ಉಪವಾಸವಿದ್ದರು ಎನ್ನಲಾಗಿದೆ.

ನಟ ಪುನೀತ್ ಅಗಲಿಕೆಯಿಂದ ಭಾವುಕರಾಗಿ ಮಾತನಾಡಿದ ಶಕ್ತಿಧಾಮದ ಸಂಚಾಲಕ ಜಿ.ಎಸ್. ಜಯದೇವ್, ಪುನೀತ್ ರಾಜ್ ಕುಮಾರ್ ಶಕ್ತಿಧಾಮಕ್ಕೆ ಬೆನ್ನೆಲುಬಾಗಿದ್ದರು. ಶಕ್ತಿಧಾಮ ಡಾ. ರಾಜ್ ಕುಟುಂಬದ ಕನಸು. ಅನಾಥ ಹೆಣ್ಣು ಮಕ್ಕಳ ಪುನರ್ವಸತಿ ಕೇಂದ್ರಕ್ಕೆ, ಪುನೀತ್ ಅವರು ಶಕ್ತಿಧಾಮಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದರು.

ಕಳೆದ ವರ್ಷ ಕನ್ನಡದ ಕೋಟ್ಯಧಿಪತಿಯಿಂದ ತಮಗೆ ಬಂದಿದ್ದ ೧೮ ಲಕ್ಷ ರೂಪಾಯಿ ಸಂಭಾವನೆಯನ್ನು ಶಕ್ತಿಧಾಮಕ್ಕೆ ನೀಡಿದ್ದರು. ಪ್ರತೀ ವರ್ಷ ಮಕ್ಕಳಿಗೆ ಪುಸ್ತಕ ಹಾಗೂ ಇತರ ಅಗತ್ಯತೆಗಳನ್ನು ಪೂರೈಸುತ್ತಾ ಬಂದಿದ್ದರು. ಶಕ್ತಿಧಾಮಕ್ಕೆ ಸೇರಿದ ಮೂರು ಎಕರೆ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗಾಗಿ ದೊಡ್ಡ ಶಿಕ್ಷಣ ಸಂಸ್ಥೆ ಆರಂಭಿಸಲು ಯೋಚಿಸಿದ್ದರು. ಸುಮಾರು 8 ಕೋಟಿ ವೆಚ್ಷದ ಅಂದಾಜು ಕೂಡ ಮಾಡಿಸಿದ್ದರು.

ಈ ವರ್ಷ ಕೋವಿಡ್ ಗೆ ಮುನ್ನ ಶಕ್ತಿಧಾಮಕ್ಕೆ ಬಂದು ಬಹಳ ಹೊತ್ತು ಮಕ್ಕಳೊಂದಿಗೆ ಸಮಯ ಕಳೆದಿದ್ದರು. ಇತ್ತೀಚಿನ ದಿನಗಳಲ್ಲಿ ಪುನೀತ್ ಶಿಕ್ಷಣದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಶಕ್ತಿಧಾಮಕ್ಕೆ ಬಂದು ಮಕ್ಕಳ ಜೊತೆ ಊಟ ಮಾಡೋದಂದ್ರೆ ಅವರಿಗೆ ಬಲು ಇಷ್ಟ. ಮಕ್ಕಳಿಗೆ ಒಳ್ಳೆಯ ಕಡೆ ಊಟ ತರಿಸಿ ಅವರೂ ಊಟ ಮಾಡುತ್ತಿದ್ದರು. ಶಿವಣ್ಣ ಅವರೂ ಕೂಡ ಪುನೀತ್ ಅವರ ಯೋಜನೆಗಳಿಗೆ ಕೈಜೋಡಿಸಿದ್ದರು.ಶಕ್ತಿಧಾಮದ ಸಲುವಾಗಿ ವಿದೇಶಕ್ಕೆ ಹೋಗಿ ಬರಲು ತಯಾರಿ ಮಾಡುತ್ತಿದ್ದರು. ಕನ್ನಡದ ಬೇರೆ ಬೇರೆ ನಟರ ಸಹಕಾರ ಪಡೆದು ಶಕ್ತಿಧಾಮಕ್ಕೆ ನೆರವಾಗಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರು. ಪುನೀತ್ ರ ಅಗಲಿಕೆ ಶಕ್ತಿಧಾಮ ಹಾಗೂ ಇಡೀ ಕನ್ನಡ ನಾಡಿಗೆ ತುಂಬಲಾರದ ನಷ್ಟ ಎಂದು ಸ್ಮರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com