ಬಾಕಿ ಇರುವ ಯೋಜನೆಗಳು: ರೇರಾ ಗಡುವು ಅಕ್ಟೋಬರ್ 1ಕ್ಕೆ ವಿಸ್ತರಣೆ; ಗೃಹ ಖರೀದಿದಾರರ ಕೆಂಗಣ್ಣಿಗೆ ಗುರಿ!
ಬಾಕಿ ಇರುವ ಗೃಹ ನಿರ್ಮಾಣ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಕ ಪ್ರಾಧಿಕಾರ (ಕೆ-ರೇರಾ) ಗಡುವನ್ನು ವಿಸ್ತರಿಸಿದ್ದು, ಗೃಹ ಖರೀದಿದಾರರ ಕೆಂಗಣ್ಣಿಗೆ ಹೊಸ ಆದೇಶ ಗುರಿಯಾಗಿದೆ.
Published: 01st September 2021 03:06 PM | Last Updated: 01st September 2021 03:24 PM | A+A A-

ರೇರಾ (ಸಾಂಕೇತಿಕ ಚಿತ್ರ)
ಬೆಂಗಳೂರು: ಬಾಕಿ ಇರುವ ಗೃಹ ನಿರ್ಮಾಣ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಕ ಪ್ರಾಧಿಕಾರ (ಕೆ-ರೇರಾ) ಗಡುವನ್ನು ವಿಸ್ತರಿಸಿದ್ದು, ಗೃಹ ಖರೀದಿದಾರರ ಕೆಂಗಣ್ಣಿಗೆ ಹೊಸ ಆದೇಶ ಗುರಿಯಾಗಿದೆ.
ಏ.1- ಅಕ್ಟೊಬರ್ 1 ರ ನಡುವಿನ ಯೋಜನೆಗಳನ್ನು ಪೂರ್ಣಗೊಳಿಸಲು ಅ.1ಕ್ಕೇ ಗಡುವು ವಿಧಿಸಲಾಗಿದೆ. ಈ ಅವಧಿಗೂ ಮುನ್ನವೇ ಪೂರ್ಣಗೊಳ್ಳಬೇಕಿದ್ದ ಗೃಹ ನಿರ್ಮಾಣ ಯೋಜನೆಗಳಿಗೆ ಈ ಆದೇಶದಿಂದ ಮತ್ತಷ್ಟು ಸಮಯ ದೊರೆತಿದ್ದು, ಗೃಹ ಖರೀದಿದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆ.27 ರಂದು ರೇರಾ ಈ ಆದೇಶವನ್ನು ಹೊರಡಿಸಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜನರ ಸಾಮೂಹಿಕ ಪ್ರಯತ್ನಗಳಿಗಾಗಿ ವೇದಿಕೆ (ಎಫ್ ಆರ್ ಸಿಪಿಎ) ಕಾರ್ಯದರ್ಶಿ ಎಂಎಸ್ ಶಂಕರ್ " ಈ ಗಡುವು ವಿಸ್ತರಣೆ ಆದೇಶ ರೇರಾದ ಮೂಲ ಉದ್ದೇಶಕ್ಕೇ ಧಕ್ಕೆ ಉಂಟುಮಾಡುವಂತಿದೆ. ರೇರಾದ ಮೂಲ ಉದ್ದೇಶ ಸಮತೋಲಿತ ಹಾಗೂ ನ್ಯಾಯೋಚಿತ ನಿರ್ಧಾರವನ್ನು ಕೈಗೊಳ್ಳುವುದಾಗಿದೆ. ಆದರೆ ಈಗ ಮೂಲ ಉದ್ದೇಶಕ್ಕೇ ವಿರುದ್ಧವಾಗಿ ರೇರಾ ಆದೇಶ ಹೊರಡಿಸಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಈ ಆದೇಶದ ಪರಿಣಾಮವಾಗಿ ಎಲ್ಲಾ ಗೃಹ ಖರೀದಿದಾರರು ಸಾಂಕ್ರಾಮಿಕದ ಅವಧಿಯಲ್ಲಿ ವೇತನ ಕಡಿತ, ಉದ್ಯೋಗದ ನಷ್ಟದ ನಡುವೆಯೂ ಇಎಂಐ ಪಾವತಿ ಮಾಡುವುದರ ಜೊತೆಗೆ ವಿಸ್ತರಣೆಯಾದ ಅವಧಿಗೆ ಬಾಡಿಗೆಯನ್ನೂ ನೀಡಬೇಕಾಗುತ್ತದೆ.
ಗೃಹ ಖರೀದಿದಾರರಿಗೆ ಗಡುವು ವಿಸ್ತರಣೆಗೆ ಅನುಗುಣವಾದ ಪರಿಹಾರವೂ ಸಿಗುವುದಿಲ್ಲ. ಈ ಆದೇಶದಿಂದ ಗೃಹ ಖರೀದಿದಾರರಿಗೆ ಒತ್ತಡ ಹೆಚ್ಚಾಗಲಿದೆ" ಎಂದು ಶಂಕರ್ ವಿರೋಧ ವ್ಯಕ್ತಪಡಿಸಿದ್ದಾರೆ.
"ಎರಡನೇ ಅಲೆಯ ಬಗ್ಗೆ ಶಂಕರ್ ಮಾತನಾಡಿದ್ದು, ರಾಜ್ಯ ಕೇಂದ್ರ ಸರ್ಕಾರಗಳು ಈ ಬಾರಿ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಿಲ್ಲ. ಕೆಲಸವೂ ಸ್ಥಗಿತಗೊಳ್ಳಲಿಲ್ಲ. ಇಡೀ ಎರಡನೇ ಅಲೆಯಲ್ಲಿ ಕಳೆದಿದ್ದು ಕೇವಲ 2 ತಿಂಗಳಷ್ಟೆ. ಆದರೆ ತರ್ಕವೇ ಇಲ್ಲದೇ ರೇರಾ ಗಡುವು ವಿಸ್ತರಣೆ ಮಾಡಿದೆ. ರೇರಾದ ಈ ನಿರ್ಧಾರ ಏಕಪಕ್ಷೀಯವಾಗಿದೆ" ಎಂದು ಶಂಕರ್ ಆರೋಪಿಸಿದ್ದಾರೆ.