ಶಾಲಾ ಆವರಣಗಳಿಂದ ಹಾದು ಹೋಗಿರುವ ವಿದ್ಯುತ್ ತಂತಿಗಳ ತೆರವುಗೊಳಿಸಿ: ಸರ್ಕಾರಕ್ಕೆ 'ಹೈ' ಆದೇಶ 

ರಾಜ್ಯದ ಶಾಲೆಗಳ ಆವರಣಗಳಿಂದ ಹಾದು ಹೋಗಿರುವ ಎಲ್ಲಾ ವಿದ್ಯುತ್ ತಂತಿಗಳನ್ನೂ ತೆರವುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೋಮವಾರ ಆದೇಶಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ ಶಾಲೆಗಳ ಆವರಣಗಳಿಂದ ಹಾದು ಹೋಗಿರುವ ಎಲ್ಲಾ ವಿದ್ಯುತ್ ತಂತಿಗಳನ್ನೂ ತೆರವುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೋಮವಾರ ಆದೇಶಿಸಿದೆ. 

ತುಮಕೂರು ಜಿಲ್ಲೆಯಲ್ಲಿ ಆ.15ರಂದು ಧ್ವಜ ಹಾರಿಸುವಾಗ ವಿದ್ಯುತ್ ತಗುಲಿ ಬಾಲಕ ಮೃತಪಟ್ಟ ಪ್ರಕರಣದ ಸ್ವಯಂ ಪ್ರೇರಿತ ವಿಚಾರಣೆ ನಡೆಸುತ್ತಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.

ಕೊಪ್ಪಳ ಜಿಲ್ಲೆಯ ಹಾಸ್ಟೆಲ್‌ನಲ್ಲಿ 2019ರಲ್ಲಿ ಧ್ವಜ ಹಾರಿಸುವ ವೇಳೆ ಧ್ವಜ ಕಂಬದ ಮೂಲಕ ವಿದ್ಯುತ್ ಹಾದು ಐವರು ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಪೀಠ, 2021ರ ಆಗಸ್ಟ್ 15ರಂದು ತುಮಕೂರು ಜಿಲ್ಲೆಯ ಕರಿಕೆರೆ ಶಾಲೆಯಲ್ಲಿ ಧ್ವಜಾರೋಹಣ ವೇಳೆ ವಿದ್ಯುತ್ ಸ್ಪರ್ಶಿಸಿ 16 ವರ್ಷದ ಬಾಲಕ ಚಂದನ್ ಮೃತಪಟ್ಟ ಪ್ರಕರಣವನ್ನೂ ವಿಚಾರಣೆಗೆ ಕೈಗೆತ್ತಿಕೊಂಡಿದೆ.

ವಿಚಾರಣೆ ವೇಳೆ ‘ವಿದ್ಯಾರ್ಥಿಗಳೇ ಸ್ವಯಂ ಪ್ರೇರಣೆಯಿಂದ ಧ್ವಜಾರೋಹಣಕ್ಕೆ ಮುಂದಾಗಿದ್ದರು ಎಂದು ತುಮಕೂರು ಜಿಲ್ಲಾಧಿಕಾರಿ ವರದಿ ನೀಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ಇದನ್ನು ಒಪ್ಪಲಾಗದು. ಸಾಮಾನ್ಯವಾಗಿ ಶಿಕ್ಷಕರ ಸೂಚನೆಯಂತೆ ವಿದ್ಯಾರ್ಥಿಗಳು ಈ ಕಾರ್ಯಕ್ಕೆ ಮುಂದಾಗುತ್ತಾರೆ. ಜಿಲ್ಲಾಧಿಕಾರಿ ವರದಿ ಗಮನಿಸಿದರೆ ಅವರು ಶಾಲಾ ಸಿಬ್ಬಂದಿಯ ಪರವಾಗಿ ನಿಂತು ಪ್ರಕರಣ ತಿರುಚಲು ಪ್ರಯತ್ನಿಸುತ್ತಿರುವಂತಿದೆ’ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು. 

ಅಪ್ರಾಪ್ತ ಮಕ್ಕಳು ಪ್ರಾಂಶುಪಾಲರು ಅಥವಾ ಶಿಕ್ಷಕಕರ ನೇರ ನಿರ್ದೇಶನವಿಲ್ಲದೆ ಇಂತಹ ಕೃತ್ಯಗಳನ್ನು ಮಾಡುವುದಿಲ್ಲ ಎಂದು ನ್ಯಾಯಪೀಠ ಹೇಳಿ, ಜಿಲ್ಲಾಧಿಕಾರಿ ವರದಿಯಲ್ಲಿ ಶಾಲೆಯ ಮೇಲೆ ಹಾದು ಹೋದ 11 ಕೆ.ವಿ. ವಿದ್ಯುತ್ ಮಾರ್ಗವನ್ನು ಭಾಗಶಃ ತೆರವು ಮಾಡಲಾಗಿದೆ. ಹಾಗೆಂದರೇನು ಎಂಬುದು ಅರ್ಥವಾಗುತ್ತಿಲ್ಲ. 11 ಕೆ.ಬಿ. ವಿದ್ಯುತ್ ಮಾರ್ಗವನ್ನು 30 ದಿನಗಳಲ್ಲಿ ತೆರವುಗೊಳಿಸಬೇಕು ಎಂದು ಕಟ್ಟುನಿಟ್ಟಾಗಿ ಆದೇಶಿಸಿತು.

ಅಲ್ಲದೆ, ವಿದ್ಯುತ್ ಅವಘಡದಲ್ಲಿ ಮೃತಪಟ್ಟ ವಿದ್ಯಾರ್ಥಿಯ ಪಾಲಕರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ಅದೇಶ ನೀಡಿದೆ. 2019ರ ಆ.18 ರಂದು ಇಂತಹದೇ ಘಟನೆ ನಡೆದಾಗ ಪ್ರತಿ ವಿದ್ಯಾರ್ಥಿಯ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರವನ್ನು ಸರ್ಕಾರ ನೀಡಿತ್ತು. ಇದೀಗ ಕೇವಲ 1 ಲಕ್ಷ ರೂ ನೀಡಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿ ಈ ಪ್ರಕರಣದಲ್ಲೂ ಸಮಾನ ಪರಿಹಾರ ಮೊತ್ತ 10 ಲಕ್ಷ ರೂ.ಗಳನ್ನು ಮೃತ ಬಾಲಕನ ಕುಟುಂಬಕ್ಕೆ 30 ದಿನಗಳಲ್ಲಿ ನೀಡಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.

ಘಟನೆಯಲ್ಲಿ ಗಾಯಾಳುಗಳಿಗೂ ಪರಿಹಾರವನ್ನು ನೀಡಬೇಕು ಎಂದು ನ್ಯಾಯಾಲಯ ಸೂಚಿಸಿ, ಈ ಸಂಬಂಧ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಮತ್ತು ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಕೆಪಿಟಿಸಿಎಲ್ ಪರ ವಕೀಲ ಶ್ರೀರಂಗ, 11 ಕೆ.ವಿ ವಿದ್ಯುತ್ ಮಾರ್ಗಗಳ ನಿರ್ವಹಣೆ ಹೊಣೆ ವಿದ್ಯುತ್ ಸರಬರಾಜು ಕಂಪನಿಗೆಳಿಗೆ ಬರುತ್ತದೆ. ಇದು ನೇರ ಕೆಪಿಟಿಸಿಎಲ್ ವ್ತಾಪ್ತಿಗೆ ಬರುವುದಿಲ್ಲ. ಎಸ್ಕಾಂಗಳಿಗೆ ನೋಟಿಸ್ ನೀಡಿದರೆ ಅವುಗಳ ಮೂಲಕ ಕೋರ್ಟ್ ಆದೇಶ ಪಾಲನೆ ಮಾಡಲಾಗುವುದು ಎಂದು ವಿವರಿಸಿದರು. ಆಗ ನ್ಯಾಯಪೀಠ ಎಸ್ಕಾಂಗಳಿಗೂ ನೋಟಿಸ್ ಜಾರಿಗೊಳಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com