ಬೊಮ್ಮಾಯಿ ಎರಡು ದಿನಗಳ ದೆಹಲಿ ಪ್ರವಾಸ ಫಲಪ್ರದ: 400 ಎಕರೆ ಜಾಗದಲ್ಲಿ ಎಲೆಕ್ಟ್ರಾನಿಕ್ ಹಾರ್ಡ್ವೇರ್ ಪಾರ್ಕ್ ನಿರ್ಮಾಣ
ಎರಡು ದಿನಗಳ ದೆಹಲಿ ಪ್ರವಾಸವು ಬಹಳ ಫಲಪ್ರದವಾಗಿದ್ದು, ವಿವಿಧ ಇಲಾಖೆಯಲ್ಲಿನ ಬಾಕಿ ಉಳಿದಿರುವ ರಾಜ್ಯದ ಯೋಜನೆಗಳ ಬಗ್ಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ
Published: 10th September 2021 12:42 PM | Last Updated: 10th September 2021 12:42 PM | A+A A-

ನಿತಿನ್ ಗಡ್ಕರಿ ಭೇಟಿ ಮಾಡಿದ ಸಿಎಂ ಬೊಮ್ಮಾಯಿ
ಬೆಂಗಳೂರು: ಎರಡು ದಿನಗಳ ದೆಹಲಿ ಪ್ರವಾಸವು ಬಹಳ ಫಲಪ್ರದವಾಗಿದ್ದು, ವಿವಿಧ ಇಲಾಖೆಯಲ್ಲಿನ ಬಾಕಿ ಉಳಿದಿರುವ ರಾಜ್ಯದ ಯೋಜನೆಗಳ ಬಗ್ಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ
ಬೆಂಗಳೂರು ಮತ್ತು ಕೋಲಾರ ಮಾರ್ಗದಲ್ಲಿ ಎಲೆಕ್ಟ್ರಾನಿಕ್ ಹಾರ್ಡ್ವೇರ್ ಪಾರ್ಕ್ ಅನ್ನು 400 ಎಕರೆ ಜಾಗದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಆಪ್ಟಿಕಲ್ ಫೈಬರ್ ಕೇಬಲ್ ಜಾಲವನ್ನು ವಿಸ್ತರಣೆ ಮಾಡುವ ಸಲುವಾಗಿ ಯೋಜನೆಗೆ ಒಪ್ಪಿಗೆ ಸೂಚಿಸಿದ್ದಾರೆ. ಸ್ಕಿಲ್ ವಿಶ್ವವಿದ್ಯಾಲಯ ಮಾಡಬೇಕು ಎನ್ನುವ ಉದ್ದೇಶ ಅವರಿಗಿದೆ. ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ಹೇಳಿದ್ದೇವೆ ಎಂದರು.
ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಹಲವು ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ನೆನೆಗುದಿಗೆ ಬಿದ್ದಿದ್ದ ಬೆಂಗಳೂರು ಹೊರವಲಯದ ದಾಬಸ್‌ಪೇಟೆಯಿಂದ ಹೊಸೂರುವರೆಗಿನ ಉಪನಗರ ರಿಂಗ್‌ರೋಡ್ ಅನ್ನು ಭಾರತ್ ಮಾಲಾ ಮೊದಲನೇ ಯೋಜನೆಯಡಿ ಕೈಗೊಳ್ಳಲಾಗಿದೆ. ಅದರ ಭೂಸ್ವಾಧೀನ ವಿವಾದವನ್ನು ಬಗೆಹರಿಸಲಾಗಿದೆ. ಮುಂದಿನ ಆರು ತಿಂಗಳಲ್ಲಿ ರಸ್ತೆ ನಿರ್ಮಾಣ ಕೆಲಸ ಪ್ರಾರಂಭವಾಗಲಿದೆ. ಅದೇ ರೀತಿ ವಿಜಯಪುರ-ಸಂಕೇಶ್ವರ ಹೆದ್ದಾರಿ ವಿಸ್ತರಣೆಗೆ
ಒಪ್ಪಿಕೊಳ್ಳಲಾಗಿದ್ದು, ಡಿಪಿಆರ್ ನಡೆಯುತ್ತದೆ. ಅಲ್ಲದೆ, ಇನ್ನೂ ನಾಲ್ಕು ಹೆದ್ದಾರಿಗಳನ್ನು ಭಾರತ್ ಮಾಲಾ ಎರಡನೇ ಹಂತದಲ್ಲಿ ತೆಗೆದುಕೊಳ್ಳಲು ಕೇಂದ್ರವು ಒಪ್ಪಿಕೊಂಡಿದೆ ಎಂದು ಮಾಹಿತಿ ನೀಡಿದರು.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಜೊತೆ ಮಾತುಕತೆ ನಡೆಸಿದ್ದೇನೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 400 ಕೋಟಿ ರೂ.ಗಳನ್ನು ನಿನ್ನೆ ಬಿಡುಗಡೆ ಮಾಡಿದ್ದಾರೆ. ಇನ್ನು 1,500 ಕೋಟಿ ಬಿಡುಗಡೆಯಾಗಬೇಕು, ನಮ್ಮಿಂದ ಕೆಲ ವಿವರಣೆ ಕೊಡಬೇಕಿದೆ, ಅದಾದ ತಕ್ಷಣ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.