ಬೆಂಗಳೂರು ಆರೋಗ್ಯ ಸೇವೆಗಳಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಆರೋಗ್ಯ ಸೇವೆಗಳಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಲಾಗುವುದು ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 
120 ನೂತನ ಆಂಬ್ಯುಲೆನ್ಸ್ ಗಳ ಲೋಕಾರ್ಪಣೆ
120 ನೂತನ ಆಂಬ್ಯುಲೆನ್ಸ್ ಗಳ ಲೋಕಾರ್ಪಣೆ

ಬೆಂಗಳೂರು: ಆರೋಗ್ಯ ಸೇವೆಗಳಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಲಾಗುವುದು ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
 
ಅವರು ಇಂದು ವಿಧಾನಸೌಧದಲ್ಲಿ108 ಆರೋಗ್ಯ ಕವಚ ತುರ್ತು ವೈದ್ಯಕೀಯ ಸೇವೆಗೆ 120 ನೂತನ ಆಂಬ್ಯುಲೆನ್ಸ್ ಗಳನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.

ಬೆಂಗಳೂರು ಆರೋಗ್ಯ ಸೇವೆಗಳು ಸಂಪೂರ್ಣವಾಗಿ ಒಂದು ಪ್ರಾಧಿಕಾರದಡಿಗೆ ಬರಬೇಕು. ಬರುವ ದಿನಗಳಲ್ಲಿ ಇದನ್ನು ಕಾರ್ಯಗತಗೊಳಿಸುವುದಾಗಿ ಮುಖ್ಯಮಂತ್ರಿ ಗಳು  ತಿಳಿಸಿದರು. 

ಆರೋಗ್ಯಕ್ಕೆ ಜೀವನಾಡಿ ಆಂಬ್ಯುಲೆನ್ಸ್ , ಆರೋಗ್ಯ ಯಾವಾಗ ಕೆಡುತ್ತದೆ ಎಂದು ತಿಳಿಯೋದು ಕಷ್ಟ. ಆರೋಗ್ಯ ಕೈಕೊಟ್ಟ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಪ್ರಮುಖ ಪಾತ್ರ ವಹಿಸುತ್ತದೆ. 

ಇವು ಕೇವಲ ರೋಗಿಗಳ ಸಾಗಾಣಿಕೆಯ ವಾಹನವಾಗದೆ ತುರ್ತು ಚಿಕಿತ್ಸೆ ಕೊಟ್ಟು, ಕರೆ ಮಾಡಿದ ಕೆಲವೇ ನಿಮಿಷದಲ್ಲಿ ತಲುಪಿ, ರೋಗಿಗಳನ್ನು ಆಸ್ಪತ್ರೆಗೆ ಸೇರಿಸುವ ವಾಹನಗಳಾಗಬೇಕು.  108 ಆಂಬ್ಯುಲೆನ್ಸ್  ಗ್ರಾಮೀಣ ಭಾಗಗಳಲ್ಲಿ ಬಹಳ ಉಪಯುಕ್ತವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. 

108 ಆರೋಗ್ಯ ಸಮಸ್ಯೆಗಳಿಗೆ  ಆಂಬ್ಯುಲೆನ್ಸ್ ವರದಾನವಾಗಿದೆ. ಈ ಸೇವೆಯು ವಿಸ್ತರಣೆಯಾಗಬೇಕು. ಆರೋಗ್ಯ ಕ್ಷೇತ್ರದಲ್ಲಿ ಸಮಸ್ಯೆ ನಿವಾರಣೆಗೆ ಜನಕಾಳಜಿಯಿಂದ ಶ್ರಮಿಸುತ್ತಿದ್ದಾರೆ ಎಂದರು. 

ಕೋವಿಡ್ ನಮ್ಮ ಕಣ್ಣು ತೆರೆಸಿದೆ. ಆರೋಗ್ಯ ಮೂಲಭೂತ ಸೌಕರ್ಯಗಳನ್ನು ನೀಡಲು ನಾವು 70 ವರ್ಷ ಕಾಳಜಿ ಮಾಡಿಲ್ಲ.  ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಹಾಸಿಗೆಗಳು ಇಲ್ಲ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ 10,000 ರೋಗಿಗಳಿಗೆ ಒಂದು ಬೆಡ್ ಇರುವ ವ್ಯವಸ್ಥೆ ಇದೆ. ರೋಗಿಗಳು ಮತ್ತು ವೈದ್ಯರ ಅನುಪಾತ ಹೆಚ್ಚಾಗಬೇಕು. ಪ್ರಾದೇಶಿಕ ಅಸಮಾನತೆ ಇದೆ. ಕೋವಿಡ್ 1 ಮತ್ತು 2 ನೇ ಅಲೆಯನ್ನು ಯಶಸ್ವಿಯಾಗಿ ಎದುರಿಸಿದ್ದೇವೆ. ಅದು ಸುಲಭವೇನಲ್ಲ.
ಕೋವಿಡ್ ಎದುರಿಸಿ ಸಮರ್ಥವಾಗಿ ನಿರ್ವಹಿಸಲಾಗುತ್ತಿದೆ. ಇದಕ್ಕಾಗಿ ಪೊಲೀಸ್, ವೈದ್ಯರು, ಪೌರಕಾರ್ಮಿಕರು ಹಗಲಿರುಳು ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು. 

ವೈದ್ಯರು ದೇವರ ಪ್ರತಿನಿಧಿಗಳು. 108 ಕ್ಕೆ ಜಿ.ಪಿ.ಎಸ್ ಅಳವಡಿಸಿ. ಲ್ಯಾನ್ ವ್ಯವಸ್ಥೆ ಕಲ್ಪಿಸಿದಲ್ಲಿ , ಸುಲಭವಾಗಿ ಸಂಪರ್ಕ ಸಾಧಿಸಲು ಅನುಕೂಲವಾಗುತ್ತದೆ.  ಜೀವ ಉಳಿಸುವ ಎಲ್ಲಾ ಪರಿಕರಗಳನ್ನು ವಾಹನದಲ್ಲಿ ವ್ಯವಸ್ಥೆ ಮಾಡಬೇಕು ಎಂದರು. 

 ಮುಂದಿನ ದಿನಗಳಲ್ಲಿ ಆರೋಗ್ಯ ಮೂಲಸೌಕರ್ಯಗಳು ಹೆಚ್ಚಲಿವೆ. ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಕ್ರಮ ಕೈಗೊಳ್ಳಲು ಅಧಿಕಾಗಳಿಗೆ ಸೂಚಿಸಲಾಗಿದೆ. ವಿಶೇಷವಾಗಿ ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಹೆಚ್ಚಿದೆ. ಇದೊಂದು ಪಿಡುಗು.ವಿಶ್ವದಲ್ಲಿ ಅತಿ ಹೆಚ್ಚು ಪೌಷ್ಟಿಕ ಆಹಾರದ ಕೊರತೆಯಿಂದ ಮಕ್ಕಳಿಗೆ ಅಂಧತ್ವ  ಭಾರತ ದೇಶದಲ್ಲಿ ಉಂಟಾಗುತ್ತಿದೆ. ಕಟ್ಟ ಕಡೆಯ ವ್ಯಕ್ತಿಗೆ ಆರೋಗ್ಯ ಸಮಸ್ಯೆ ನಿವಾರಿಸಲು ಪ್ರಯತ್ನ ಮಾಡಬೇಕು. ಆರೋಗ್ಯ ಸೇವೆಗಳಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು. ಸಮುದಾಯದ ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದರು.
  
ಆರೋಗ್ಯ ಸೇವೆಯನ್ನು ಪ್ರಾಮಾಣಿಕವಾಗಿ  ಮಾಡಬೇಕು,ಇದರಲ್ಲಿ  ಆಲಸ್ಯ ಬೇಜವಾಬ್ದಾರಿ ಇರಬಾರದು. ವೈದ್ಯಕೀಯ‌ ಕೆಲಸ  ದೇವರು ಮೆಚ್ಚುವ ಕೆಲಸ.  ಕರ್ನಾಟಕ ಆರೋಗ್ಯ ಕರ್ನಾಟಕವಾಗಲಿ ಎಂದು ಮುಖ್ಯಮಂತ್ರಿಗಳು ಆಶಿಸಿದರು. 
 
 ಸಚಿವರಾದ  ಡಾ: ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಬಿ.ಎ.ಬಸವರಾಜ,ಬಿ.ಶ್ರೀರಾಮುಲು,  ಮುನಿರತ್ನ, ಬಿ.ಡಿ.ಎ.ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಸಂಸದ ಪಿ.ಸಿ.ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com