ಯುಪಿಎ ಆಡಳಿತಾವಧಿಯಲ್ಲಿಯೇ ರಾಷ್ಟ್ರೀಯ ಶಿಕ್ಷಣ ನೀತಿ ಕರಡನ್ನು ಸಿದ್ಧಪಡಿಸಲಾಗಿತ್ತು: ಸಚಿವ ಬಿ.ಸಿ.ನಾಗೇಶ್

ರಾಷ್ಟ್ರೀಯ ಶಿಕ್ಷಣ ನೀತಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಬಿ.ಸಿ.ನಾಗೇಶ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ. 
ಸಚಿವ ನಾಗೇಶ್
ಸಚಿವ ನಾಗೇಶ್

ಕಾರವಾರ: ರಾಷ್ಟ್ರೀಯ ಶಿಕ್ಷಣ ನೀತಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಬಿ.ಸಿ.ನಾಗೇಶ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ. 

ಬಂಗಾರಮಕ್ಕಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ಮನಮೋಹನ್ ಸಿಂಗ್ ಸರ್ಕಾರ ಸಿದ್ಧಪಡಿಸಿತ್ತು. ನಾವು ಅದನ್ನು ಅನುಷ್ಠಾನಕ್ಕೆ ತರುತ್ತಿದ್ದೇವಷ್ಟೇ ಎಂದು ಹೇಳಿದ್ದಾರೆ. 

ಈ ಹಿಂದೆ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ಅವರು, ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ತಜ್ಞರು ಮತ್ತು ವಿರೋಧ ಪಕ್ಷಗಳೊಂದಿಗೆ ಯಾವುದೇ ಚರ್ಚೆಯಿಲ್ಲದೆ ಸರ್ಕಾರವು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ ಎಂದು ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ನಾಗೇಶ್ ಅವರು, ಮನಮೋಹನ್ ಸಿಂಗ್ ಅವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಎನ್ಇಪಿ ಬಗ್ಗೆ ಕಾಂಗ್ರೆಸ್'ಗೆ ಯಾವುದೇ ಸಮಸ್ಯೆಗಳಿರಲಿಲ್ಲ. ಇದೀಗ ಅಧಿಕಾರದಲ್ಲಿಲ್ಲ. ಹೀಗಾಗಿ ನೀತಿಯನ್ನು ಆರ್'ಎಸ್ಎಸ್ ತಂತ್ರವೆಂದು ಹೇಳುತ್ತಿದ್ದಾರೆಂದು ಕಿಡಿಕಾರಿದ್ದಾರೆ. 

‘ಕಸ್ತೂರಿ ರಂಗನ್‌ ಅವರಂಥ ಮೇಧಾವಿಯ ನೇತೃತ್ವದಲ್ಲಿ ಸಿದ್ಧಪಡಿಸಲಾದ ನೀತಿಯನ್ನು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ವ್ಯಂಗ್ಯವಾಡುತ್ತಾರೆ. ಮನಮೋಹನ್ ಸಿಂಗ್ ಅವರಿಗೆ 10 ವರ್ಷ ಸಲಹೆಗಾರ ಆಗಿದ್ದವರ ಬಗ್ಗೆಯೇ ಟೀಕಿಸುತ್ತಾರೆ. ಕಸ್ತೂರಿ ರಂಗನ್ ಅವರು ಮನಮೋಹನ್ ಸಿಂಗ್ ಜತೆಗಿದ್ದಾಗ ಸರಿ, ಹೊರ ಬಂದಾಗ ಆರ್‌.ಎಸ್‌.ಎಸ್ ಎಂದು ಅರ್ಥವೇ’ ಎಂದು ಪ್ರಶ್ನಿಸಿದ್ದಾರೆ. 

ಬಿ.ಜೆ.ಪಿ.ಯವರು ಏನೇ ಮಾಡಿದರೂ ಟೀಕಿಸುವ ಕೆಟ್ಟ ಅಭ್ಯಾಸ ಕಾಂಗ್ರೆಸ್‌ನವರದ್ದಾಗಿದೆ. ಕಾಂಗ್ರೆಸ್‌ಗೆ ಆಡಳಿತ ಪಕ್ಷವಾಗಿ ವರ್ತಿಸಿ ಗೊತ್ತಿದೆಯೇ ಹೊರತು ವಿರೋಧ ಪಕ್ಷವಾಗಿ ಗೊತ್ತಿಲ್ಲ. ಎಲ್ಲ ಕಡೆ ಜಾತಿ, ಧರ್ಮವನ್ನು ಅಡ್ಡ ತರುತ್ತಾರೆ. 2015ರಲ್ಲಿ ಜಾರಿ ಮಾಡಲಾದ ಪಠ್ಯಕ್ರಮದ ಪರಿಶೀಲನೆಗೆ ಕಾಂಗ್ರೆಸ್‌ನವರು 2017ರಲ್ಲಿ ಯಾಕೆ ಸಮಿತಿ ಮಾಡಿದ್ದರು? ಮಕ್ಕಳ ಪಠ್ಯ ಸರಿಯಾಗಿದೆಯೇ ಎಂದು ಪರಿಶೀಲಿಸಲು ಸಮಿತಿ ರಚಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಇದೇ ವೇಳೆ 1-5ನೇ ತರಗತಿ ಆರಂಭ ಕುರಿತು ಮಾತನಾಡಿದ ಅವರು, ತಾಂತ್ರಿಕ ಸಲಹಾ ಸಮಿತಿ ಸಲಹೆ ಪಡೆದು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com