ಐದು ಜಿಲ್ಲೆಗಳಿಗೆ ಎತ್ತಿನ ಹೊಳೆ ಯೋಜನೆ; 210 ಎಂಎಲ್ ಡಿ ನೀರು ಪೂರೈಸಲು ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ

ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನ ಹೊಳೆ ಯೋಜನೆಯನ್ನು ಎಷ್ಟೇ ಹಣ ವೆಚ್ಚವಾದರೂ ಕಾರ್ಯಗತ ಮಾಡಲಾಗುವುದು...
ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ
ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ

ಬೆಂಗಳೂರು: ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನ ಹೊಳೆ ಯೋಜನೆಯನ್ನು ಎಷ್ಟೇ ಹಣ ವೆಚ್ಚವಾದರೂ ಕಾರ್ಯಗತ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ವಿಧಾನಸಭೆಗೆ ತಿಳಿಸಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಡಾ.ಜಿ.ಪರಮೇಶ್ವರ್ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಪ್ರಮುಖವಾಗಿ ಭೂಸ್ವಾಧೀನ ಸಮಸ್ಯೆಯನ್ನು ಪರಿಹರಿಸಬೇಕಿದೆ. ಸಮತೋಲಿತ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಿಸಬೇಕಿದೆ. ಹೀಗಾಗಿ 12 ಸಾವಿರ ಕೋಟಿ ರೂ. ಯೋಜನೆ. 23 ಸಾವಿರ ಕೋಟಿ ರೂ.ಗೆ ಏರಿಕೆ ಯಾಗಿದೆ ಎಂದರು.

ಯೋಜನೆಯ ಉದ್ದೇಶ ಸಫಲವಾಗಬೇಕಿದ್ದರೆ, ಜಲಾಶಯಗಳ ಸಾಮರ್ಥ್ಯಯವನ್ನು ಹೆಚ್ಚಿಸದಿದ್ದರೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಪೂರೈಕೆ ಮಾಡಲು ಸಾಧ್ಯವಾಗುವುದಿಲ್ಲ. ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಲು ಸಂಕಲ್ಪ ಮಾಡಿದ್ದು, ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಹೇಳಿದರು.

ಇದಕ್ಕೂ ಮುನ್ನ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಎತ್ತಿನ ಹೊಳೆ ಪ್ರದೇಶಕ್ಕೆ ತಾವು ಭೇಟಿ ನೀಡಿದ್ದು, ಕೆಲವು ಕಡೆ ಭೂಸ್ವಾಧೀನ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಮತ್ತೆ ಕೆಲವು ಕಡೆ ಸಮಸ್ಯೆ ಬಗೆಹರಿಸಲು ಭೂಸ್ವಾಧೀನ ಅಧಿಕಾರಿಗಳಿಗೆ ಗಡವು ನೀಡಲಾಗಿದೆ. ಶೇ.90ರಷ್ಟು ಕಾಮಗಾರಿ ಮುಗಿದಿದೆ. ಇನ್ನೂ ಅನೇಕ ಸಣ್ಣಪುಟ್ಟ ಸಮಸ್ಯೆಗಳಿವೆ. ಇದನ್ನು ಪರಿಹರಿಸಲು ಈ ಭಾಗದ ಎಲ್ಲಾ ಶಾಸಕರ ಸಭೆ ಕರೆದು ಚರ್ಚೆ ಮಾಡಿ ಪ್ರಾಯೋಗಿಕವಾಗಿ ನೀರು ಹರಿಸಿ ಜನರಲ್ಲಿ ವಿಶ್ವಾಸ ಮೂಡಿಸಲಾಗುವುದು ಎಂದರು.

ಭೂ ಸ್ವಾಧೀನ ವಿಚಾರದಲ್ಲಿ ವಿಳಂಬ ಮತ್ತು ಹಣ ಹಾಗೂ ರೈತರ ಸಹಕಾರ ವಿಚಾರದಲ್ಲಿ ಪರಮೇಶ್ವರ್ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.

ತುಮಕೂರು ಜಿಲ್ಲೆ ಕೊರಟಗೆರೆ ಕ್ಷೇತ್ರದಲ್ಲಿ ಭೂ ಸ್ವಾಧೀನ ಸಮಸ್ಯೆಗೆ ನೀವೆ ಕಾರಣ ಎಂದು ಸಚಿವ ಮಾಧುಸ್ವಾಮಿ ನೇರ ಆರೋಪ ಮಾಡಿದರು. ಇದರಿಂದಾಗಿ ಸದನದಲ್ಲಿ ಕೆಲಕಾಲ ಪರಮೇಶ್ವರ್ ಮತ್ತು ಸಚಿವ ಮಾಧುಸ್ವಾಮಿ ನಡುವೆ ಬಿರುಸಿನ ಮಾತಿನ ಚಕಮಕಿ ನಡೆಯಿತು.

ಇದಕ್ಕೂ ಮುನ್ನ ವಿಷಯ ಪ್ರಾಸ್ತಾಪಿಸಿದ ಪರಮೇಶ್ವರ್, 12 ಸಾವಿರ ಕೋಟಿ ಯೋಜನೆ 23 ಸಾವಿರ ಕೋಟಿ ರೂಪಾಯಿಗೇರಲು ಕಾರಣ ಯಾರು? ಕೇವಲ 315 ಕೋಟಿ ರೂ. ವೆಚ್ಚ ಮಾಡಿ ಭೂಸ್ವಾಧೀನ ಸಮಸ್ಯೆ ಬಗೆ ಹರಿಸಿದರೆ ಯೋಜನೆ ಕಾರ್ಯಗತವಾಗುತ್ತದೆ ಎಂದು ಹೇಳಿದರು.

210 ಎಂಎಲ್ ಡಿ ನೀರು ಪೂರೈಸಲು ಸರ್ಕಾರ ಬದ್ಧ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಕೆರೆ ತುಂಬಿಸುವ ಹೆಚ್.ಎನ್.ವ್ಯಾಲಿ ಯೋಜನೆಯಂತೆ 210 ಎಂಎಲ್ ಡಿ ನೀರನ್ನು ಪೂರೈಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ಅವಧಿಯಲ್ಲಿ ವಿ.ಮುನಿಯಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ ಈ ಕುರಿತು ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಮತ್ತು ಸಣ್ಣ ನೀರಾವರಿ ಸಚಿವರೊಂದಿಗೆ ಸಮಾಲೋಚಿಸಿ ಬಾಕಿ ಉಳಿದಿರುವ ಪಂಪ್ ಹೌಸ್ ಕಾಮಗಾರಿಗಳನ್ನು ಪೂರ್ಣ ಮಾಡಿ ಜತೆಗೆ ಕೆಲ ಪಂಪ್ ಹೌಸ್ ಗಳನ್ನು ಮೇಲ್ದರ್ಜೆಗೆ ಏರಿಸಿ ನೀರು ತುಂಬಿಸಲಾಗುವುದು ಎಂದರು.

ಇದಕ್ಕೂ ಮುನ್ನ ಸಚಿವ ಜೆ.ಸಿ.ಮಾಧುಸ್ವಾಮಿ, ಹೆಚ್.ಎನ್.ವ್ಯಾಲಿ ಯೋಜನೆಯ ದ್ವಿತೀಯ ಹಂತದಲ್ಲಿ 65 ಕೆರೆಗಳಿಗೆ ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಒಟ್ಟು 44 ಕೆರೆಗಳಿಗೆ ನೀರು ಹರಿಸಲು ಯೋಜನೆ ಸಿದ್ದವಾಗಿದ್ದು ಇವುಗಳ ಪೈಕಿ ಈಗಾಗಲೇ 26 ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಉಳಿದ ಕೆರೆಗಳಿಗೆ ಹಂತ ಹಂತವಾಗಿ ನೀರು ಹರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಸಣ್ಣ ನೀರಾವರಿ ವ್ಯಾಪ್ತಿಗೆ ಬರುವ ಕೆರೆಗಳಲ್ಲಿ ಹೂಳು ತುಂಬಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೆಚ್.ಎನ್.ವ್ಯಾಲಿ ಯೋಜನೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ 44 ಕೆರೆಗಳಲ್ಲಿ ಹೂಳು ತೆಗೆದು ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ಉತ್ತರಿಸಿದರು.

ನೀರಾವರಿ ಯೋಜನೆಗಳಲ್ಲಿ ತಾರತಮ್ಯ ಮಾಡುವುದಿಲ್ಲ: ಗೋವಿಂದ ಕಾರಜೋಳ
ನೀರಾವರಿ ಯೋಜನೆಗಳ ಜಾರಿ ವಿಚಾರದಲ್ಲಿ ಯಾವುದೇ ಜಿಲ್ಲೆಗೆ ತಾರತಮ್ಯ ಮಾಡುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಧಾನಸಭೆಗೆ ಮಂಗಳವಾರ ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ಸಿನ ಈಶ್ವರ ಖಂಡ್ರೆ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅನುದಾನದ ಲಭ್ಯತೆ ನೋಡಿಕೊಂಡು ನೀರಾವರಿ ಯೋಜನೆಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಾಗುವುದು ಎಂದರು.

ಬೀದರ್ ಜಿಲ್ಲೆಯಲ್ಲಿ ನೀರಾವರಿ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಸರ್ಕಾರದ ಉತ್ತರ ಸಮಾಧಾನ ತಂದಿಲ್ಲ. ಕಾಲ ವಿಳಂಬವಾಗುವುದರಿಂದ ಯೋಜನೆಗಳ ಮೊತ್ತ ಹೆಚ್ಚಾಗಿ ಯಾವುದೇ ಯೋಜನೆಗಳ ಲಾಭ ರೈತರಿಗೆ ಮುಟ್ಟುವುದಿಲ್ಲ ಎಂದರು.

ಇದೇ ವಿಚಾರವಾಗಿ ಬೀದರ್ ಜಿಲ್ಲೆಯ ಬಂಡಪ್ಪ ಕಾಶಂಪೂರ್ ಮತ್ತು ಶರಣು ಸಲಗಾರ್ ಮಾತನಾಡಿ, ಕೆರೆ ತುಂಬಿಸುವ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ಕಳೆದ ಬಜೆಟ್ ನಲ್ಲಿ ಕೆರೆ ತುಂಬಿಸುವ ಯೋಜನೆಗೆ 75 ಕೋಟಿ ರೂ. ಮೀಸಲಾಗಿತ್ತು. ಅದನ್ನು ಪೂರ್ಣ ಬಳಕೆ ಮಾಡಬೇಕು ಬೇರೆ ಕಡೆ ವಿನಿಯೋಗಿಸಬಾರದು ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com