ವಿಧಾನಸಭೆಯಲ್ಲಿ ಗ್ರಾಮ ಸ್ವರಾಜ್ ಮತ್ತು ಗ್ರಾಮ ಪಂಚಾಯ್ತಿ ತಿದ್ದುಪಡಿ ಮಸೂದೆಗೆ ಅಂಗೀಕಾರ

ಕಾಂಗ್ರೆಸ್ ನ ತೀವ್ರ ವಿರೋಧದ ನಡುವೆ ವಿಧಾನಸಭೆಯಲ್ಲಿ ಗ್ರಾಮ ಸ್ವರಾಜ್ ಮತ್ತು ಗ್ರಾಮ ಪಂಚಾಯ್ತಿ ತಿದ್ದುಪಡಿ ಮಸೂದೆಗೆ ಅಂಗೀಕಾರ ಸಿಕ್ಕಿದೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಂಗಳೂರು: ಕಾಂಗ್ರೆಸ್ ನ ತೀವ್ರ ವಿರೋಧದ ನಡುವೆ ವಿಧಾನಸಭೆಯಲ್ಲಿ ಗ್ರಾಮ ಸ್ವರಾಜ್ ಮತ್ತು ಗ್ರಾಮ ಪಂಚಾಯ್ತಿ ತಿದ್ದುಪಡಿ ಮಸೂದೆಗೆ ಅಂಗೀಕಾರ ಸಿಕ್ಕಿದೆ.

ವಿಧೇಯಕ ಮಂಡನೆ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ವಿಧೇಯಕ ಮೂಲಕ ತಾಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಪುನರ್ವಿಂಗಡನೆ ಮಾಡಲಾಗುತ್ತದೆ. 

ಈ ತಿದ್ದುಪಡಿ ಮಸೂದೆ ಜಾರಿಗೆ ಬಂದ ತಕ್ಷಣ ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಎಲ್ಲಾ ಕ್ಷೇತ್ರ ಪುನರ್ವಿಂಗಡನೆ ಅಧಿಸೂಚನೆ ರದ್ದಾಗಲಿದೆ. ಕ್ಷೇತ್ರ ಪುನರ್ವಿಂಗಡನೆ ಆಧಾರದಲ್ಲಿ ಜಾರಿಯಲ್ಲಿರುವ ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಮೀಸಲಿರಿಸುವ ಎಲ್ಲಾ ಅಧಿಸೂಚನೆಗಳು ರದ್ದಾಗಲಿದೆ. 

ಇನ್ನು ಇಂದು ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರವಾಗುತ್ತಿದ್ದಂತೆ ಕಲಾಪವನ್ನು ನಾಳೆಗೆ ಮುಂದೂಡಲಾಯಿತು. ನಾಳೆ ಬೆಳಗ್ಗೆ 10.30ಕ್ಕೆ ಕಲಾಪ ಆರಂಭವಾಗಲಿದೆ. 

ಕಾಂಗ್ರೆಸ್ ಹಾಗೂ ಜೆಡಿಎಸ್ ತೀವ್ರ ವಿರೋಧ:
ವಿಧಾನಸಭೆಯಲ್ಲಿಂದು ಗ್ರಾಮ ಸ್ವರಾಜ್ ಮತ್ತು ಗ್ರಾಮ ಪಂಚಾಯಿತಿ ತಿದ್ದುಪಡಿ ಮಸೂದೆಗೆ ವಿಧಾನಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ತಿದ್ದುಪಡಿ ಮಸೂದೆಗೆ ಸಂಬಂಧಿಸಿ ಸೋಮವಾರ ನ್ಯಾಯಾಲಯದ ಮುಂದೆ ಹೋಗಬೇಕಿರುವುದರಿಂದ ಇಂದೇ ಮಸೂದೆ ಅಂಗೀಕಾರಕ್ಕೆ ಆಡಳಿತ ಸದಸ್ಯರು ಅವಸರ ತೋರಿದರಾದರೂ, ವಿಪಕ್ಷ ಸದಸ್ಯರು ಚರ್ಚೆಗೆ ಪಟ್ಟು ಹಿಡಿದರು. ಹಾಗೂ ಸದುದ್ದೇಶವಲ್ಲದ ಮಸೂದೆಗೆ ತಿದ್ದುಪಡಿ ತರುವ ತೀರ್ಮಾನ ಹಿಂಪಡೆಯಲು ಒತ್ತಾಯಿಸಿದರು.

ಮಸೂದೆ ತಿದ್ದುಪಡಿಯಿಂದಾಗಿ ಅಧಿಕಾರ ವಿಕೇಂದ್ರೀಕರಣದ ಉದ್ದೇಶಕ್ಕೆ ಧಕ್ಕೆಯಾಗಲಿದೆ, ಸಂವಿಧಾನದ ಆಶಯಕ್ಕೆ ವಿರೋಧ ಎಂದು ಪ್ರತಿಪಕ್ಷ ನಾಯಕರಾದ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಯತೀಂದ್ರ ಸಿದ್ದರಾಮಯ್ಯ, ಜೆಡಿಎಸ್ ಶಾಸಕ ರೇವಣ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಕೇವಲ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಮುಂದೂಡುವ ದುರುದ್ದೇಶದಿಂದಲೇ ಈ ಮಸೂದೆಗೆ ತಿದ್ದುಪಡಿ ತರಲಾಗುತ್ತಿದೆ ಎಂಬ ಕೂಗು ಕೇಳಿಬಂದಿತು.

ಶಾಸಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮೀಸಲಾತಿ ಬಗ್ಗೆ ಯಾರೂ ಹೃದಯಪೂರ್ವಕವಾಗಿ ಕೆಲಸ ಮಾಡುತ್ತಿಲ್ಲ. ಮೀಸಲಾತಿ ಎಂಬ ಅಸ್ತ್ರವನ್ನು ರಾಜಕೀಯ ವಿರೋಧಿಗಳನ್ನು ಮುಗಿಸಲು ಅಥವಾ ನಮಗೆ ಜೀ ಹುಜೂರ್ ಎನ್ನುವವರಿಗೆ ಮೀಸಲಾತಿ ಕೊಡುವುದು ಮುಂದುವರಿದಿದೆ ಎಂದು ಖೇದ ವ್ಯಕ್ತಪಡಿಸಿದರು.

ಮೀಸಲಾತಿಯ ಮೂಲ ಉದ್ದೇಶವು ಹಿಂದುಳಿದವರನ್ನು ಮುಂದೆ ತರುವುದು. ಆದರೆ ಈ ಉದ್ದೇಶ ಈಡೇರುತ್ತಿಲ್ಲ.

ಸ್ವಾರ್ಥಕ್ಕಾಗಿ, ಅಧಿಕಾರಕ್ಕಾಗಿ ನಡೆಯಬಾರದ್ದು ನಡೆಯುತ್ತಿದೆ. ಅಧಿಕಾರ ವಿಕೇಂದ್ರೀಕರಣಕ್ಕೆ ಮನಸ್ಸು ಮಾಡುತ್ತಿಲ್ಲ. ಗ್ರಾಮ ಸ್ವರಾಜ್ ಮತ್ತು ಗ್ರಾಮ ಪಂಚಾಯಿತಿ ತಿದ್ದುಪಡಿ ಮಸೂದೆಯ ಹಿಂದೆಯೂ ಇದೇ ಬಗೆಯ ಉದ್ದೇಶವಿದೆ ಎಂದು ಖಂಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com