ಕೊನೆಗೂ ಬೋನಿಗೆ ಬಿದ್ದ ಚಿರತೆ: ಸಮಾಧಾನದ ನಿಟ್ಟುಸಿರು ಬಿಟ್ಟ ಹುಬ್ಬಳ್ಳಿ-ಧಾರವಾಡ ಜನತೆ  

ಕಬ್ಬಿನ ಗದ್ದೆಯಲ್ಲಿ ಕಳೆದ 6 ದಿನಗಳಿಂದ ಅಡಗಿ ಕುಳಿತಿದ್ದ ಚಿರತೆ ಧಾರವಾಡದ ಕಾವಲ್ಗೇರಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಕೊನೆಗೂ ಬೋನಿಗೆ ಸಿಕ್ಕಿಬಿದ್ದಿದೆ. ಹುಬ್ಬಳ್ಳಿ ನಗರ ಮತ್ತು ಕಾವಲ್ಗೇರಿ ಗ್ರಾಮದ ಜನರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.
ಬೋನಿಗೆ ಬಿದ್ದ ಚಿರತೆ
ಬೋನಿಗೆ ಬಿದ್ದ ಚಿರತೆ

ಹುಬ್ಬಳ್ಳಿ: ಕಬ್ಬಿನ ಗದ್ದೆಯಲ್ಲಿ ಕಳೆದ 6 ದಿನಗಳಿಂದ ಅಡಗಿ ಕುಳಿತಿದ್ದ ಚಿರತೆ ಧಾರವಾಡದ ಕಾವಲ್ಗೇರಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಕೊನೆಗೂ ಬೋನಿಗೆ ಸಿಕ್ಕಿಬಿದ್ದಿದೆ. ಹುಬ್ಬಳ್ಳಿ ನಗರ ಮತ್ತು ಕಾವಲ್ಗೇರಿ ಗ್ರಾಮದ ಜನರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಕಳೆದ 15ರಂದು ಚಿರತೆ ಕಾಣಿಸಿಕೊಂಡಿತ್ತು. ಸೆಪ್ಟೆಂಬರ್ 18ರಂದು ರಾಜನಗರದ ಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ ಮತ್ತು 20ರಂದು ಹುಬ್ಬಳ್ಳಿಯ ಶಿರಾಡಿ ನಗರದಲ್ಲಿ ಪತ್ತೆಯಾಗಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿತ್ತು. ನಂತರ ಧಾರವಾಡದ ಹೊರವಲಯ ಕಾವಲ್ಗೇರಿ ಗ್ರಾಮದಲ್ಲಿ ಕಾಣಿಸಿಕೊಂಡಿತು.

ಗ್ರಾಮದ ಶಿವಪ್ಪ ಉಪ್ಪರ್ ಎಂಬುವವರ ಕಬ್ಬಿನ ತೋಟದಲ್ಲಿ ಅಡಗಿ ಕುಳಿತ ಚಿರತೆ ಮತ್ತಷ್ಟು ಭೀತಿ ಹುಟ್ಟಿಸಿತು. ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ಆರು ದಿನಗಳಿಂದ ತೋಟವನ್ನು ಸುತ್ತುವರಿದು ಚಿರತೆಯನ್ನು ಹಿಡಿಯಲು ಹೊಂಚುಹಾಕುತ್ತಿದ್ದರು. ಎರಡು ಪಂಜರಗಳನ್ನು ಹಿಡಿದು ಹಾಕಲು ತಂದಿದ್ದರು. ಕೊನೆಗೂ ಇಂದು ಬೆಳಗ್ಗೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 

ಚಿರತೆಯಿಂದ ಮನುಷ್ಯರಿಗೆ ಮತ್ತು ಸಾಕುಪ್ರಾಣಿಗಳಿಗೆ ತೊಂದರೆಯಾಗಿಲ್ಲ, ಆದರೆ ಅವಳಿ ನಗರದಲ್ಲಿ ಒಂದೆರಡು ಬೀದಿನಾಯಿಗಳನ್ನು ಮತ್ತು ಬೀದಿ ಹಂದಿಗಳನ್ನು ಬೇಟೆಯಾಡಿದೆ.

ಕಳೆದ 11 ದಿನಗಳ ಶೋಧ ಕಾರ್ಯಾಚರಣೆಯಲ್ಲಿ ಚಿರತೆಯನ್ನು ಯಾವುದೇ ಹಾನಿ ಮಾಡದೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಪಂಜರದಲ್ಲಿ ಮಾಂಸವನ್ನಿಟ್ಟು ಕಬ್ಬಿನ ಗದ್ದೆಯಿಂದ ಹೊರಬರಲು ಕಾದು ಕುಳಿತಿದ್ದರು. ನಿನ್ನೆ ಇಲಾಖೆಯ 10 ಸಿಬ್ಬಂದಿ ತಂಡ ತೋಟಕ್ಕೆ ಹೋಗಿ ಕಾದು ಕುಳಿತಿತ್ತು. ಅದೃಷ್ಟವಶಾತ್ ಚಿರತೆ ಪಂಜರದೊಳಗೆ ಬಂದು ಸಿಕ್ಕಿಹಾಕಿಕೊಂಡಿದೆ.

ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಯಶ್ಪಾಲ್ ಕ್ಷಿಸಗರ್, ಚಿರತೆಗೆ ಯಾವುದೇ ಹಾನಿಯಾಗದೆ ಹಿಡಿದಿರುವುದು ಖುಷಿಯ ವಿಚಾರ. ಇದು ನಾಲ್ಕೈದು ವರ್ಷದ ಗಂಡು ಚಿರತೆ, ಚಿರತೆಯ ಆರೋಗ್ಯ ತಪಾಸಣೆ ಮಾಡಿ ಮೇಲಾಧಿಕಾರಿಗಳ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು, ಚಿರತೆ ಆರೋಗ್ಯವಾಗಿದ್ದರೆ ಕಾಡಿಗೆ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com