ಬೀಗ ಜಡಿಯುತ್ತಿದ್ದಂತೆ ಎಚ್ಚೆತ್ತ ಮಂತ್ರಿ ಮಾಲ್ ಆಡಳಿತ ಮಂಡಳಿ: ಬಿಬಿಎಂಪಿಗೆ ಸ್ಥಳದಲ್ಲಿಯೇ 5 ಕೋಟಿ ರೂ. ಡಿಡಿ ಪಾವತಿ
ಕೋಟಿಗಟ್ಟಲೆ ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದ ಮಂತ್ರಿಮಾಲ್ ಗೆ ಬಿಬಿಎಂಪಿ ಗುರುವಾರ ಬೀಗ ಜಡಿಯುತ್ತಿದ್ದಂತೆ ಎಚ್ಚೆತ್ತ ಆಡಳಿತ ಮಂಡಳಿ ಕೂಡಲೇ 5 ಕೋಟಿ ರೂಪಾಯಿ ಡಿಡಿ ನೀಡಿದೆ.
Published: 30th September 2021 12:09 PM | Last Updated: 30th September 2021 02:38 PM | A+A A-

ಮಂತ್ರಿ ಮಾಲ್ ಒಳಗೆ
ಬೆಂಗಳೂರು: ಕೋಟಿಗಟ್ಟಲೆ ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದ ಮಂತ್ರಿಮಾಲ್ ಗೆ ಬಿಬಿಎಂಪಿ ಗುರುವಾರ ಬೀಗ ಜಡಿಯುತ್ತಿದ್ದಂತೆ ಎಚ್ಚೆತ್ತ ಆಡಳಿತ ಮಂಡಳಿ ಕೂಡಲೇ 5 ಕೋಟಿ ರೂಪಾಯಿ ಡಿಡಿ ನೀಡಿದೆ.
2017ರ ನಂತರ ಇದುವರೆಗೆ ಮಂತ್ರಿ ಮಾಲ್ ಆಡಳಿತ ಮಂಡಳಿ ಆಸ್ತಿ ತೆರಿಗೆ ಕಟ್ಟಿರಲಿಲ್ಲ. ಈ ಬಗ್ಗೆ ಬಿಬಿಎಂಪಿ ಹಲವು ಬಾರಿ ನೊಟೀಸ್ ನೀಡಿದ್ದರೂ ಕ್ಯಾರೇ ಅಂದಿರಲಿಲ್ಲ. 27 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಆಡಳಿತ ಮಂಡಳಿ ಈ ಹಿಂದೆ ನೀಡಿದ್ದ ಚೆಕ್ ಬೌನ್ಸ್ ಆಗಿ ಕೇಸು ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.
ಇಂದು ಬೆಳಗ್ಗೆ ಬಿಬಿಎಂಪಿ ಜಂಟಿ ಆಯುಕ್ತ ಶಿವಸ್ವಾಮಿ ನೇತೃತ್ವದಲ್ಲಿ ಸಿಬ್ಬಂದಿ ನೇರವಾಗಿ ಮಂತ್ರಿ ಮಾಲ್ ಗೆ ಹೋಗಿ ಮುಖ್ಯ ದ್ವಾರಕ್ಕೆ ಬೀಗ ಜಡಿದರು. ಕೂಡಲೇ ಎಚ್ಚೆತ್ತುಕೊಂಡ ಮಂತ್ರಿ ಮಾಲ್ ಆಡಳಿತ ಮಂಡಳಿ ತಕ್ಷಣವೇ 5 ಕೋಟಿ ರೂಪಾಯಿ ಡಿಡಿಯನ್ನು ನೀಡಿದೆ.
ಈ ಹಿನ್ನೆಲೆಯಲ್ಲಿ ಹಾಕಿದ್ದ ಬೀಗವನ್ನು ಬಿಬಿಎಂಪಿ ತೆಗೆದಿದ್ದು, ಮುಂದಿನ ದಿನಗಳಲ್ಲಿ ಸರಿಯಾಗಿ ಆಸ್ತಿ ತೆರಿಗೆ ಪಾವತಿ ಮಾಡದಿದ್ದರೆ ಮತ್ತೆ ಬೀಗ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ನಗರದ ಹೃದಯ ಭಾಗ ಮೆಜೆಸ್ಟಿಕ್ ಹತ್ತಿರವೇ ಮಲ್ಲೇಶ್ವರಂಗೆ ಸ್ವಾಗತ ಕೋರುವ ರೀತಿಯಲ್ಲಿ ಮಂತ್ರಿಮಾಲ್ ಇದ್ದು ಹೊರಗೆ ಝಗಮಗಿಸುತ್ತಾ ಮಧ್ಯಮ ವರ್ಗವನ್ನು ಶಾಪಿಂಗ್ ಗೆ ಕೈಬೀಸಿ ಕರೆಯುತ್ತದೆ. ನಗರದ ಪ್ರತಿಷ್ಠಿತ ಮಾಲ್ ಗಳಲ್ಲಿ ಇದೂ ಒಂದು.