ಅಂಕನಾಲ್ ಗ್ರಾಮದ ತಾತ್ಕಾಲಿಕ ಆಸ್ಪತ್ರೆಯಲ್ಲಿ ಅಧಿಕಾರಿಗಳು ಗ್ರಾಮಸ್ಥರನ್ನು ಪರಿಶೀಲಿಸುತ್ತಿರುವುದು
ಅಂಕನಾಲ್ ಗ್ರಾಮದ ತಾತ್ಕಾಲಿಕ ಆಸ್ಪತ್ರೆಯಲ್ಲಿ ಅಧಿಕಾರಿಗಳು ಗ್ರಾಮಸ್ಥರನ್ನು ಪರಿಶೀಲಿಸುತ್ತಿರುವುದು

ಬಳ್ಳಾರಿಯ ಅಂಕನಲ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 50 ಮಂದಿ ಅಸ್ವಸ್ಥ: ಜಿಲ್ಲೆಯಲ್ಲಿ 15 ದಿನಗಳಲ್ಲಿ ಎರಡನೇ ಪ್ರಕರಣ

ಕಲುಷಿತ ನೀರು ಕುಡಿದು 50ಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ಥಕ್ಕೀಡಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಅಂಕನಾಲ್ ಗ್ರಾಮದಲ್ಲಿ ನಿನ್ನೆ ನಡೆದಿದೆ.
Published on

ಬಳ್ಳಾರಿ: ಕಲುಷಿತ ನೀರು ಕುಡಿದು 50ಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ಥಕ್ಕೀಡಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಅಂಕನಾಲ್ ಗ್ರಾಮದಲ್ಲಿ ನಿನ್ನೆ ನಡೆದಿದೆ.

ಕಳೆದ ಹದಿನೈದು ದಿನಗಳಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ನಡೆಯುತ್ತಿರುವ ಎರಡನೇ ಪ್ರಕರಣವಿದು. ಹತ್ತು ದಿನಗಳ ಹಿಂದೆ ಗೋಣಲ್ ತಾಲ್ಲೂಕಿನಲ್ಲಿ ಬಾಲಕಿಯೊಬ್ಬಳು ಕಲುಷಿತ ನೀರು ಸೇವಿಸಿ ಅಸ್ವಸ್ಥಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು. ಅಲ್ಲದೆ ಆ ಸಮಯದಲ್ಲಿ 30ಕ್ಕೂ ಹೆಚ್ಚು ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಗೋಣಲ್ ಪ್ರಕರಣದ ನಂತರ ಜಿಲ್ಲಾಡಳಿತ ಇಂತಹ ಘಟನೆ ಮರುಕಳಿಸದಂತೆ ಕ್ರಮಗಳನ್ನು ಕೈಗೊಂಡಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ನಿರಂತರವಾಗಿ ವೈದ್ಯರು ಪರಿಸ್ಥಿತಿಯ ನಿಗಾವಹಿಸುತ್ತಿದ್ದರು. ಇಷ್ಟೆಲ್ಲಾ ಕ್ರಮಗಳನ್ನು ಕೈಗೊಂಡಿದ್ದರೂ ಕೂಡ ಮತ್ತೊಂದು ಅಂತಹದೇ ಪ್ರಕರಣ ಮರುಕಳಿಸಿದೆ. ಅಂಕನಾಲ್ ಗ್ರಾಮದಲ್ಲಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದಾಗ ಬಂದ ವರದಿಯೆಂದರೆ ಕಲುಷಿತ ನೀರು ಸೇವಿಸಿ ಹೀಗೆ ಜನರು ಅಸ್ವಸ್ಥಕ್ಕೀಡಾಗಿದ್ದಾರೆ ಎಂದು.

ಹಾಗಾದರೆ ಈ ಕಲುಷಿತ ನೀರು ಎಲ್ಲಿ ಸೇರ್ಪಡೆಯಾಗುತ್ತದೆ ಎಂದು ಜಿಲ್ಲಾಡಳಿತ ಪತ್ತೆಹಚ್ಚಲು ಪ್ರಯತ್ನಿಸುತ್ತಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ ಜನಾರ್ದನ್ ಹೆಚ್ ಎಲ್, ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಎಲ್ಲಾ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮಸ್ಥರಿಗೆ ಈಗ ಸಂಸ್ಕರಿತ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಇನ್ನು ಕೆಲವು ದಿನಗಳವರೆಗೆ ಅದನ್ನು ಮುಂದುವರಿಸಲಾಗುವುದು. ಕುದಿಸಿ ಆರಿಸಿದ ನೀರನ್ನು ಮಾತ್ರ ಸೇವಿಸುವಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ ಎಂದರು.

ಗ್ರಾಮದಲ್ಲಿ 20 ಬೆಡ್ ಗಳ ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸಲಾಗಿದ್ದು ವೈದ್ಯರ ತಂಡ ಹಗಲು ರಾತ್ರಿ ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗಿದೆ. ಸಿಬ್ಬಂದಿಗಳೊಂದಿಗೆ ಮೂರು ಆಂಬ್ಯುಲೆನ್ಸ್ ಗಳನ್ನು ಮೀಸಲಿಡಲಾಗಿದೆ. ಸುಮಾರು 20 ಮಂದಿ ಈಗ ಗುಣಮುಖರಾಗುತ್ತಿದ್ದು ಉಳಿದವರನ್ನು ಮನೆಗೆ ಕಳುಹಿಸಲಾಗಿದೆ. ಹಿರಿಯ ಅಧಿಕಾರಿಗಳನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ ಎಂದರು.

ನೀರು ಕಲುಷಿತಗೊಳ್ಳಲು ಕಾರಣಗಳನ್ನು ಹುಡುಕಲಾಗುತ್ತಿದೆ. ಗ್ರಾಮಸ್ಥರು ಭೀತಿಗೊಳಗಾಗುವ ಅವಶ್ಯಕತೆಯಿಲ್ಲ. ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳುತ್ತಿದೆ. ಯಾವುದಾದರೂ ಅನಾರೋಗ್ಯ ಸಮಸ್ಯೆ ಕಾಡಿದರೆ ತಾತ್ಕಾಲಿಕ ಆಸ್ಪತ್ರೆಗಳಿಗೆ ತಕ್ಷಣ ದಾಖಲಾಗುವಂತೆ ಜಿಲ್ಲಾಡಳಿತ ಸೂಚಿಸುತ್ತದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com