ವಿಧಾನಸೌಧ ಬಳಿ ಸಿದ್ದರಾಮೋತ್ಸವ ಫ್ಲೆಕ್ಸ್ ಹಾಕಿದ್ದಕ್ಕೆ ಇಬ್ಬರು ನಾಯಕರ ವಿರುದ್ಧ ಕೇಸು ಬಿಜೆಪಿ ಕುತಂತ್ರ: ಕಾಂಗ್ರೆಸ್ ಆರೋಪ

ಸರ್ಕಾರದ ನಿರ್ದೇಶನ ಪ್ರಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿರೋಧ ಪಕ್ಷದವರಿಗೆ ಸಂಬಂಧಿಸಿದ ಫ್ಲೆಕ್ಸ್, ಬ್ಯಾನರ್ ಗಳನ್ನು ಮಾತ್ರ ತೆಗೆದುಹಾಕುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸರ್ಕಾರದ ನಿರ್ದೇಶನ ಪ್ರಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿರೋಧ ಪಕ್ಷದವರಿಗೆ ಸಂಬಂಧಿಸಿದ ಫ್ಲೆಕ್ಸ್, ಬ್ಯಾನರ್ ಗಳನ್ನು ಮಾತ್ರ ತೆಗೆದುಹಾಕುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಸಿದ್ದರಾಮೋತ್ಸವ ಸಮಯದಲ್ಲಿ ವಿಧಾನಸೌಧ ಸುತ್ತಮುತ್ತ ಹಾಕಲಾಗಿದ್ದ ಫ್ಲೆಕ್ಸ್ ಗಳಿಗೆ ಸಂಬಂಧಿಸಿದಂತೆ ಸಹಾಯಕ ಕಂದಾಯಾಧಿಕಾರಿ ಬಿ ವಿ ವೀಣಾ ಅವರ ದೂರಿನನ್ವಯ ವಿಧಾನಸೌಧ ಪೊಲೀಸರು ಇಬ್ಬರು ಕಾಂಗ್ರೆಸ್ ನಾಯಕರಾದ ರಮೇಶ್ ಬಾಬು ಟಿ ಎಸ್ ಮತ್ತು ಜಯಬಾಲಾ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ಶಾಸಕ ಜಮೀರ್ ಖಾನ್ ಅವರ ಬೆಂಬಲಿಗರು ಫ್ಲೆಕ್ಸ್ ಹಾಕಿರುವುದರ ವಿರುದ್ಧ ಕೇಸು ದಾಖಲಿಸಿಕೊಳ್ಳುವಂತೆ ಆಗಸ್ಟ್ 1ರಂದು ಸೂಚನೆ ಬಂದಿತ್ತು ಎಂದು ಅಧಿಕಾರಿ ವೀಣಾ ಹೇಳುತ್ತಾರೆ. ಅನಧಿಕೃತ ಫ್ಲೆಕ್ಸ್ ಗಳನ್ನು, ಬ್ಯಾನರ್ ಗಳನ್ನು ಹಾಕುವುದರ ವಿರುದ್ಧ ಹೈಕೋರ್ಟ್ ನ ನಿಯಮ ಮೀರಲಾಗುತ್ತಿದ್ದರೂ ರಾಜಕೀಯ ನಾಯಕರು, ವಿಐಪಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಇತ್ತೀಚೆಗೆ ಬಿಬಿಎಂಪಿ ವಿರುದ್ಧ ದೂರುಗಳು ಕೇಳಿಬಂದಿದ್ದವು. ಅನಧಿಕೃತ ಬ್ಯಾನರ್, ಕಟೌಟ್, ಫ್ಲೆಕ್ಸ್ ಗಳಿಗೆ ಸಂಬಂಧಪಟ್ಟಂತೆ 28 ಎಫ್ಐಆರ್ ಗಳನ್ನು ದಾಖಲಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಕಳೆದ ತಿಂಗಳು ಬಿಜೆಪಿ ನಾಯಕ ಸಿ ಟಿ ರವಿಯವರ ಬ್ಯಾನರ್ ಗೆ ಹಾನಿಮಾಡಿದ್ದಕ್ಕಾಗಿ ದ್ವೇಷಕ್ಕಾಗಿ ಈಗ ನಮ್ಮ ವಿರುದ್ಧ ಕೇಸು ದಾಖಲು ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನ ಮಾಧ್ಯಮ ಮತ್ತು ಸಂವಹನ ಪ್ರಧಾನ ಕಾರ್ಯದರ್ಶಿ ಲಾವಣ್ಯ ಬಲ್ಲಾಳ್, ಅನಧಿಕೃತವಾಗಿ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಹಾಕುವುದು ತಪ್ಪು. ನಮ್ಮ ಪಕ್ಷ ಕಾನೂನನ್ನು ಗೌರವಿಸುತ್ತದೆ. ಕಾನೂನು ಎಲ್ಲರಿಗೂ ಒಂದೇ ಅಲ್ಲವೇ, ಬಿಜೆಪಿಯವರಿಗೆ ಇದು ಅನ್ವಯವಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಜೆಡಿಎಸ್ ಬೆಂಗಳೂರು ನಗರಾಧ್ಯಕ್ಷ ಆರ್ ಪ್ರಕಾಶ್, ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದು ಇದು ಕ್ಷುಲ್ಲಕ ಸಾರ್ವಜನಿಕ ಪ್ರಚಾರ ತಂತ್ರವಷ್ಟೆ ಎಂದಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಗಳನ್ನು ಹಾಕಬಾರದೆಂದು ಹೈಕೋರ್ಟ್ ನಿಯಮ ಮತ್ತು ಬಿಬಿಎಂಪಿ ಕಾಯ್ದೆ ಇದ್ದರೂ ಅದನ್ನು ಮುರಿದು ಕ್ಷುಲ್ಲಕ ರಾಜಕೀಯ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com