'ಗಾಂಧಿಯನ್ನೇ ಕೊಂದವರು ಇನ್ನು ನನ್ನನ್ನು ಬಿಡುತ್ತಾರೆಯೇ, ಕ್ಷಮೆ ಕೇಳಿದ್ದ ಸಾವರ್ಕರ್ ರನ್ನು ಪೂಜಿಸುತ್ತಾರೆ': ಸಿದ್ದರಾಮಯ್ಯ ವ್ಯಂಗ್ಯ
ಚಿಕ್ಕಮಗಳೂರು: ದೇಶದ ಪಿತಾಮಹ ಮಹಾತ್ಮಾ ಗಾಂಧೀಜಿಯನ್ನೇ ಕೊಂದವರು ನನ್ನನ್ನು ಬಿಡುತ್ತಾರಾ ಎಂದು ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಇಂದು ಶುಕ್ರವಾರ ಚಿಕ್ಕಮಗಳೂರು ತಾಲೂಕಿನ ಬಾಸಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಸತ್ಯ ಹೇಳುವುದನ್ನು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟು ಜೈಲಿನಿಂದ ಹೊರಬಂದವರು. ವಿ ಡಿ ಸಾವರ್ಕರ್ ಆಗಿದ್ದ ಅವರ ಫೋಟೋ ಹಿಡಿದುಕೊಂಡು ಇಂದು ವೀರ ಸಾವರ್ಕರ್ ಎಂದು ಪೂಜಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ನಿನ್ನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಮೊಟ್ಟೆ ಎಸೆದ ಘಟನೆಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯ ಪೊಲೀಸ್ ಇಲಾಖೆ ಸಂಘಪರಿವಾರದ ಕೈಗೊಂಬೆಯಾಗಿದೆ. ಪಕ್ಷದ ಪುಂಡರ ಗೂಂಡಾಗಿರಿಗೆ ಅವಕಾಶ ನೀಡಿ, ಕೈಕಟ್ಟಿಕೊಂಡು ತಮಾಷೆ ನೋಡುವ ಪೊಲೀಸರ ಕರ್ತವ್ಯ ಲೋಪ ಖಂಡಿಸಿ ಈ ತಿಂಗಳ 26 ರಂದು ಕೊಡಗಿನ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಬಿಜೆಪಿಯ ಗೂಂಡಾಗಿರಿಗೆ ಹೋರಾಟದ ಮೂಲಕವೇ ತಕ್ಕ ಉತ್ತರ ಕೊಡುತ್ತೇವೆ’ ಎಂದು ಗುಡುಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ