ಎಸ್‌ಪಿಜಿ ಭದ್ರತಾ ಪಡೆಗೆ ಈಗ ಮುಧೋಳ ನಾಯಿ ಸೇರ್ಪಡೆ

ವರ್ಷದಿಂದ ವರ್ಷಕ್ಕೆ ಮುಧೋಳ ಹೌಂಡ್ ಎಂದು ಕರೆಯುವ ಮುದೋಳ ನಾಯಿಯ ಕೀರ್ತಿ ಹೆಚ್ಚುತ್ತಿದ್ದು, ಇದೀಗ ಗಣ್ಯರ ಭದ್ರತೆ ನೋಡಿಕೊಳ್ಳುವ ವಿಶೇಷ ರಕ್ಷಣಾ ಪಡೆ(ಎಸ್‌ಪಿಜಿ)ಗೆ ಸೇರ್ಪಡೆಯಾಗಿದೆ.
ಮುಧೋಳ ನಾಯಿ
ಮುಧೋಳ ನಾಯಿ

ಬಾಗಲಕೋಟೆ: ವರ್ಷದಿಂದ ವರ್ಷಕ್ಕೆ ಮುಧೋಳ ಹೌಂಡ್ ಎಂದು ಕರೆಯುವ ಮುದೋಳ ನಾಯಿಯ ಕೀರ್ತಿ ಹೆಚ್ಚುತ್ತಿದ್ದು, ಇದೀಗ ಗಣ್ಯರ ಭದ್ರತೆ ನೋಡಿಕೊಳ್ಳುವ ವಿಶೇಷ ರಕ್ಷಣಾ ಪಡೆ(ಎಸ್‌ಪಿಜಿ)ಗೆ ಸೇರ್ಪಡೆಯಾಗಿದೆ.

ಎಸ್ ಪಿಜಿ ಎರಡು ಮುಧೋಳ ನಾಯಿಮರಿಗಳನ್ನು ಕೋರಿ ಬೀದರ್‌ನ ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಸಂಪರ್ಕಿಸಿತ್ತು. ಈ ನಾಯಿಗಳನ್ನು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಬರುವ ಮುಧೋಳ ಸಮೀಪದ ತಿಮ್ಮಾಪೂರ ಬಳಿ ಇರುವ ಮುಧೋಳ ಶ್ವಾನ ಸಂಶೋಧನಾ ಕೇಂದ್ರ(ಸಿಆರ್‌ಐಸಿ)ಕ್ಕೆ ಭೇಟಿ ನೀಡಿ, ಮುಧೋಳ ನಾಯಿ ಮರಿಗಳ ಪರಿಶೀಲನೆ ನಡೆಸಿ ಬಳಿಕ ಎರಡು ಗಂಡು ಜಾತಿಯ ಮುಧೋಳ ನಾಯಿಗಳನ್ನ ಪಡೆದುಕೊಂಡು ತೆರಳಿದೆ.

ಈ ವಾರದ ಆರಂಭದಲ್ಲಿ, ಎಸ್‌ಪಿಜಿಯ ವಿಶೇಷ ತಂಡವು ತಿಮ್ಮಾಪುರದ ಸಿಆರ್‌ಐಸಿಗೆ ಭೇಟಿ ನೀಡಿ ಎರಡು ಗಂಡು ನಾಯಿಮರಿಗಳನ್ನು ಖರೀದಿಸಿತ್ತು. ತರಬೇತಿಯ ನಂತರ, ಈ ಎರಡು ದೇಸಿ ನಾಯಿಮರಿಗಳನ್ನು ಎಸ್‌ಪಿಜಿಗೆ ಸೇರಿಸಿಕೊಳ್ಳಲಾಗುವುದು ಎಂದು ಸಿಆರ್‌ಐಸಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ನಲ್ಲಿ ಮುಧೋಳ ನಾಯಿಗಳ ಮಹತ್ವವನ್ನು ಸಾರುವ ಮೂಲಕ ಆತ್ಮ ನಿರ್ಭರ ಭಾರತದ ಭಾಗವಾಗಿ ಸ್ವಾವಲಂಬಿ ಭಾರತಕ್ಕಾಗಿ ಮನೆಯಲ್ಲಿ ಸಾಕುವುದಾದರೆ ಮುಧೋಳ ತಳಿಯಂತಹ ನಾಯಿಗಳನ್ನ ಸಾಕಿ, ದೇಶಿಯ ತಳಿಗಳ ಪಾಲನೆ, ಪೋಷಣೆ ಮಾಡಿ ಎಂದು ಹೇಳಿದ್ದರು. 

ವಿಶೇಷ ಕಾರ್ಯ ಶಕ್ತಿ, ಆಕಾರ, ಬಣ್ಣ, ಗುಣಗಳ ವ್ಯಕ್ತಿತ್ವದಿಂದಲೇ ದೇಶಾದ್ಯಂತ ಹೆಸರು ಮಾಡಿ ಮುದೋಳ ನಾಯಿಗಳು ಭಾರತೀಯ ಸೇನೆ, ಸಿಆರ್ಪಿಎಪ್, ಮತ್ತು ವಾಯುಸೇನೆಯಲ್ಲೂ ಸೇರ್ಪಡೆಗೊಂಡು ಗಮನ ಸೆಳೆದಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com