ಹಾರವಾಡ (ಅಂಕೋಲಾ): ಹಾಲಕ್ಕಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಬಂಟ್ ವೆಂಕುಗೌಡ ಅವರ ಕುಟುಂಬವನ್ನು ಅವರ ಗ್ರಾಮವಾದ ಹಾರವಾಡದಿಂದ ಗಡಿಪಾರು ಮಾಡಿ ದಶಕಗಳೇ ಕಳೆದಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ, ವೆಂಕುವಿನ ಸೋದರ ಸಂಬಂಧಿಯೂ ಆಗಿರುವ ಗ್ರಾಮದ ಮುಖಂಡ ಆನಂದ ಸಿದ್ದೇಗೌಡರನ್ನು ತಮ್ಮ ಪುತ್ರ ಸಂಜಯ್ ಬಂಟ್ ಗೌಡನ ಮದುವೆಗೆ ಆಹ್ವಾನಿಸಿರಲಿಲ್ಲ. ಇದಕ್ಕಾಗಿ ವೆಂಕುವಿನ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ.
2012ರ ಫೆಬ್ರುವರಿ 15ರಂದು ವೆಂಕುವಿನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರವನ್ನು ವಿಧಿಸಲಾಯಿತು. ಅಂದಿನಿಂದ ಈ ಕುಟುಂಬವು ಭಾರಿ ಬೆಲೆ ತೆರುತ್ತಲೇ ಇದೆ.
ಹಾರವಾಡವು ಅಂಕೋಲಾದ ಒಂದು ಪುಟ್ಟ ಗ್ರಾಮವಾಗಿದ್ದು, 200 ಮನೆಗಳಿವೆ. ಇಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದಕ್ಕೆ ಸೇರಿದ ಸುಮಾರು 1,000 ಜನರು ವಾಸಿಸುತ್ತಿದ್ದಾರೆ.
ಕುಟುಂಬಕ್ಕೆ ದಿನಸಿ, ಕುಡಿಯುವ ನೀರಿಗೂ ನಿಷೇಧ
'ನನ್ನ ತಂದೆ ಬಹಿಷ್ಕಾರದಿಂದ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದರು. ಇದೇ ಕೊರಗಿನಲ್ಲಿಯೇ 2014ರಲ್ಲಿ ನಿಧನರಾದರು. ಅವರ ಮರಣದ ನಂತರವೂ, ಸಿದ್ದೇಗೌಡರು ನಮ್ಮ ಮೇಲೆ ಯಾವುದೇ ಕನಿಕರವನ್ನು ತೋರಿಸಲಿಲ್ಲ ಮತ್ತು ಬಹಿಷ್ಕಾರವನ್ನು ತೆರವುಗೊಳಿಸಲು ನಿರಾಕರಿಸಿದರು' ಎಂದು ವೆಂಕು ಗೌಡರ ಮಗ ವಿಜಯ್ ಗೌಡ ಹೇಳುತ್ತಾರೆ.
'ಅವರೆಲ್ಲರೂ ನಮ್ಮದೇ ಸಮುದಾಯದವರು. ಆದರೆ ಈಗ ನಮ್ಮನ್ನು ಬಹಿಷ್ಕರಿಸಿದ ಕಾರಣ ನಮ್ಮೊಂದಿಗೆ ಮಾತನಾಡಬೇಡಿ ಎಂದು ಗ್ರಾಮಸ್ಥರಿಗೆ ಹೇಳಿದ್ದಾರೆ. ನಮ್ಮ ಗ್ರಾಮದ ಮತ್ತೊಬ್ಬ ನಾಗಪ್ಪ ನಾಗುಗೌಡ ಎಂಬಾತನನ್ನೂ ಗಡಿಪಾರು ಮಾಡಲಾಗಿದೆ' ಎಂದು ವಿಜಯ್‌ನ ತಾಯಿ ಗಂಗೆ ಬಂಟಗೌಡ ತಿಳಿಸಿದ್ದಾರೆ.
ಬಹಿಷ್ಕಾರಕ್ಕೆ ಒಳಗಾಗಿರುವ ಈ ಕುಟುಂಬಕ್ಕೆ ಗ್ರಾಮದ ಯಾವುದೇ ಅಂಗಡಿಯಲ್ಲೂ ದಿನಸಿಯನ್ನು ಮಾರಾಟ ಮಾಡುತ್ತಿಲ್ಲ. ಕುಡಿಯುವ ನೀರನ್ನೂ ಕೂಡ ಸಿಗಂದಂತೆ ಮಾಡಲಾಗಿದೆ. ಹೀಗಾಗಿ, ಈ ಕುಟುಂಬವು ಅವರ್ಸಾ ಗ್ರಾಮದಿಂದ ದಿನಸಿ ತರುತ್ತಿದೆ. ಈ ಬಗ್ಗೆ ಕುಟುಂಬದವರು ಎರಡು ಬಾರಿ ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ವಿಜಯ್ ಹೇಳಿದ್ದಾರೆ.
ಈ ಆರೋಪವನ್ನು ಹಾರವಾಡ ಗ್ರಾಮದ ಮುಖಂಡ ಸಿದ್ದೇಗೌಡ ತಳ್ಳಿಹಾಕಿದ್ದು, ತಮ್ಮ ಸೋದರ ಸಂಬಂಧಿಯನ್ನು ಗ್ರಾಮದಿಂದ ಗಡಿಪಾರು ಮಾಡಿಲ್ಲ. 'ಅವರು ನಮಗೆ ಅಗೌರವ ತೋರಿದ್ದಾರೆ ಎಂದಷ್ಟೇ ನಾವು ಅವರಿಗೆ ಹೇಳಿದ್ದೇವೆ' ಎಂದು ಅವರು ತಿಳಿಸಿದರು.
Advertisement