ದಸರಾ ಸಂದರ್ಭ 2017ರಲ್ಲಿ ಸಿದ್ದರಾಮಯ್ಯ ಮಾಂಸ ಸೇವಿಸಿ ಚಾಮುಂಡಿ ಪುಷ್ಪಾರ್ಚನೆಯಲ್ಲಿ ಪಾಲ್ಗೊಂಡಿದ್ದರು: ಪ್ರತಾಪ್ ಸಿಂಹ
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಮಾಂಸಹಾರ ಸೇವನೆ ವಿವಾದ ಮತ್ತೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. 2017ರಲ್ಲಿ ಮೈಸೂರು ದಸರಾ ಮೊದಲು ಚಾಮುಂಡಿ ಬೆಟ್ಟದಲ್ಲಿ ನಾಡದೇವತೆಗೆ ಪೂಜೆ ನಡೆಯುವುದಕ್ಕೆ ಮೊದಲು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಮಾಂಸಹಾರ ಸೇವನೆ ಮಾಡಿ ನಂದಿ ಧ್ವಜ ಪೂಜೆಯಲ್ಲಿ ಪಾಲ್ಗೊಂಡಿದ್ದರು, ಚಾಮುಂಡಿ ಬೆಟ್ಟದಲ್ಲಿ ಪುಷ್ಪಾರ್ಚನೆಯಲ್ಲಿ ಪಾಲ್ಗೊಂಡಿದ್ದರು ಎಂಬ ಸ್ಫೋಟಕ ಹೇಳಿಕೆಯನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ಮತ್ತು ಮೈಸೂರು ಮಾಜಿ ಮೇಯರ್ ಎಂ ಜೆ ರವಿಕುಮಾರ್ ಇಂದು ಸೋಮವಾರ ನೀಡಿದ್ದಾರೆ.
ಮೊನ್ನೆ ಕೊಡಗಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯನವರು ಮಧ್ಯಾಹ್ನ ನಾಟಿ ಕೋಳಿ ಸಾರು ತಿಂದು ಸಂಜೆ ಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ದರು ಎಂಬುದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ಸಿದ್ದರಾಮಯ್ಯನವರು ದೇವರು ಇಂಥದ್ದನ್ನೇ ತಿಂದು ಬಾ ಎಂದು ಹೇಳಿದ್ದಾರಾ, ಹಿಂದಿನ ದಿನ ಮಾಂಸ ತಿಂದು ಮರುದಿನ ಹಾಗಾದರೆ ಹೋಗಬಹುದಾ ಎಂದು ಪ್ರಶ್ನೆ ಮಾಡಿದ್ದರು.
ಈ ಮಾತು ಹಲವರನ್ನು ಕೆರಳಿಸಿದೆ. ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿಯೇ ಚರ್ಚೆಯಾಗುತ್ತಿದೆ. 2017ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮೀನು ತಿಂದು ಧರ್ಮಸ್ಥಳಕ್ಕೆ ಹೋಗಿದ್ದ ವಿಚಾರ ಮತ್ತೊಮ್ಮೆ ಸದ್ದು ಮಾಡುತ್ತಿದೆ.
ಆದರೆ ಇದೀಗ ಮಾಂಸಯುದ್ಧಕ್ಕೆ ಟ್ವಿಸ್ಟ್ ಸಿಕ್ಕಿದೆ. ಸಿದ್ದರಾಮಯ್ಯನವರು ತಮ್ಮ ತವರು ಜಿಲ್ಲೆ ಮೈಸೂರಿನಲ್ಲಿ 2017ರ ದಸರಾ ಹಬ್ಬಕ್ಕೆ ಮೈಸೂರು ಲಲಿತ ಮಹಲ್ ಹೊಟೇಲ್ ನಲ್ಲಿ ನಾಟಿ ಕೋಳಿ ಸಾರು ತಿಂದು ದಸರಾ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ್ದರು. ಇದಕ್ಕೆ ನಾನೇ ಸಾಕ್ಷಿ ನಂತರ ಅವರಿಗೆ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಅವಕಾಶ ದೇವರು ನೀಡಲಿಲ್ಲ, ಅಲ್ಲದೆ ಮಹಿಷ ಉತ್ಸವ ಎಂಬ ಕೆಟ್ಟ ಸಂಪ್ರದಾಯವನ್ನು ಆಚರಿಸಿದರು ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಅವರೇ ನಿಮ್ಮ ಶ್ರೀಮತಿಯವರ ಬಳಿ ಮಾಂಸ ತಿಂದು ಚಾಮುಂಡಿ ತಾಯಿ ದರ್ಶನಕ್ಕೆ ಅವರು ಹೋಗುತ್ತಾರಾ ಅಂತಾ ಕೇಳಿ. ನಿಮ್ಮ ಮಾತಿಗೆ ನಿಮ್ಮ ಶ್ರೀಮತಿ ಅವರ ಸಹಮತ ಇದ್ಯಾ ಅಂತಾ ಕೇಳಿ ಎಂದು ಪ್ರತಾಪ್ ಸಿಂಹ ಕೇಳಿದ್ದಾರೆ.
ಸಿದ್ದರಾಮಯ್ಯ ಅವರು ಸಿದ್ದರಾಮನ ಹುಂಡಿಯಲ್ಲಿ ಸಿದ್ದರಾಮೇಶ್ವರ ಜಾತ್ರೆಯಲ್ಲಿ ಸಿಹಿ ಊಟ ಮಾಡಿಸಿದ್ದು ಯಾಕೆ? ಮಾಂಸದ ಊಟ ಯಾಕೆ ಮಾಡಿಸಲಿಲ್ಲ ಎಂದು ಪ್ರಶ್ನಿಸಿದ ಸಂಸದ ಪ್ರತಾಪ್ ಸಿಂಹ, ನಿಮ್ಮ ಆಪ್ತ ಜಮೀರ್ ಖಾನ್ ಗೆ ನೀವು ಹಂದಿ ಮಾಂಸ ತಿನ್ನಬಾರದು ಅಂತಾ ದೇವರು ಹೇಳಿಲ್ಲ ಅಂತಾ ಹೇಳಿ ನೋಡೋಣ ಎಂದು ಸವಾಲು ಎಸೆದರು.
ಸಿದ್ದರಾಮಯ್ಯ ಅವರು ಅವತ್ತು ವೀರಶೈವ – ಲಿಂಗಾಯತ ಧರ್ಮ ಒಡೆದರು. ಇವತ್ತು ಮಾಂಸ ತಿಂದು ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಬಸವ ಅನುಯಾಯಿಗಳ ನಂಬಿಕೆ ಒಡೆದಿದ್ದಾರೆ ಎಂದು ಟೀಕಿಸಿದರು.
ಸಂಸದ ಪ್ರತಾಪ್ ಸಿಂಹ ಮಾತಿಗೆ ಮೈಸೂರು ಮಾಜಿ ಮೇಯರ್ ಎಂ ಜೆ ರವಿಕುಮಾರ್ ದನಿಗೂಡಿಸಿದ್ದಾರೆ. 2017ರಲ್ಲಿ ದಸರಾ ಅಂಬಾರಿ ಉತ್ಸವಕ್ಕೆ ಮುನ್ನ ಲಲಿತ ಮಹಲ್ ಹೊಟೇಲ್ ನಲ್ಲಿ ಸಿದ್ದರಾಮಯ್ಯನವರು ಮಾಂಸ ತಿಂದಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರಲ್ಲಿ ಚರ್ಚೆ ಮಾಡಿದ್ದೆ. ನಾವು ಜ್ಯೂಸ್ ಕುಡಿದು ಸುಮ್ಮನಾಗಿದ್ದೆವು ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ