ಶಿವಮೊಗ್ಗ: ತನ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಪತಿಯನ್ನು ಜೈಲಿಗೆ ಕಳುಹಿಸಲು ನಕಲಿ ಪತ್ರ ಬರೆದ ಭೂಪ!
ಶಿವಮೊಗ್ಗ: ವಿಲಕ್ಷಣ ಘಟನೆಯೊಂದರಲ್ಲಿ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ಆಕೆಯ ಪತಿಯನ್ನು ಕೋಮುಗಲಭೆಗೆ ಸಂಚು ಪ್ರಕರಣದಲ್ಲಿ ಸಿಲುಕಿಸಿ, ಆಕೆಯ ಪತಿ ಜೈಲು ಪಾಲಾದ ನಂತರ ಆಕೆಯೊಂದಿಗೆ ವಾಸಿಸಲು ಯತ್ನಿಸಿ ಪೊಲೀಸರ ಅಥಿತಿಯಾಗಿದ್ದಾನೆ.
ಇತ್ತೀಚೆಗೆ ಕೋಮುಗಲಭೆಗೆ ಸಾಕ್ಷಿಯಾಗಿರುವ ಶಿವಮೊಗ್ಗ ನಗರದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಮೂರು ಕೊಲೆಗಳು ಮತ್ತು ಕೋಮು ಘರ್ಷಣೆಗಳ ಬಗ್ಗೆ ಅನಾಮಧೇಯ ಪತ್ರದ ಮೂಲಕ ಎಚ್ಚರಿಕೆ ನೀಡಲಾಗಿತ್ತು. ಪತ್ರದ ಜಾಡು ಹಿಡಿದ ಪೊಲೀಸರು ನಕಲಿ ಪತ್ರ ಬರೆದ ಅಯೂಬ್ ಎಂಬಾತನನ್ನು ಬಂಧಿಸಿದ್ದಾರೆ.
ಮೊಹಮ್ಮದ್ ಫೈಜಲ್ ಎಂಬಾತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಅಯೂಬ್ ನಕಲಿ ಪತ್ರ ಬರೆದಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಆಗಸ್ಟ್ 20ರಂದು ರಾತ್ರಿ 8 ಗಂಟೆ ಸುಮಾರಿಗೆ ಗಾಂಧಿ ಬಜಾರ್‌ನ ಶ್ರೀ ಗಂಗಾ ಪರಮೇಶ್ವರಿ ದೇವಸ್ಥಾನದಲ್ಲಿ ಇರಿಸಲಾಗಿದ್ದ ಪತ್ರವನ್ನು ಅಂಗಡಿ ಮಾಲೀಕರೊಬ್ಬರು ಪತ್ತೆ ಮಾಡಿದ್ದಾರೆ. ಗಣೇಶ ಹಬ್ಬವನ್ನು ಹಾಳು ಮಾಡಲು ಮೂವರು ವ್ಯಕ್ತಿಗಳು ಸಂಚು ರೂಪಿಸಿದ್ದು, ಮೂವರನ್ನು ಹತ್ಯೆ ಮಾಡುವ ಸಂಚು ರೂಪಿಸಲಾಗಿದೆ ಎಂದು ಅನಾಮಧೇಯ ವ್ಯಕ್ತಿ ಪತ್ರದಲ್ಲಿ ಉಲ್ಲೇಖಿಸಿದ್ದರು.
ಅವರು ತಮ್ಮ ಗುರಿ ಸಾಧಿಸಲು ಮಂಗಳೂರಿನಿಂದ ಜನರನ್ನು ಕರೆತರಲು ಯೋಜಿಸುತ್ತಿದ್ದು, ಈ ಮೂವರಲ್ಲಿ ಮೊಹಮ್ಮದ್ ಫೈಝಲ್ ಒಬ್ಬರು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇತ್ತೀಚೆಗಷ್ಟೇ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷನ ಸ್ನೇಹಿತ, ಮಾರ್ವಾರ್ಡಿ ಬಟ್ಟೆ ಅಂಗಡಿ ಮಾಲೀಕ ಹಾಗೂ ಓರ್ವ ಯುವಕನನ್ನು ಹತ್ಯೆ ಮಾಡಲು ಮೂವರು ಯೋಜನೆ ರೂಪಿಸಿದ್ದರು. ಫೈಝಲ್ ಗಾಂಜಾ ಸೇವಿಸಿ ಮಾರಾಟ ಮಾಡುತ್ತಿದ್ದು, ರೌಡಿಸಂನಲ್ಲಿ ತೊಡಗಿದ್ದಾನೆ ಎಂದು ಆಯೂಬ್ ತನ್ನ ಪತ್ರದಲ್ಲಿ ತಿಳಿಸಿದ್ದನು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ. ತನಿಖೆಯ ಸಂದರ್ಭದಲ್ಲಿ, ಅಯೂಬ್ ನಕಲಿ ಪತ್ರ ಬರೆದಿರುವುದು ಮತ್ತು ಪತ್ರದಲ್ಲಿನ ಆತನ ಆರೋಪಗಳು ಸುಳ್ಳು ಎಂದು ಪೊಲೀಸರು ಕಂಡುಕೊಂಡಿದ್ದಾರೆ.
ವದಂತಿಗಳನ್ನು ಹರಡಿದ್ದಕ್ಕಾಗಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ ಎಂ ಲಕ್ಷ್ಮಿ ಪ್ರಸಾದ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಆರೋಪಿ ಅಯೂಬ್ ಫೈಝಲ್ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಪತ್ರದಲ್ಲಿ ಫೈಝಲ್ ಬಗ್ಗೆ ಉಲ್ಲೇಖಿಸಿರುವ ಆರೋಪಿ, ಫೈಝಲ್ ಕೋಮುಗಲಭೆ ಸೃಷ್ಟಿಸಿ ಜನರ ಹತ್ಯೆಗೆ ಸಂಚು ರೂಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಫೈಝಲ್ ನನ್ನು ಪೊಲೀಸರು ಬಂಧಿಸಬೇಕು ಎಂಬುದು ಆತನ ಯೋಚನೆಯಾಗಿತ್ತು ಎಂದು ಎಸ್ ಪಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ