ಕರ್ನಾಟಕದ 3 ಜಿಲ್ಲೆಗಳಲ್ಲಿ ವಾರ್ಷಿಕ ಕಬ್ಬಿಣ ಅದಿರು ಉತ್ಪಾದನಾ ಮಿತಿ ಹೆಚ್ಚಿಸಿದ ಸುಪ್ರೀಂ ಕೋರ್ಟ್

ಮಹತ್ವದ ಬೆಳವಣಿಗೆಯಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯದ ಕರ್ನಾಟಕದ 3 ಜಿಲ್ಲೆಗಳ ಗಣಿಗಾರಿಕೆ ಮಿತಿಯನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯದ ಕರ್ನಾಟಕದ 3 ಜಿಲ್ಲೆಗಳ ಗಣಿಗಾರಿಕೆ ಮಿತಿಯನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.

ಹೌದು.. ಕರ್ನಾಟಕದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆಯ ಮಿತಿ ಸುಪ್ರೀಂ ಕೋರ್ಟ್ ಹೆಚ್ಚಿಸಿದ್ದು, ಗಣಿಗಾರಿಕೆ ಮತ್ತು ಪರಿಸರ ಸಂರಕ್ಷಣೆ ಎರಡೂ ಜೊತೆಯಾಗಿಯೇ ನಡೆಯಬೇಕೆಂದು ಅದು ಸೂಚಿಸಿದೆ. ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ವಾರ್ಷಿಕ ಕಬ್ಬಿಣದ ಅದಿರು ಉತ್ಪಾದನಾ ಮಿತಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಹೆಚ್ಚಿಸಿದ್ದು, ಈ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠವು ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ವಾರ್ಷಿಕ ಕಬ್ಬಿಣದ ಅದಿರು ಉತ್ಪಾದನೆ ಮಿತಿಯನ್ನು 7 ಎಂಎಂಟಿಯಿಂದ 15 ಎಂಎಂಟಿಗೆ ಏರಿಸಿದೆ.

ಬಳ್ಳಾರಿಗೆ ಸಂಬಂಧಿಸಿದಂತೆ, ಇದು ವರ್ಷಕ್ಕೆ 28 MMT ನಿಂದ 35 MMT ಗೆ ಮಿತಿಯನ್ನು ಹೆಚ್ಚಿಸಿದೆ. ಬಳ್ಳಾರಿ ಗಣಿಗಳಲ್ಲಿ ಅನುಮತಿಸಲಾದ 28 ಮಿಲಿಯನ್ ಮೆಟ್ರಿಕ್ ಟನ್‌ಗಳ ಮಿತಿಯನ್ನು ಈಗ 35 ಮಿಲಿಯನ್ ಮೆಟ್ರಿಕ್ ಟನ್‌ಗಳಿಗೆ ಹೆಚ್ಚಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. 

ಈ ವರ್ಷದ ಮೇ ತಿಂಗಳಿನಲ್ಲಿ ಕರ್ನಾಟಕದ ಮೂರು ಜಿಲ್ಲೆಗಳಲ್ಲಿನ ಗಣಿಗಳಿಂದ ಕಬ್ಬಿಣದ ಅದಿರು ರಫ್ತು ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ತೆಗೆದುಹಾಕಿತ್ತು. ಈ ಹಿಂದೆ ಇ-ಹರಾಜಿನ ಮೂಲಕ ಕಟ್ಟುನಿಟ್ಟಾಗಿ ಮಾರಾಟ ಮಾಡುತ್ತಿರುವುದಕ್ಕೆ ವಿರುದ್ಧವಾಗಿ ಗಣಿಗಾರರಿಗೆ ನ್ಯಾಯಾಲಯವು ಅಗೆದ ಗಣಿಗಳನ್ನು ನೇರ ಮಾರಾಟದ ಮೂಲಕ ಮಾರಾಟ ಮಾಡಲು ಅವಕಾಶ ನೀಡಿತ್ತು. ಪರಿಸರ ನಾಶದ ಕಾರಣದಿಂದ 2011ರಲ್ಲಿ ಸುಪ್ರೀಂ ಕೋರ್ಟ್‌ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಗಣಿಗಾರಿಕೆಗೆ ನಿಷೇಧ ವಿಧಿಸಿತ್ತು. ಇದಲ್ಲದೆ, ಗಣಿಗಳ ರಫ್ತಿನ ಮೇಲೆ ಕೂಡ ನಿಷೇಧ ಹೇರಲಾಗಿತ್ತು.

ಪೀಠವು ಕೇಂದ್ರ ಸರ್ಕಾರದ ನಿಲುವನ್ನು ಗಮನಿಸಿ ಕಬ್ಬಿಣದ ಅದಿರು ರಫ್ತಿನ ಮೇಲಿನ ನಿರ್ಬಂಧವನ್ನು ತೆಗೆದುಹಾಕಿತು ಮತ್ತು ಅಧಿಕಾರಿಗಳು ವಿಧಿಸಿರುವ ಷರತ್ತುಗಳನ್ನು ಗಮನಿಸುವಂತೆ ಸಂಸ್ಥೆಗಳಿಗೆ ಸೂಚಿಸಿತು. "ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಅರ್ಜಿದಾರರು ಮಾಡಿದ ಮನವಿಯನ್ನು ಅನುಕೂಲಕರವಾಗಿ ಪರಿಗಣಿಸಿ ಮತ್ತು ಬಳ್ಳಾರಿ, ತುಮಕೂರು ಮತ್ತು ಜಿಲ್ಲೆಗಳಲ್ಲಿರುವ ವಿವಿಧ ಗಣಿಗಳಲ್ಲಿ ಮತ್ತು ಸ್ಟಾಕ್ ಯಾರ್ಡ್ಗಳಲ್ಲಿ ಈಗಾಗಲೇ ಅಗೆದ ಕಬ್ಬಿಣದ ಅದಿರಿನ ಸಂಗ್ರಹದ ರಾಶಿಯನ್ನು ಮಾರಾಟ ಮಾಡಲು ಅನುಮತಿ ನೀಡಲು ನಾವು ಒಲವು ತೋರುತ್ತೇವೆ ಎಂದು ಪೀಠ ಹೇಳಿತು.

ಮೂರು ಜಿಲ್ಲೆಗಳಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಯ ಮೇಲಿನ ಸೀಲಿಂಗ್ ಮಿತಿಯನ್ನು ತೆಗೆದುಹಾಕಲು ಸುಪ್ರೀಂ ಕೋರ್ಟ್ ನೇಮಿಸಿದ ಕೇಂದ್ರೀಯ ಅಧಿಕಾರ ಸಮಿತಿ (ಸಿಇಸಿ) ಸಹ ಒಲವು ತೋರಿತ್ತು. ಆದಾಗ್ಯೂ, ಮಿತಿಯನ್ನು ತೆರವುಗೊಳಿಸುವ ಬದಲು ನ್ಯಾಯಾಲಯ ಮಿತಿ ಏರಿಕೆಗೆ ನಿರ್ಧರಿಸಿದೆ.  ಈ ಹಿಂದೆ ಮೇ 20 ರಂದು, ಇ-ಹರಾಜು ಪ್ರಕ್ರಿಯೆಯನ್ನು ಆಶ್ರಯಿಸದೆಯೇ ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಈಗಾಗಲೇ ಅಗೆದ ಕಬ್ಬಿಣದ ಅದಿರನ್ನು ರಾಜ್ಯದ ಹೊರಗೆ ಮಾರಾಟ ಮಾಡಲು ಮತ್ತು ಈಗಾಗಲೇ ಅಗೆದ ಕಬ್ಬಿಣದ ಅದಿರನ್ನು ರಫ್ತು ಮಾಡಲು ಗಣಿಗಾರಿಕೆ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com