ಮದರಸಾಗಳಲ್ಲಿನ ಶಿಕ್ಷಣ ಸ್ವರೂಪದ ಬಗ್ಗೆ ಮಾಹಿತಿಯಿಲ್ಲ; ಭೇಟಿ ನೀಡಿ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ: ಬಿ.ಸಿ ನಾಗೇಶ್

ರಾಷ್ಟ್ರೀಯ ಶಿಕ್ಷಣ ನೀತಿ-2020’ ಅನುಸಾರ ‘ಬಾಲ್ಯ ಪೂರ್ವ ಆರೈಕೆ ಮತ್ತು ಶಿಕ್ಷಣ’ವನ್ನು ರಾಜ್ಯದ 20 ಸಾವಿರ ಅಂಗನವಾಡಿ ಕೇಂದ್ರದಲ್ಲಿ ಆರಂಭಿಸಲಾಗುತ್ತಿದೆ. ಮದರಸಾಗಳಲ್ಲೂ ಕೂಡ ‘ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡುತ್ತೇವೆ ಎಂದು  ಸಚಿವ ಬಿ ಸಿ ನಾಗೇಶ್‌ ಹೇಳಿದರು.
ಬಿ.ಸಿ ನಾಗೇಶ್
ಬಿ.ಸಿ ನಾಗೇಶ್
Updated on

ಬೆಂಗಳೂರು: ರಾಜ್ಯದ ಒಂದಷ್ಟು ಮದರಸಾಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ‘ಶಿಕ್ಷಣ ಹಕ್ಕು ಕಾಯ್ದೆ’ ಅನುಸಾರ ಔಪಚಾರಿಕ ಶಿಕ್ಷಣ ದೊರೆಯುತ್ತಿದೆಯೇ ಎಂಬುದನ್ನು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿರುವುದಾಗಿ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.

ನಗರದ ಸರ್ವ ಶಿಕ್ಷಣ ಅಭಿಯಾನ ಕಚೇರಿಯಲ್ಲಿ ಬುಧವಾರ ತಮ್ಮ ಇಲಾಖಾ ಅಧಿಕಾರಿಗಳೊಂದಿಗೆ ‘ಮದರಸಾಗಳಲ್ಲಿ ಔಪಚಾರಿಕ ಶಿಕ್ಷಣ’ದ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆದ ಬಳಿಕ ವಿಜ್ಞಾನ ಮತ್ತು ಗಣಿತ ಕುರಿತು ಔಪಚಾರಿಕ ಶಿಕ್ಷಣ ಪಡೆಯಲು ಹತ್ತಿರದ ಶಾಲೆಗಳಿಗೆ ವಿದ್ಯಾರ್ಥಿಗಳು ಹಾಜರಾಗಬೇಕು ಎಂಬ ನಿಯಮವಿದೆ.

ಆದರೆ, ಮದರಸಾದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು, ಯಾವ ಪ್ರಮಾಣದಲ್ಲಿ ಔಪಚಾರಿಕ ಶಿಕ್ಷಣ ಪಡೆಯುತ್ತಿದ್ದಾರೆಂಬ ಸ್ಪಷ್ಟ ಮತ್ತು ನಿಖರ ಮಾಹಿತಿ ಲಭ್ಯವಿಲ್ಲ. ಆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ರಾಜ್ಯದಲ್ಲಿರುವ ಮದರಸಾಗಳಲ್ಲಿನ ಶಿಕ್ಷಣದ ಸ್ವರೂಪ ತಿಳಿಯುವ ಅಗತ್ಯವಿದೆ ಎಂದರು. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದೇನೆ. ಅನುದಾನಿತ, ಅನುದಾನರಹಿತ ಹಾಗೂ ಖಾಸಗಿ ಮದರಸಾಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಸಿಗಬೇಕಾಗ ಶಿಕ್ಷಣ ಸಿಗುತ್ತಿದೆಯೇ? ಇಲ್ಲವಾದರೆ ಯಾವ ರೀತಿಯ ಶಿಕ್ಷಣ ನೀಡಲಾಗುತ್ತಿದೆ ಎಂಬ ಕುರಿತು ಮದರಾಸಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದೊಂದಿಗೆ ಸಂಘಟನೆಗಳು ಕೈಜೋಡಿಸಬೇಕು ಎಂದು ಸಚಿವರು ಹೇಳಿದರು. ಇಂಡಿಯನ್ ಅಕಾಡೆಮಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನಿಂದ ನವೀಕರಣಗೊಂಡ ಐದು ಬಿಬಿಎಂಪಿ ಮತ್ತು ಸರ್ಕಾರಿ ಶಾಲೆಗಳನ್ನು ಉದ್ಘಾಟಿಸಿದರು. ಶಾಲೆಗಳ ಅಭಿವೃದ್ಧಿಯನ್ನು ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸಂಘಗಳ ಸಹಕಾರದೊಂದಿಗೆ ಮಾಡಬೇಕು. ಶಾಲೆಗಳ ಮೂಲಸೌಕರ್ಯಗಳನ್ನು ಸುಧಾರಿಸಲು ಮತ್ತು ಅವುಗಳ ಅಭಿವೃದ್ಧಿಯನ್ನು ಹೆಚ್ಚಿಸಲು ಸಂಸ್ಥೆಗಳು ಮತ್ತು ಸಂಘಗಳು ಮುಂದೆ ಬರಬೇಕು ಎಂದು ಅವರು ಹೇಳಿದರು.

ಶಾಲೆಗಳ ಅಭಿವೃದ್ಧಿ ನಡೆಯುತ್ತಿರುವಾಗ ಅವುಗಳ ಸಂರಕ್ಷಣೆಗೆ ಮಹತ್ವ ನೀಡಬೇಕು ಎಂದು ತಿಳಿಸಿದರು. ಶಿಕ್ಷಕರು ಹಾಗೂ ಪಾಲಕರು ತಮ್ಮ ಶಾಲಾ ಆವರಣದಲ್ಲಿನ ಕೊಠಡಿ ಹಾಗೂ ಶೌಚಾಲಯಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮಹತ್ವದ ಕುರಿತು ಮಕ್ಕಳಿಗೆ ತಿಳಿಹೇಳಬೇಕು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com