ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ತನಿಖೆ ಆರಂಭ, ಬಾಲಕಿಯರಿಗೆ ವೈದ್ಯಕೀಯ ಪರೀಕ್ಷೆ

ಮುರುಘಾ ಮಠದ ಮಠಾಧೀಶರಾದ ಡಾ.ಶಿವಮೂರ್ತಿ ಮುರುಘಾ ಶರಣರು ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭವಾಗಿದ್ದು, ಸಂತ್ರಸ್ಥ ಬಾಲಕಿಯರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚಿತ್ರದುರ್ಗ: ಮುರುಘಾ ಮಠದ ಮಠಾಧೀಶರಾದ ಡಾ.ಶಿವಮೂರ್ತಿ ಮುರುಘಾ ಶರಣರು ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭವಾಗಿದ್ದು, ಸಂತ್ರಸ್ಥ ಬಾಲಕಿಯರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಲಾಗಿದೆ.

ಹೌದು.. ಶ್ರೀಗಳ ವಿರುದ್ಧ ದೂರು ದಾಖಲಿಸಿದ್ದ ಇಬ್ಬರು ಬಾಲಕಿಯರನ್ನು ಬಿಗಿ ಭದ್ರತೆಯಲ್ಲಿ ಭಾನುವಾರ ಚಿತ್ರದುರ್ಗಕ್ಕೆ ಕರೆತಂದು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹೇಳಿಕೆ ದಾಖಲಿಸಿಲಾಗಿದೆ. ಅಂತೆಯೇ ನಾಲ್ಕು ಗಂಟೆಗಳ ಸುದೀರ್ಘ ವಿಚಾರಣೆ ಪೂರ್ಣಗೊಂಡ ನಂತರ, ಅಪ್ರಾಪ್ತರನ್ನು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಇಡೀ ತನಿಖಾ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಬಾಲಕಿಯರ ವೈದ್ಯಕೀಯ ಪರೀಕ್ಷೆಯ ನಂತರ ತನಿಖಾಧಿಕಾರಿ ಹಾಗೂ ಚಿತ್ರದುರ್ಗ ಡಿವೈಎಸ್ಪಿ ಅನಿಲ್ ಕುಮಾರ್ ಅವರ ಬಿಗಿ ಭದ್ರತೆಯೊಂದಿಗೆ ಇಬ್ಬರು ಬಾಲಕಿಯರನ್ನು ಮತ್ತೆ ಸರ್ಕಾರಿ ಬಾಲ ಮಂದಿರಕ್ಕೆ ಕರೆದೊಯ್ಯಲಾಯಿತು. ಏತನ್ಮಧ್ಯೆ, ಸಂತ್ರಸ್ಥರಲ್ಲಿ ಒಬ್ಬರು ದಲಿತ ಸಮುದಾಯಕ್ಕೆ ಸೇರಿದವರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಈ ಅಂಶ ಭಾನುವಾರ ಬೆಳಕಿಗೆ ಬಂದ ಬೆನ್ನಲ್ಲೇ ಎಸ್‌ಸಿ/ಎಸ್‌ಟಿ ಕಾಯ್ದೆಯಡಿಯಲ್ಲೂ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆಡಿಯೋ ಕ್ಲಿಪ್ ವೈರಲ್
ಇನ್ನು ಅತ್ತ ಚಿತ್ರದುರ್ಗದಲ್ಲಿ ತನಿಖೆ ಆರಂಭವಾಗಿರುವಂತೆಯೇ ಇತ್ತ ಶ್ರೀ ಮಠಕ್ಕೆ ಸೇರಿದ್ದು ಎನ್ನಲಾದ ಆಡಿಯೋ ಕ್ಲಿಪ್ ಒಂದು ಭಾರಿ ವೈರಲ್ ಆಗುತ್ತಿದೆ. ಪ್ರಕರಣದ ಬಳಿಕ ಶ್ರೀಮಠದಲ್ಲಿ ನಡೆದ ಸಭೆಯಲ್ಲಿ ಮುರುಘಾ ಶ್ರೀಗಳು ಸಂಧಾನದ ಕುರಿತು ಮತ್ತು ಮುಂದಿನ ಕಾನೂನು ಕ್ರಮಗಳು ಕುರಿತು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಆಡಿಯೋದಲ್ಲಿ ಶ್ರೀಗಳು ಅವರೇ ಸಂಧಾನಕ್ಕೆ ಬಂದರೆ ನೋಡೋಣ.. ಇಲ್ಲವಾದರೇ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. 

ವ್ಯಾಪಕ ಪ್ರತಿಭಟನೆ
ದಾವಣಗೆರೆಯ ಶೋಷಿತ ವರ್ಗಗಳ ಸದಸ್ಯರು ಚಿತ್ರದುರ್ಗದ ಮುರುಘಾ ಮಠದ ಮುಂದೆ ಶ್ರೀಗಳನ್ನು ಬೆಂಬಲಿಸಿ ಧರಣಿ ನಡೆಸಿದರು. ಪಟ್ಟಭದ್ರ ಹಿತಾಸಕ್ತಿ ಹೊಂದಿರುವವರು ಶ್ರೀಗಳ ಮಾನಹಾನಿ ಮಾಡಲು ಸಂಚು ರೂಪಿಸಿದ್ದಾರೆ ಎಂದು ಅವರು ಆರೋಪಿಸಿದರು. ವೇದಿಕೆಯ ಸಂಚಾಲಕ ಬಾಡದ ಆನಂದರಾಜು, ದಾವಣಗೆರೆಯ ಕೊರಚ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಒಣರೊಟ್ಟಿ ಮಹಾಂತೇಶ್, ಶಿವನಗೌಡ ಪಾಟೀಲ್, ಬಿಜೆಪಿ ಮುಖಂಡ ಹನುಮೇಗೌಡ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಹರಿಹರ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಮಾತನಾಡಿ, ಆಧಾರ ರಹಿತ ಆರೋಪ ಮಾಡುವ ಮೂಲಕ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ, ಸತ್ಯಕ್ಕೆ ಸದಾ ಜಯ ಸಿಗುತ್ತದೆ, ಶ್ರೀಗಳು ಶುದ್ಧ ಹಸ್ತರಾಗಿ ಹೊರಬರುತ್ತಾರೆ. ಶರಣ ಸೇನೆ ರಾಜ್ಯಾಧ್ಯಕ್ಷ ಮರುಳಾರಾಧ್ಯ ಮಾತನಾಡಿ, ‘ಸಮುದ್ರ ಮಂಥನದ ವೇಳೆ ಅಮೃತ ಮತ್ತು ವಿಷ ಎರಡೂ ಹೊರಬಂದಿತ್ತು. ಈಗಲೂ ಸತ್ಯ ಹೊರಬರಲಿದೆ, ಸ್ವಾಮೀಜಿಗಳು ಆರೋಪ ಮುಕ್ತರಾಗಲಿದ್ದಾರೆ’ ಎಂದರು. ಈ ಸಂಚಿನ ಹಿಂದೆ ಮಠದ ನಿಕಟವರ್ತಿಗಳ ಕೈವಾಡವಿದ್ದು, ಅದನ್ನು ಪೊಲೀಸರು ಬಹಿರಂಗಪಡಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com