ಮಾಲಾಧಾರಿಗಳೊಂದಿಗೆ ಪಾದಯಾತ್ರೆ ಮಾಡುತ್ತಿರುವ ಶ್ವಾನ: ಅಯ್ಯಪ್ಪನ ಸನ್ನಿಧಿ ಶಬರಿಮಲೆಗೆ ಪಯಣ!

ಇರುಮುಡಿ ಹೊತ್ತು ಸಾಗುತ್ತಿರೋ ಅಯ್ಯಪ್ಪ ಭಕ್ತರು. ಮಾಲಾಧಾರಿಗಳನ್ನೇ ಅನುಸರಿಸುತ್ತಾ ನಾ ಮುಂದು ತಾ ಮುಂದು ಎಂದು ಹೆಜ್ಜೆ ಹಾಕುತ್ತಿರುವ ಶ್ವಾನ. ಇದರ ನಿಷ್ಠೆ, ಭಕ್ತಿ ಕಂಡರೆ ನೀವೂ ಅಚ್ಚರಿಪಡುವುದು ಗ್ಯಾರೆಂಟಿ!
ಯಾತ್ರಾರ್ಥಿಗಳೊಂದಿಗಿರುವ ರಾಜು ನಾಯಿ.
ಯಾತ್ರಾರ್ಥಿಗಳೊಂದಿಗಿರುವ ರಾಜು ನಾಯಿ.
Updated on

ಕಾರವಾರ: ಇರುಮುಡಿ ಹೊತ್ತು ಸಾಗುತ್ತಿರೋ ಅಯ್ಯಪ್ಪ ಭಕ್ತರು. ಮಾಲಾಧಾರಿಗಳನ್ನೇ ಅನುಸರಿಸುತ್ತಾ ನಾ ಮುಂದು ತಾ ಮುಂದು ಎಂದು ಹೆಜ್ಜೆ ಹಾಕುತ್ತಿರುವ ಶ್ವಾನ. ಇದರ ನಿಷ್ಠೆ, ಭಕ್ತಿ ಕಂಡರೆ ನೀವೂ ಅಚ್ಚರಿಪಡುವುದು ಗ್ಯಾರೆಂಟಿ!

ಲಕ್ಷಾಂತರ ಭಕ್ತರು ಮಾಲಾಧಾರಿಯಾಗಿ ಶಬರಿಮಲೆಯ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿರುತ್ತಾರೆ. ಆದರೆ ಬೀದಿನಾಯಿಯೊಂದು ಶಬರಿಮಲೆಯ ಅಯ್ಯಪ್ಪನ ದರ್ಶನಕ್ಕೆ 260 ಕಿ.ಮೀ ದೂರದಿಂದ ಗುರುಸ್ವಾಮಿಗಳೊಂದಿಗೆ ಹೆಜ್ಜೆ ಹಾಕುವ ಮೂಲಕ ಅಯ್ಯಪ್ಪನ ದರ್ಶನಕ್ಕೆ ಹೊರಟಿದೆ.

ಧಾರವಾಡ ಜಿಲ್ಲೆಯ ಮಂಗಳಗಟ್ಟಿ ಗ್ರಾಮದಲ್ಲಿದ್ದ ರಾಜು ಎಂಬ ಶ್ವಾನ, ಶಬರಿಮಲೆಗೆ ಪಾದಯಾತ್ರೆ ಮೂಲಕ ತೆರಳುತ್ತಿದೆ. ಆದರೆ, ಅಚ್ಚರಿಯ ವಿಷಯವೆಂದರೆ ಈ ಶ್ವಾನವನ್ನು ಯಾರೂ ಸಾಕಿಲ್ಲ. ಬೀದಿಯಲ್ಲಿ ಬಿದ್ದ ಆಹಾರ ಸೇವಿಸಿಕೊಂಡು ಕಂಡಲ್ಲಿ ಇರುವ ಈ ನಾಯಿ ಇದೀಗ ಶಬರಿಮಲೆಗೆ ಹೊರಟು ನಿಂತಿದೆ.

ಇದೇ ಗ್ರಾಮದ ನಾಗನಗೌಡ ಪಾಟೀಲ್, ಮಂಜುನಾಥ್ ಕುಂಬಾರ್ ಮತ್ತು ರವಿ ಮರಿಹಾಳ್ ಎಂಬುವವರು ತಮ್ಮ ಮೂರು ಜನರ ತಂಡದೊಂದಿಗೆ ಮಾಲೆ ಧರಿಸಿ ಕೇರಳದ ಶಬರಿಮಲೆಗೆ ಪಾದಯಾತ್ರೆ ಮೂಲಕ ದರ್ಶನಕ್ಕೆ ಹೊರಟಿದ್ದರು. ಇವರೊಂದಿಗೆ ಈ ಬೀದಿ ನಾಯಿ ಕೂಡ ಹಿಂಬಾಲಿಸಿದೆ.

ಒಂದಷ್ಟು ದೂರ ಬಂದು ಮರಳುತ್ತೆ ಎಂದು ಅಂದುಕೊಂಡಿದ್ದ ಗುರುಸ್ವಾಮಿಗಳು ತಮ್ಮಷ್ಟಕ್ಕೆ ಪಾದಯಾತ್ರೆ ಪ್ರಾರಂಭಿಸಿದರು. ಆದರೆ, ಇವರನ್ನೇ ಹಿಂಬಾಲಿಸಿದ ಈ ಶ್ವಾನ ನೂರಾರು ಕಿ.ಮೀ ಕ್ರಮಿಸಿದರೂ ಇವರ ಸಂಘ ಬಿಡಲಿಲ್ಲ‌.

ದೇವರ ಪೂಜೆ, ವಿಶ್ರಾಂತಿ ಹೀಗೆ ಎಲ್ಲೆಂದರಲ್ಲಿ ಸಾಥ್‌ ನೀಡಿದ ಈ ಶ್ವಾನ ಇವರಿಗೆ ತೊಂದರೆಯಾಗದಂತೆ ರಕ್ಷಣೆ ಮಾಡುತ್ತಾ ಇವರೊಂದಿಗೆ ಸಾಗಿದೆ. ಇವರೊಂದಿಗೆ ಹಿಂಬಾಲಿಸಿ ಇವರ ರಕ್ಷಣೆ ಮಾಡುತ್ತಾ ಬರುತ್ತಿದ್ದ ಈ ಶ್ವಾನದ ಬಗ್ಗೆ ಇವರಿಗೂ ಪ್ರೀತಿ ಹುಟ್ಟಿದೆ.

ಇದರಂತೆ ತಾವು ಪಡೆಯುವ ಪ್ರಸಾದವನ್ನು ಇದಕ್ಕೂ ನೀಡಿ ಶ್ವಾನದೊಂದಿಗೆ ಪ್ರಯಾಣ ಮುಂದುವರಿಸಿದ್ದಾರೆ.

ಪಾದಯಾತ್ರೆ ಮೂಲಕ ನಾವು ಶಬರಿಮಲೆಗೆ ಹೋಗಲು ನಿರ್ಧರಿಸಿದ್ದೆವು. ಪಾದಯಾತ್ರೆ ವೇಳೆ ಗ್ರಾಮದಲ್ಲಿ ಕೆಲಕಾಲ ವಿಶ್ರಾಂತಿ ಪಡೆದೆವು. ಈ ವೇಳೆ ಬೀದಿನಾಯಿಯೊಂದು ನಮ್ಮ ಜೊತೆಗೂಡಿತು. ನಮ್ಮ ಪಾದಯಾತ್ರೆ ಜೊತೆಗೆ ಸಾಗುತ್ತಾ ಬಂದಿತು. ನಾಯಿಯನ್ನು ಬಿಟ್ಟು ಪಾದಯಾತ್ರೆಯಿಂದ ದೂರ ಇಡಲು ಸಾಕಷ್ಟು ಪ್ರಯತ್ನಿಸಿಸಿದೆವು. ಆದರೆ, ಅದು ಸಾಧ್ಯವಾಗಲಿಲ್ಲ. ನಾಯಿ ನಮ್ಮನ್ನು ಹಿಂಬಾಲಿಸುತ್ತಲೇ ಇತ್ತು ಎಂದು ನಾಗನಗೌಡ ಪಾಟೀಲ್ ಅವರು ಹೇಳಿದ್ದಾರೆ.

ನಾಯಿ ರಾಜುವನ್ನು ಗೇಟ್ ವೊಂದರಲ್ಲಿ ಲಾಕ್ ಮಾಡಿದ್ದೆವು. ಆದರೂ ಅದು ಅಲ್ಲಿಂದ ತಪ್ಪಿಸಿಕೊಂಡು ಬಂದು ಮತ್ತೆ ನಮ್ಮನ್ನು ಹಿಂಬಾಲಿಸಿತು. ಇದೀಗ ನಾವು ದೇವರ ಇಚ್ಛೆ ಎಂದು ನಿರ್ಧರಿಸಿ, ಅದರೊಂದಿಗೆ ಮುಂದೆ ಸಾಗುತ್ತಿದ್ದೇವೆ. ಇದೀಗ ನಾಯಿಯನ್ನು ದೂರಾಗಿಸುವ ಪ್ರಯತ್ನವನ್ನು ಕೈಬಿಟ್ಟಿದ್ದೇವೆಂದು ಮಂಜುನಾಥ್ ಕುಂಬಾರ್ ಅವರು ಹೇಳಿದ್ದಾರೆ.

ತಮ್ಮ ಪ್ರಯಾಣದ ಮಾರ್ಗದಲ್ಲಿ ನಾಯಿಯ ವರ್ತನೆಯ ಮೂವರಿಗೂ ಆಶ್ಚರ್ಯವನ್ನುಂಟು ಮಾಡಿದೆ. ರಾಜು ಅತ್ಯಂತ ಶಿಸ್ತುಬದ್ಧವಾಗಿ ವರ್ತಿಸುತ್ತಿದ್ದಾನೆ. ಪಾದಯಾತ್ರೆ ವೇಳೆ ನಾವು ನಮ್ಮ ವಸ್ತುಗಳನ್ನು ಒಂದು ಸ್ಥಳದಲ್ಲಿ ಇಟ್ಟು, ಹತ್ತಿರದಲ್ಲೇ ಮಲಗುತ್ತೇವೆ. ರಾಜು ನಮ್ಮ ತಂಡದ ಭಾಗವಾಗಿರುವುದರಿಂದ, ಪ್ರಯಾಣದ ಜೊತೆಗೆ ಇದೀಗ ನಾವು ಆಹಾರ ಮತ್ತು ಬಿಸ್ಕತ್ತುಗಳನ್ನು ಇಟ್ಟುಕೊಳ್ಳುತ್ತಿದ್ದೇವೆ. ನಮ್ಮಲ್ಲಿರುವ ವಸ್ತುಗಳ ಬಗ್ಗೆ ಅವನಿಗೆ ಗೊತ್ತಿದ್ದು, ಅವುಗಳ ರಕ್ಷಣೆ ಮಾಡುತ್ತಿದ್ದೇನೆ. ನಾವಾಗೇ ಅವನಿಗೆ ಕೊಡುವವರೆಗೂ ಆತ ಅದನ್ನು ಮುಟ್ಟುವುದಿಲ್ಲ ಎಂದು ತಿಳಿಸಿದ್ದಾರೆ.

ಪಾದಯಾತ್ರೆ ವೇಳೆ ಜನರು ಆತನಿಗೆ ಮಾಂಸವನ್ನು ನೀಡಿದರೂ, ಆತ ಅದನ್ನು ಮುಟ್ಟುತ್ತಿಲ್ಲ. ಉತ್ತರಕನ್ನಡ ಜಿಲ್ಲೆ ಪ್ರವೇಶಿಸಿ ನಡೆಯುತ್ತಿದ್ದಾಗ ಅಲ್ಲಿ ಸಾಕಷ್ಟು ಪ್ರದೇಶಗಳಲ್ಲಿ ಮೀನುಗಳ ಒಣಹಾಕಲಾಗಿತ್ತು. ಆದರೆ, ಅದಾವುದರ ಕಡೆಯೂ ರಾಜು ಆಕರ್ಷಿತನಾಗಲಿಲ್ಲ ಎಂದು ನಾಗನಗೌಡ ಅವರು ಹೇಳಿದ್ದಾರೆ.

ದೇವಾಲಯದ ಆವರಣದಲ್ಲಿ ರಾಜುಗೆ ಅವಕಾಶ ಇರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಾಗನಗೌಡ ಅವರು, ದೇವಸ್ಥಾನಕ್ಕೆ ಕರೆದೊಯ್ಯಬಹುದು. ಆದರೆ, ಅವನು ಮೆಟ್ಟಿಲುಗಳ ಹತ್ತಲು ಸಾಧ್ಯವಿಲ್ಲ. ಆದರೆ, ಆತನನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿ, ಸುರಕ್ಷಿತವಾಗಿ ವಾಪಸ್ ಕರೆತರುತ್ತೇವೆಂದು ಹೇಳಿದ್ದಾರೆ.

ಈ ವರ್ಷ ಶಬರಿಮಲೆಗೆ ಹೋದರೆ 18 ವರ್ಷಗಳಾಗುತ್ತದೆ. 5ನೇ ವರ್ಷದಲ್ಲೂ ನಾನು ಕಾಲ್ನಡಿಗೆ ಮೂಲಕ ದೇವಸ್ಥಾನಕ್ಕೆ ಹೋಗಿದ್ದೆ ಎಂದಿದ್ದಾರೆ.

ಮಾಲಾಧಾರಿಗಳ ಜೊತೆಗೆ ನಾಯಿಯೂ ಹೆಜ್ಜೆಹಾಕುತ್ತಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com