ಬೆಲೆ ಕುಸಿತ: ಟೊಮ್ಯಾಟೋ, ಈರುಳ್ಳಿ ಬೆಳೆಗಾರರ ಕಣ್ಣಲ್ಲಿ ನೀರು! 

ಟೊಮ್ಯಾಟೋ ಹಾಗೂ ಈರುಳ್ಳಿ ದರ ಕುಸಿತ ಕಂಡಿದ್ದು, ಬೆಳೆಗಾರರು ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದಾರೆ.
ಈರುಳ್ಳಿ, ಟೊಮ್ಯಾಟೋ
ಈರುಳ್ಳಿ, ಟೊಮ್ಯಾಟೋ

ಬೆಂಗಳೂರು: ಟೊಮ್ಯಾಟೋ ಹಾಗೂ ಈರುಳ್ಳಿ ದರ ಕುಸಿತ ಕಂಡಿದ್ದು, ಬೆಳೆಗಾರರು ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದಾರೆ. ಕೋಲಾರ ಜಿಲ್ಲೆಯ ಹಣ್ಣು ಹಾಗೂ ತರಕಾರಿ ಬೆಳೆಗಾರರ ಸಂಘರ್ಷ ಸಮಿತಿ ಈರುಳ್ಳಿ, ಟೊಮ್ಯಾಟೋ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿ ರೈತರ ಹಿತಾಸಕ್ತಿ ಕಾಯುವುದಕ್ಕೆ ಆಗ್ರಹಿಸಿದೆ.
 
ಮೂಲಗಳ ಪ್ರಕಾರ, ಯಶವಂತಪುರ ಎಪಿಎಂಸಿ ಯಾರ್ಡ್ ನಲ್ಲಿ ಈರುಳ್ಳಿ ಬೆಲೆ ಪ್ರತಿ ಕೆ.ಜಿಗೆ 2 ರೂಪಾಯಿ-10 ರೂಪಾಯಿಗಳವರೆಗೆ ಕುಸಿತ ಕಂಡಿತ್ತು. ಆದರೆ ಈಗ ಸ್ಥಿರತೆ ಕಾಯ್ದುಕೊಂಡಿದ್ದು ಗುಣಮಟ್ಟದ ಆಧಾರದಲ್ಲಿ 12 ರೂಪಾಯಿಗಳಿಂದ 18 ರೂಪಾಯಿಗಳವರೆಗೆ ಇದೆ. 

ಕೆ.ಜಿಗೆ 12 ರೂಪಾಯಿ ಸಹ ನಮ್ಮ ಶ್ರಮಕ್ಕೆ ಅತ್ಯಂತ ಕಡಿಮೆ ಮೊತ್ತವಾಗಿದೆ. ಸರಕು ಸಾಗಾಣೆಗೇ ಹೆಚ್ಚಿನ ಹಣ ಖರ್ಚಾಗಲಿದೆ. ಇನ್ನು ಲೋಡಿಂಗ್, ಅನ್ಲೋಡಿಂಗ್ ಹಾಗೂ ಬೆಳೆಯ ಖರ್ಚು ಎಲ್ಲವೂ ಕಳೆದರೆ ನಷ್ಟವೇ ಆಗಲಿದೆ ಎನ್ನುತ್ತಾರೆ ಈರುಳ್ಳಿ ಬೆಳೆಗಾರರು.

ದೂರದಿಂದ ಇಲ್ಲಿಗೆ ತಮ್ಮ ಸರಕುಗಳನ್ನು ಮಾರಾಟ ಮಾಡಲು ಬರುವವರು ನಿರೀಕ್ಷೆಗಳೊಂದಿಗೆ ಬರುತ್ತಾರೆ, ಆದರೆ ಬೆಲೆ ಇಳಿಕೆಯಿಂದ ಭ್ರಮನಿರಸನಗೊಳ್ಳುತ್ತಾರೆ. ಗದಗ ಜಿಲ್ಲೆಯ ತಿಮ್ಮಾಪುರದ ರೈತ ಪವಡೆಪ್ಪ ಉತ್ತಮ ಈರುಳ್ಳಿ ಬೆಳೆ ಬೆಳೆದಿದ್ದರು. ಅದನ್ನು ಗದಗ ಎಪಿಎಂಸಿ ಯಾರ್ಡ್ ನಲ್ಲಿ ಮಾರಾಟ ಮಾಡುವ ಬದಲು ಬೆಂಗಳೂರಿನಲ್ಲಿ ಮಾರಾಟ ಮಾಡಲು ನಿರ್ಧರಿಸಿದರು.

ಬೆಂಗಳೂರು ಮಾರುಕಟ್ಟೆಗೆ ನ.22 ರಂದು 205 ಕೆ.ಜಿ ಈರುಳ್ಳಿಯನ್ನು ತಂದಾಗ ಪ್ರತಿ ಕೆ.ಜಿ ಈರುಳ್ಳಿ ಬೆಲೆ 2 ರೂಪಾಯಿಯಷ್ಟಿತ್ತು.

ಕೆ.ಜಿಗೆ ಎರಡು ರೂಪಾಯಿ ಲೆಕ್ಕದಲ್ಲಿ 205 ಕೆ.ಜಿಗೆ 410 ರೂಪಾಯಿ ಸಿಕ್ಕಿತ್ತು, ಆದರೆ ಇದರಲ್ಲಿ 401.64 ರೂಪಾಯಿಗಳನ್ನು ಅನ್ ಲೋಡಿಂಗ್ ಶುಲ್ಕಕ್ಕೆ ನೀಡಬೇಕಾಯಿತು. ಕೊನೆಗೆ 205 ಕೆ.ಜಿ ಈರುಳ್ಳಿ ಮಾರಾಟ ಮಾಡಿದ ರೈತನಿಗೆ ಸಿಕ್ಕಿದ್ದು 8.36 ಪೈಸೆಯಷ್ಟೇ. 

ಈರುಳ್ಳಿಯನ್ನು ಬೆಳೆದು, ಅದನ್ನು ಉತ್ತಮ ಲಾಭಕ್ಕಾಗಿ ಅದನ್ನು ಬೆಂಗಳೂರಿಗೆ ತಂದದ್ದು ತಪ್ಪು ಎಂದು ಈರುಳ್ಳಿ ಬೆಳೆಗಾರ ತಮ್ಮ ನೋವನ್ನು ವರದಿಗಾರರ ಬಳಿ ಹೇಳಿಕೊಂಡರು.

ಇನ್ನು ಕರ್ನಾಟಕದ ದಕ್ಷಿಣದ ಪ್ರದೇಶದಲ್ಲೂ ಈರುಳ್ಳಿ, ಬೆಳೆಗಾರರ ಪರಿಸ್ಥಿತಿ ಭಿನ್ನವಾಗಿಲ್ಲ. ಕೆ.ಆರ್ ಮಾರುಕಟ್ಟೆಯ ಸಗಟು ತರಕಾರಿ ಡೀಲರ್ ಮಂಜುನಾಥ್ ಪ್ರಕಾರ, ಟೊಮ್ಯಾಟೋವನ್ನು ಕೆ.ಜಿಗೆ 5 ರೂಪಾಯಿಗಳಿಂದ 6 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ 8 ರಿಂದ 12 ರೂಪಾಯಿಗಳಷ್ಟಿದೆ.
 
ಕೋಲಾರ ಜಿಲ್ಲಾ ಹಣ್ಣು ಹಾಗೂ ತರಕಾರಿ ಬೆಳೆಗಾರರ ಸಂಘರ್ಷ ಸಮಿತಿ ಅಧ್ಯಕ್ಷ ನೀಲತುರು ಚಿನ್ನಪ್ಪ ರೆಡ್ಡಿ ಈರುಳ್ಳಿ, ಆಲುಗಡ್ಡೆ, ಟೊಮ್ಯಾಟೋಗಳಿಗೆ ಬೆಂಬಲ ಬೆಲೆ ಘೋಷಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ತರಕಾರಿ ಬೆಳೆಗಾರರು ಅಕ್ಷರಶಃ ಕಣ್ಣೀರಿಡುತ್ತಿದ್ದಾರೆ. ನಾವು ಪಟ್ಟ ಶ್ರಮ, ನೌಕರರಿಗೆ ನೀಡಿದ ವೇತನ, ಬೆಳೆ ತೆಗೆಯಲು ಹೂಡಿದ ಬಂಡವಾಳ, ಕಾಯುವಿಕೆಗೆ ಪ್ರತಿಫಲವಾಗಿ ಪ್ರತಿ ಕೆ.ಜಿಗೆ 1.5 ರೂಪಾಯಿ ಪಡೆಯುತ್ತಿದ್ದೇವೆ. 2 ಕ್ವಿಂಟಾಲ್ ಟೊಮ್ಯಾಟೋ ಬೆಳೆದರೆ 300 ರೂಪಾಯಿಗಳಷ್ಟೇ ಸಿಗುತ್ತಿದೆ ಎನ್ನುತ್ತಾರೆ ರೆಡ್ದಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com