ಸಮ್ಮೇದ ಶಿಖರ್ಜಿ ಪ್ರವಾಸಿ ತಾಣವೆಂದು ಘೋಷಿಸಿದ ಜಾರ್ಖಂಡ್ ನಿರ್ಧಾರಕ್ಕೆ ಕರ್ನಾಟಕ ಜೈನರಿಂದ ವಿರೋಧ
ಮೈಸೂರು: ಜಾರ್ಖಂಡ್ ನ ಗಿರಿಡಿ ಜಿಲ್ಲೆಯ ಜೈನ ಸಮುದಾಯದ ಪವಿತ್ರ ಸ್ಥಳವಾದ ಶ್ರೀ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ಸ್ಥಳವೆಂದು ಘೋಷಿಸಿದ ಜಾರ್ಖಂಡ್ ಸರ್ಕಾರದ ವಿರುದ್ಧ ರಾಜ್ಯ ಜೈನ ಸಮುದಾಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ದಿಗಂಬರ ಜೈನ ಸಮಾಜದ ಕಾರ್ಯದರ್ಶಿ ಎಂ.ಆರ್.ಅನಿಲ್ ಕುಮಾರ್ ಅವರು, ಜಾರ್ಖಂಡ್ ರಾಜ್ಯದ ಅತಿ ಎತ್ತರದ ಪರ್ವತವಾಗಿರುವ ಪರಸನಾಥ ಬೆಟ್ಟದಲ್ಲಿರುವ ಪವಿತ್ರ ಕ್ಷೇತ್ರ 24 ಜೈನ ತೀರ್ಥಂಕರರಲ್ಲಿ 20 ತೀರ್ಥಂಕರರು ಮೋಕ್ಷ ಪಡೆದ ಸ್ಥಳ ಎಂದಿದ್ದಾರೆ.
“ಇದು ನಮ್ಮ ಸಮುದಾಯಕ್ಕೆ ಪವಿತ್ರ ಸ್ಥಳವಾಗಿದೆ. ಆದರೆ ವಿಪರ್ಯಾಸವೆಂದರೆ, ಜಾರ್ಖಂಡ್ ಸರ್ಕಾರ ಇದನ್ನು ಪ್ರವಾಸಿ ಸ್ಥಳವೆಂದು ಘೋಷಿಸಿದೆ. ಇದರಿಂದ ಪ್ರವಾಸಿಗರು ಮೋಜು ಮಸ್ತಿಗಾಗಿ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುವುದರಿಂದ ಅಲ್ಲಿನ ಪಾವಿತ್ರ್ಯತೆಗೆ ಧಕ್ಕೆಯಾಗಲಿದೆ. ಜಾರ್ಖಂಡ್ ಸರ್ಕಾರ ತನ್ನ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಲು ಮತ್ತು ಪವಿತ್ರ ಸ್ಥಳದ ಪರಿಸರಕ್ಕೆ ಪ್ರವಾಸಿಗರಿಂದ ತೊಂದರೆಯಾಗದಂತೆ ನೋಡಿಕೊಳ್ಳಲು ನಾವು ಆ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
“ನಾವು ಬದುಕಲು ಮತ್ತು ಬದುಕಲು ಬಿಡಿ ಎಂಬ ತತ್ವವನ್ನು ನಂಬುತ್ತೇವೆ. ಜಗತ್ತಿನಲ್ಲಿ ಅಹಿಂಸೆಯನ್ನು ಅನುಸರಿಸುವ ಏಕೈಕ ಧರ್ಮ ಇದಾಗಿದೆ ಎಂದು ಅನಿಲ್ ಕುಮಾರ್ ತಿಳಿಸಿದ್ದಾರೆ.
ಜಾರ್ಖಂಡ್ ಸರ್ಕಾರದ ನಿರ್ಧಾರ ವಿರೋಧಿಸಿ ಸೋಮವಾರ ಮೈಸೂರಿನ ನೂರಾರು ಜೈನ ಸಮುದಾಯದವರು ಗಾಂಧಿ ಸ್ಕ್ವೇರ್‌ನಿಂದ ಅಶೋಕ ರಸ್ತೆ, ಇರ್ವಿನ್ ರಸ್ತೆ ಮತ್ತು ಜೆಎಲ್‌ಬಿ ರಸ್ತೆ ಮೂಲಕ ಡಿಸಿ ಕಚೇರಿವರೆಗೆ ಮೌನ ಮತ್ತು ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ಇಲ್ಲಿನ ಡಿಸಿ ಮೂಲಕ ಜಾರ್ಖಂಡ್ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುವುದಾಗಿ ಅನಿಲ್ ಕುಮಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ