ಬೆಳಗಾವಿ: ಇತ್ತೀಚೆಗಷ್ಟೇ ಕೇಸರಿ ಪಕ್ಷಕ್ಕೆ ಸೇರ್ಪಡೆಯಾದ ಬಿಜೆಪಿ ಎಂಎಲ್‌ಸಿ ಹಾಗೂ ಹಿರಿಯ ರಾಜಕಾರಣಿ ಬಸವರಾಜ್ ಹೊರಟ್ಟಿ ಅವರು ಮಂಗಳವಾರ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.
ಬೆಳಗಾವಿ ಸುವರ್ಣ ಸೌಧದಲ್ಲಿ ಎಂಎಲ್‌ಸಿ ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ ಕಾರ್ಯದರ್ಶಿಗಳಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಿರಿಯ ಮುಖಂಡರು ಉಪಸ್ಥಿತರಿದ್ದರು. ನಾಳೆ (ಡಿ. 21) ಚುನಾವಣೆ ನಡೆಯಲಿದೆ.
ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರ ಹೆಸರನ್ನು ಅಂತಿಮಗೊಳಿಸಿತ್ತು.
ಇದೀಗ ಹಂಗಾಮಿ ಸಭಾಪತಿಯಾಗಿರುವ ಬಿಜೆಪಿ ಎಂಎಲ್‌ಸಿ ರಘುನಾಥ ಮಲ್ಕಾಪುರೆ ಅವರು ಸಭಾಪತಿ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ಈ ಹಿಂದೆಯೂ ಪರಿಷತ್ತಿನ ಸಭಾಪತಿಯಾಗಿದ್ದ ಹೊರಟ್ಟಿ ಅವರಿಗೆ ಅದೇ ಹುದ್ದೆ ನೀಡಲಾಗುವುದು ಎಂದು ಪಕ್ಷವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಾಗ ಭರವಸೆ ನೀಡಿತ್ತು.
ಒಂದು ಕಾಲದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಆಪ್ತರಾಗಿದ್ದ ಬಸವರಾಜ ಹೊರಟ್ಟಿ ಅವರು, ಹಿಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಸೇರಲು ನಿರ್ಧರಿಸಿದರು. ಬಸವರಾಜ ಹೊರಟ್ಟಿ ಅವರು ವಿಧಾನಸಭೆಯಲ್ಲಿ ಎಲ್ಲ ಪಕ್ಷಗಳ ಸದಸ್ಯರಿಂದಲೂ ಗೌರವಕ್ಕೆ ಪಾತ್ರರಾಗಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಒಟ್ಟು 75 ಸದಸ್ಯರ ಬಲವಿದೆ. ಬಿಜೆಪಿ 39, ಪ್ರತಿಪಕ್ಷ ಕಾಂಗ್ರೆಸ್ 26 ಮತ್ತು ಜೆಡಿಎಸ್ 8 ಸ್ಥಾನಗಳನ್ನು ಹೊಂದಿದೆ. ಅಗತ್ಯವಿರುವ ಸಂಖ್ಯೆ 38 ಆಗಿರುವುದರಿಂದ ಬಿಜೆಪಿ ತನ್ನ ಅಭ್ಯರ್ಥಿಯನ್ನು ಸುಲಭವಾಗಿ ಆಯ್ಕೆ ಮಾಡಬಹುದಾಗಿದೆ. ಆಡಳಿತ ಪಕ್ಷದ ಜತೆಗೆ ಹೊರಟ್ಟಿ ಅವರು ವಿರೋಧ ಪಕ್ಷಗಳ ಕೆಲ ಸದಸ್ಯರ ಬೆಂಬಲವನ್ನೂ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
Advertisement