ಪರಿಷತ್ ಸಭಾಪತಿಯಾಗಿ ಹೊರಟ್ಟಿ ಅವಿರೋಧ ಆಯ್ಕೆ?; ಅಧಿಕೃತ ಘೋಷಣೆಯೊಂದೇ ಬಾಕಿ

ವಿಧಾನಪರಿಷತ್ ಸಭಾಪತಿಯಾಗಿ ಬಿಜೆಪಿ ಸದಸ್ಯ ಬಸವರಾಜ್ ಹೊರಟ್ಟಿ ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ. ಈ ಕುರಿತು ಅಧಿಕೃತ ಘೋಷಣೆಯೊಂದೇ ಬಾಕಿಯಿದೆ ಎಂದು ತಿಳಿದುಬಂದಿದೆ.
ಬಸವರಾಜ್ ಹೊರಟ್ಟಿ
ಬಸವರಾಜ್ ಹೊರಟ್ಟಿ
Updated on

ಬೆಳಗಾವಿ: ವಿಧಾನಪರಿಷತ್ ಸಭಾಪತಿಯಾಗಿ ಬಿಜೆಪಿ ಸದಸ್ಯ ಬಸವರಾಜ್ ಹೊರಟ್ಟಿ ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ. ಈ ಕುರಿತು ಅಧಿಕೃತ ಘೋಷಣೆಯೊಂದೇ ಬಾಕಿಯಿದೆ ಎಂದು ತಿಳಿದುಬಂದಿದೆ.

ಹೊರಟ್ಟಿಯವರ ಹಿರಿತನವನ್ನು ಪರಿಗಣಿಸಿ ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಅವರ ವಿರುದ್ಧ ಅಭ್ಯರ್ಥಿಗಳನ್ನು ನಿಲ್ಲಿಸದ ಹೊರಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ತಿಳಿದುಬಂದಿದೆ.

ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ನಾಳೆ ಡಿ.21ರಂದು ಚುನಾವಣೆ ನಡೆಯಲಿದ್ದು, ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿತ್ತು. ಇದರಂತೆ ನಿನ್ನೆ ಮಧ್ಯಾಹ್ನ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ್ ಹೊರಟ್ಟಿ ನಾಮಪತ್ರ ಸಲ್ಲಿಕೆ ಮಾಡಿದ್ದರು.

ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ನೀರಾವರಿ ಸಚಿವ ಗೋವಿಂದ ಕಾರಜೋಳ, ಪರಿಷತ್ತಿನ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ, ಸದಸ್ಯ ಎಸ್.ವಿ.ಸಂಕನೂರು ಉಪಸ್ಥಿತರಿದ್ದರು.

ಹಿಂದಿನ ವಿಧಾನಸಭೆ ಅಧಿವೇಶನದಲ್ಲಿಯೇ ಹೊರಟ್ಟಿ ಅವರನ್ನು ಸಭಾಪತಿಯಾಗಿ ಆಯ್ಕೆ ಮಾಡಬೇಕಿತ್ತು, ಆದರೆ, ಚುನಾವಣೆಯನ್ನು ಮುಂದೂಡಲಾಗಿತ್ತು. ಕಾರಣ ತಿಳಿದಿಲ್ಲವಾದರೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸೂಚನೆ ಮೇರೆಗೆ ಬೊಮ್ಮಾಯಿ ಚುನಾವಣೆಯನ್ನು ಮುಂದೂಡಿದ್ದರು ಎಂದು ತಿಳಿದುಬಂದಿದೆ.

ಈ ಬೆಳವಣಿಗೆ ಹೊರಟ್ಟಿಯವರ ಬೆಂಬಲಿಗರಲ್ಲಿ ತಪ್ಪು ಸಂದೇಶವನ್ನು ರವಾನಿಸಿದೆ. ವಿಧಾನ ಪರಿಷತ್ತಿನ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿ ಹೊರಟ್ಟಿಯವರನ್ನು ಬಿಜೆಪಿ ತನ್ನ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡಿತ್ತು. ಈ ಭರವಸೆಯನ್ನು ಪಕ್ಷ ಉಳಿಸಿಕೊಳ್ಳಬೇಕಿದೆ ಎಂದು ಬಿಜೆಪಿಯ ಹಿರಿಯ ನಾಯಕರು ಹೇಳಿದ್ದಾರೆ.

ನಾಯಕರ ಹೇಳಿಕೆಯನ್ನು ಪರಿಗಣಿಸಿ ಡಿ.21ರಂದು ಚುನಾವಣೆ ನಡೆಸಲು ಪಕ್ಷ ನಿರ್ಧರಿಸಿದ್ದು, ಅಲ್ಲಿ ಹಂಗಾಮಿ ಸಭಾಪತಿ ರಘುನಾಥ ಮಲ್ಕಾಪುರೆ ಹೊರಟ್ಟಿಗೆ ಹಾದಿ ಸುಗಮಗೊಳಿಸಲಿದ್ದಾರೆಂದು ತಿಳಿದುಬಂದಿದೆ.

ರಾಜ್ಯಪಾಲರು ಚುನಾವಣೆಗೆ ಅನುಮೋದನೆ ನೀಡಿದ್ದು, ಬಿಜೆಪಿ ಕೋರ್ ಕಮಿಟಿ ಕೂಡ ಹೊರಟ್ಟಿ ಅವರನ್ನು ಅಧ್ಯಕ್ಷರನ್ನಾಗಿ ಒಪ್ಪಿಕೊಂಡಿದೆ ಎಂದು ವರದಿಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com