ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ

ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಂಡಿಸಿದ್ದ ವಿಧೇಯಕವನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸದನದ ಪರ್ಯಾಲೋಚನೆಗೆ ಹಾಕಿ ವಿಧೇಯಕ ಧ್ವನಿಮತದ ಮೂಲಕ ಸರ್ವಾನುಮತದ ಅಂಗೀಕಾರಗೊಂಡಿತು.
ಕರ್ನಾಟಕ ವಿಧಾನಸಭೆ
ಕರ್ನಾಟಕ ವಿಧಾನಸಭೆ
Updated on

ಬೆಳಗಾವಿ: ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಂಡಿಸಿದ್ದ ವಿಧೇಯಕವನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸದನದ ಪರ್ಯಾಲೋಚನೆಗೆ ಹಾಕಿ ವಿಧೇಯಕ ಧ್ವನಿಮತದ ಮೂಲಕ ಸರ್ವಾನುಮತದ ಅಂಗೀಕಾರಗೊಂಡಿತು.

ದೇಶದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಭೂಸಾರಿಗೆ ಸಂಚಾರದ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ,ಹಲವು ಮಾದರಿಗಳ ಪ್ರಾಧಿಕಾರ ,ಇಲಾಖೆಗಳ ಬದಲಾಗಿ ಉನ್ನತಾಧಿಕಾರದ ಒಂದೇ ಸಂಸ್ಥೆ ಸ್ಥಾಪಿಸುವ ಉದ್ದೇಶದಿಂದ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ಅಸ್ತಿತ್ವಕ್ಕೆ ತರಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರು ಮಹಾನಗರಕ್ಕೆ ಸುತ್ತಮುತ್ತಲಿನ ಪುರಸಭೆ,ನಗರಸಭೆಗಳು ಸುಮಾರು 110 ಹಳ್ಳಿಗಳು ಸೇರ್ಪಡೆಯಾಗಿವೆ. ಮಹಾ ನಗರದ ಮೂಲಸೌಕರ್ಯಗಳಿಗೂ ಗ್ರಾಮೀಣ ಮೂಲಸೌಕರ್ಯಗಳಿಗೂ ವ್ಯತ್ಯಾಸ ಇರುತ್ತದೆ.ಕಳೆದ ಸುಮಾರು 25 ವರ್ಷಗಳಿಂದ ಬೆಂಗಳೂರಿನ ರಸ್ತೆಗಳ ಅಗಲೀಕರಣವಾಗಿಲ್ಲ. ಪ್ರತಿನಿತ್ಯ ಸುಮಾರು 5 ಸಾವಿರಕ್ಕೂ ಹೆಚ್ಚು ಹೊಸವಾಹನಗಳು ರಸ್ತೆಗಿಳಿಯುತ್ತಿವೆ .ಮಹಾನಗರದಲ್ಲಿ ಸುಮಾರು 1 ಕೋಟಿ 25 ಲಕ್ಷ ಜನಸಂಖ್ಯೆ ಇದೆ, ಸುಮಾರು 1 ಕೋಟಿ 3 ಲಕ್ಷ ವಾಹನಗಳಿವೆ. ಬರುವ ದಿನಗಳಲ್ಲಿ ಜನಸಂಖ್ಯೆಗಿಂತ ವಾಹನಗಳ ಸಂಖ್ಯೆಯೇ ಅಧಿಕವಾಗಲಿದೆ.ಇವುಗಳ ನಿರ್ವಹಣೆಯನ್ನು ಬಹು ವಿಧದ ಸಂಸ್ಥೆಗಳು ನೋಡಿಕೊಳ್ಳುತ್ತಿವೆ. ಹೊಸ ರಸ್ತೆಗಳ ನಿರ್ಮಾಣಕ್ಕೆ ಭೂಸ್ವಾಧೀನ ಕಾರ್ಯದ ಜವಾಬ್ದಾರಿ ಹಾಗೂ ಸಮಗ್ರ ಪರಿಹಾರ ಕಂಡುಕೊಳ್ಳಲು ವಿಧೇಯಕ ತರಲಾಗುತ್ತಿದೆ ಎಂದು ಅವರು ಹೇಳಿದರು. 

ಗೊರಗುಂಟೆ ಪಾಳ್ಯದ ಬಳಿ ಬಹು ಹಂತದ ಪಥ ,ಹೆಬ್ಬಾಳ  ಮೇಲ್ಸೇತುವೆ ಅಗಲೀಕರಣ ಸೇರಿದಂತೆ ಬೇರೆ ಊರುಗಳಿಂದ ಪ್ರವೇಶಿಸುವ ಮಾರ್ಗಗಳ ವಿಸ್ತಾರಕ್ಕೆ ಕ್ರಮವಹಿಸಲಾಗಿದೆ.ಬೆಂಗಳೂರಿನ ಸಂಚಾರದ ವೈಜ್ಞಾನಿಕ ನಿರ್ವಹಣೆಗೆ ಅಧ್ಯಯನಕ್ಕೆ ಐಐಎಸ್‌ಸಿ ಗೆ ಕೋರಲಾಗಿದೆ.ಈ ಹಿಂದಿನ ವರದಿಗಳನ್ನು ಪುನರ್ ಪರಿಶೀಲನೆ ಮಾಡಲಾಗುವುದು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂಘೈ,ಲಂಡನ್ ,ನ್ಯೂಯಾರ್ಕ್ ಮತ್ತಿತರ ನಗರಗಳ ಸಂಚಾರ ನಿರ್ವಹಣೆಯನ್ನೂ ಕೂಡ ಅಧ್ಯಯನ ಮಾಡಲಾಗುವುದು ಎಂದರು. 

ಸಂಚಾರ ನಿರ್ವಹಣೆಗೆ ಎಡಿಜಿಪಿ ಹಂತದ ಅಧಿಕಾರಿ ನೇಮಿಸಿ ಇಲಾಖೆಯ ಸಾಮರ್ಥ್ಯ ಹೆಚ್ಚಿಸಲಾಗಿದೆ. ಐದು ಕಡೆ ಹೊಸ ಸಂಚಾರ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ಈಗ ಸಾಕಷ್ಟು ಸುಧಾರಣೆಗಳು ಕಂಡು ಬಂದಿವೆ.ಸಂಚಾರ್ ಕಮಾಂಡ್ ಕೇಂದ್ರ ಹಾಗೂ 7 ಸಾವಿರ ನಿರ್ಭಯ ಕ್ಯಾಮೆರಾಗಳನ್ನು ಕೂಡ  ಸಂಚಾರ ನಿಗಾ ಉದ್ದೇಶಕ್ಕೂ ಕೂಡ ಬಳಕೆ ಮಾಡಲಾಗುತ್ತಿದೆ.ರಸ್ತೆ ನಿರ್ಮಾಣ,ಸಂಚಾರ ನಿರ್ವಹಣೆ ಸುಧಾರಣೆಗೆ ನಾಗರಿಕರ ಸಹಕಾರ ಅಗತ್ಯ. ಸಾರಿಗೆ ಸಂಚಾರ ಲೋಪಗಳಿಗೆ ಖುದ್ದಾಗಿ ದಂಡ ಹಾಕುವ ಬದಲು ಕ್ಯಾಮೆರಾಗಳ ಮೂಲಕ ದಂಡ ವಿಧಿಸಲು ಪ್ರಾರಂಭವಾದ ನಂತರ ಹೆಚ್ಚು ದಂಡ ಸಂಗ್ರಹವಾಗುತ್ತಿದೆ ಎಂದು ಅವರು ತಿಳಿಸಿದರು.

ಬೆಂಗಳೂರು ಮಹಾನಗರಕ್ಕೆ ರಿಂಗ್ ರಸ್ತೆ ,ಪೆರಿಫೆರಲ್ ರಿಂಗ್ ರಸ್ತೆ ಮತ್ತಿತರ ಕಾಮಗಾರಿಗಳ ಭೂಸ್ವಾಧೀನ ಕಾರ್ಯ,ಮೆಟ್ರೋ ಮಾರ್ಗದ ವಿಸ್ತರಣೆ ಮೊದಲಾದ ಕಾರ್ಯಗಳನ್ನು ಕೈಗೊಳ್ಳಲಾಗುವುದು ವಿಧೇಯಕದ ಕುರಿತು ಸಲಹೆಗಳನ್ನು ಸ್ವಾಗತಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಶಾಸಕ ಯು.ಟಿ.ಖಾದರ್ ಮಾತನಾಡಿ ಉದ್ದೇಶಿತ ಪ್ರಾಧಿಕಾರದಲ್ಲಿ ಬೆಂಗಳೂರಿನಿಂದ ಚುನಾಯಿತರಾದ ಶಾಸಕರು ಅಥವಾ ಸಚಿವರನ್ನು ಸೇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಶಾಸಕರಾದ ಅರವಿಂದ ಲಿಂಬಾವಳಿ, ಎನ್.ಎ.ಹ್ಯಾರಿಸ್,ಆರ್.ಮಂಜುನಾಥ ಮತ್ತಿತರರು ಮಾತನಾಡಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com