ಸರ್ಕಾರಿ ವೈದ್ಯರಿಗೆ ಹಾಸ್ಪಿಟಲ್ ಮ್ಯಾನೇಜ್‍ಮೆಂಟ್ ಕೋರ್ಸ್ ಅಧ್ಯಯನ ಮಾಡಲು ಧನಸಹಾಯ: ಕೆ.ಸುಧಾಕರ್

ಸಾರ್ವಜನಿಕ ಆಸ್ಪತ್ರೆಗಳನ್ನು ವೃತ್ತಿಪರವಾಗಿ ನಡೆಸಲು ಸಹಾಯ ಮಾಡುವ ನಿಟ್ಟಿನಲ್ಲಿ ವೈದ್ಯರ ನಿರ್ವಹಣಾ ಕೌಶಲ್ಯದಲ್ಲಿನ ಕೊರತೆಯನ್ನು ತುಂಬಲು ಆಸ್ಪತ್ರೆ ನಿರ್ವಹಣಾ ಕೋರ್ಸ್‌ಗಳನ್ನು ಮುಂದುವರಿಸಲು ಸರ್ಕಾರವು ವೈದ್ಯರಿಗೆ ಧನಸಹಾಯ ನೀಡಲಿದೆ.
ಕೆ.ಸುಧಾಕರ್
ಕೆ.ಸುಧಾಕರ್

ಬೆಂಗಳೂರು:  ಸಾರ್ವಜನಿಕ ಆಸ್ಪತ್ರೆಗಳನ್ನು ವೃತ್ತಿಪರವಾಗಿ ನಡೆಸಲು ಸಹಾಯ ಮಾಡುವ ನಿಟ್ಟಿನಲ್ಲಿ ವೈದ್ಯರ ನಿರ್ವಹಣಾ ಕೌಶಲ್ಯದಲ್ಲಿನ ಕೊರತೆಯನ್ನು ತುಂಬಲು ಆಸ್ಪತ್ರೆ ನಿರ್ವಹಣಾ ಕೋರ್ಸ್‌ಗಳನ್ನು ಮುಂದುವರಿಸಲು ಸರ್ಕಾರವು ವೈದ್ಯರಿಗೆ ಧನಸಹಾಯ ನೀಡಲಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.

ವಿವಿಧ ವಲಯಗಳ ನಿರ್ವಹಣಾ ತರಬೇತಿಯನ್ನು ನೀಡುವ ಬೆಂಗಳೂರಿನ ‘ಐಐಎಂ-ಬಿ’ಯಲ್ಲಿ ಶುಕ್ರವಾರ ಆಸ್ಪತ್ರೆ ನಿರ್ವಹಣಾ (ಹಾಸ್ಪಿಟಲ್‌ ಮ್ಯಾನೇಜ್‌ಮೆಂಟ್‌) ಕೋರ್ಸ್‌ಗೆ ಆರೋಗ್ಯ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್‌ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುಧಾಕರ್‌, ‘ವೈದ್ಯರಿಗೆ ಆಸ್ಪತ್ರೆಯ ಆಡಳಿತದ ನಿರ್ವಹಣೆ ಮಾಡುವ ನಾಯಕತ್ವವು ಅವಶ್ಯಕವಿದೆ. ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಆಸ್ಪತ್ರೆಗಳ ವೈದ್ಯರಿಗೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಬೆಂಗಳೂರು (ಐಐಎಂಬಿ) ವತಿಯಿಂದ ಆಸ್ಪತ್ರೆ ನಿರ್ವಹಣಾ ತರಬೇತಿಯನ್ನು ಕೊಡಿಸಲಾಗುತ್ತದೆ’ ಎಂದು ಪ್ರಕಟಿಸಿದರು. ಇದಕ್ಕೆ ಸರ್ಕಾರದಿಂದ ಹಣ ಸಹಾಯ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ವೈದ್ಯರು ಆಸ್ಪತ್ರೆಯಲ್ಲಿ ರೋಗಿಗೆ ಚಿಕಿತ್ಸೆ ನೀಡುವುದು ಎಷ್ಟುಮುಖ್ಯವೋ, ಆಸ್ಪತ್ರೆಯ ನಿರ್ವಹಣೆಯೂ ಅಷ್ಟೇ ಮುಖ್ಯ. ಆಗ ಮಾತ್ರ ಆರೋಗ್ಯ ಸೇವೆಗಳಲ್ಲಿ ದಕ್ಷತೆ, ಗುಣಮಟ್ಟ, ವೃತ್ತಿಪರತೆ ಕಾಯ್ದುಕೊಳ್ಳಲು ಸಾಧ್ಯ. ಆಸ್ಪತ್ರೆಯೊಂದರ ಸಮಗ್ರ ಪ್ರಗತಿಗೆ ವೈದ್ಯರೇ ಮುಂದಾಳತ್ವ ವಹಿಸಿ ನಿರ್ವಹಣೆ ಮಾಡಬೇಕು. ಈ ನಿಟ್ಟಿನಲ್ಲಿ ಒಂದು ವೃತ್ತಿಪರ ಕೋರ್ಸ್‌ ಆರಂಭಿಸಬೇಕೆಂಬ ಕನಸು ನನಗಿತ್ತು. ಇದಕ್ಕೆ ಪೂರಕವಾಗುವಂತೆ ಐಐಎಂಬಿ ನೂತನ ಆನ್‌ಲೈನ್‌ ಕೋರ್ಸ್‌ ಆರಂಭಿಸಿದೆ. ಮೊದಲ ಹಂತದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ, ಉನ್ನತ ಆಸ್ಪತ್ರೆಗಳ ಹಿರಿಯ ಅಧಿಕಾರಿಗಳು, ಜಿಲ್ಲಾವೈದ್ಯಕೀಯ ಅಧಿಕಾರಿಗಳು, ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕರು ಸೇರಿದಂತೆ ಹಲವರಿಗೆ ಈ ಕೋರ್ಸ್‌ ಮೂಲಕ ನಿರ್ವಹಣಾ ತರಬೇತಿ ಕೊಡಿಸಲು ಕ್ರಮವಹಿಸಲಾಗುವುದು’ ಎಂದರು.

ಕಾರ್ಪೊರೇಟ್‌ ಆಸ್ಪತ್ರೆಗಳು ಉತ್ತಮ ಆಡಳಿತ ವ್ಯವಸ್ಥೆ ಹೊಂದಿವೆ. ಖಾಸಗಿಗೆ ಹೋಲಿಸಿದರೆ, ಸರ್ಕಾರ ತನ್ನ ಆಸ್ಪತ್ರೆಗಳಿಗೆ ಹೆಚ್ಚು ಹಣ ಖರ್ಚು ಮಾಡುತ್ತದೆ. ಆದರೆ ವೈದ್ಯರಿಗೆ ಆಡಳಿತದ ನಿರ್ವಹಣೆಯ ಕೊರತೆ ಇದೆ. ಆದ್ದರಿಂದ ಈ ಹೊಸ ಕೋರ್ಸ್ ವೈದ್ಯರಿಗೆ ಬಹಳ ನೆರವಾಗಲಿದೆ. ಈ ಕೋರ್ಸ್‍ನಿಂದ ರಾಜ್ಯ ಮಾತ್ರವಲ್ಲದೆ, ಇಡೀ ದೇಶದ ವೈದ್ಯರಿಗೆ ನೆರವಾಗಲಿದೆ. ಅಲ್ಲದೆ, ರಾಜ್ಯದ ಸರ್ಕಾರಿ ಆರೋಗ್ಯ ಕ್ಷೇತ್ರ ದೊಡ್ಡ ಸುಧಾರಣೆ ಕಾಣಲು ನೆರವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಐಐಎಂಬಿಯ ಪರಿಣತ ಉಪನ್ಯಾಸಕರು ತರಬೇತಿ ನೀಡಲಿದ್ದಾರೆ. ಇದರಿಂದಾಗಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಆಡಳಿತ ನಡೆಸುವ ಪರಿಣತಿಯನ್ನು ವೈದ್ಯರು ಹೊಂದಬಹುದಾಗಿದೆ. ಈ ಕೋರ್ಸ್‌ನಿಂದ ರಾಜ್ಯ ಮಾತ್ರವಲ್ಲದೆ, ಇಡೀ ದೇಶದ ವೈದ್ಯರಿಗೆ ನೆರವಾಗಲಿದೆ. ಖಾಸಗಿ ಆಸ್ಪತ್ರೆಗಳ ವೈದ್ಯರು ಕೂಡಾ ಈ ಕೋರ್ಸ್‌ನ ಅನುಕೂಲ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಆಸ್ಪತ್ರೆಯ ಸ್ವಚ್ಛತೆಯ ನಿರ್ವಹಣೆ, ಔಷಧ ಪೂರೈಕೆ, ಯಂತ್ರೋಪಕರಣ ಸುಸ್ಥಿತಿ ಕಾಪಾಡುವುದು, ಸಿಬ್ಬಂದಿ ನಿರ್ವಹಣೆ, ಲೆಕ್ಕಪತ್ರಗಳ ನಿರ್ವಹಣೆ ಸೇರಿ ಅನೇಕ ತರಬೇತಿಯನ್ನು ಒಳಗೊಂಡಿದೆ. ವೈದ್ಯಕೀಯ ವಲಯದ ಸಿಬ್ಬಂದಿಗಳು, ವೈದ್ಯರು, ಅಧಿಕಾರಿಗಳು ಐಐಎಂಬಿಯಲ್ಲಿ ನೋಂದಣಿಯಾಗುವ ಮೂಲಕ ಈ ಕೋರ್ಸ್‌ ಸೇರಬಹುದು.

ಆರೋಗ್ಯ ಇಲಾಖೆಯು ಜುಲೈ 7 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ವೈದ್ಯರ ದಿನಾಚರಣೆಯನ್ನು ಆಯೋಜಿಸಲಿದೆ. ಈ ವೇಳೆ ಅವರ ಕೊಡುಗೆಗಳಿಗಾಗಿ ಕೆಲವು ವೈದ್ಯರನ್ನು ಸಾಂಕೇತಿಕವಾಗಿ ಸನ್ಮಾನಿಸಲಾಗುವುದು ಎಂದು ಡಾ ಕೆ ಸುಧಾಕರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com