ಬೆಂಗಳೂರಿಗೆ ಬರಲಿದೆ ‘ಆಯುಷ್ಮಾನ್‌ ಭಾರತ ಡಿಜಿಟಲ್ ಮಿಷನ್‌ ತಂತ್ರಜ್ಞಾನ ಕೇಂದ್ರ'

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ) ಬೆಂಗಳೂರಿನ ಆರೋಗ್ಯಸೌಧದಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ) ತಂತ್ರಜ್ಞಾನ ಕೇಂದ್ರ ಸ್ಥಾಪಿಸುವುದಾಗಿ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ) ಬೆಂಗಳೂರಿನ ಆರೋಗ್ಯಸೌಧದಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ) ತಂತ್ರಜ್ಞಾನ ಕೇಂದ್ರ ಸ್ಥಾಪಿಸುವುದಾಗಿ ತಿಳಿಸಿದೆ.

ನಗರದಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ) ತಂತ್ರಜ್ಞಾನ ಕೇಂದ್ರ ಸ್ಥಾಪನೆಯಾಗಿದ್ದೇ ಆದರೆ, ಇದು ಇಲ್ಲಿಯವರೆಗೆ ಹಿಂದುಳಿದಿರುವ ಕರ್ನಾಟಕದ ಮಿಷನ್‌ನ ಪ್ರಗತಿಗೆ ಗಮನಾರ್ಹವಾದ ಉತ್ತೇಜನವನ್ನು ನೀಡಲಿದೆ.

ನಗರವು ಹೆಚ್ಚಿನ ಸೇವಾ ಪೂರೈಕೆದಾರರನ್ನು ಹೊಂದಿರುವ ಡಿಜಿಟಲ್ ಹಬ್ ಆಗಿದ್ದು, ಈ ಹಿನ್ನೆಲೆಯಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ) ತಂತ್ರಜ್ಞಾನ ಕೇಂದ್ರ ಸ್ಥಾಪನೆಗೆ ಬೆಂಗಳೂರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ನಾಸ್ಕಾಂ ಸೋಮವಾರ ಇಲ್ಲಿ ಏರ್ಪಡಿಸಿದ್ದ `ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್’ ಸಮಾವೇಶದಲ್ಲಿ ಮಾತನಾಡಿದ ಸೆಪ್ಟೆಂಬರ್ 2021 ರಲ್ಲಿ ಎಬಿಡಿಎಂ ಅನ್ನು ಪ್ರಾರಂಭಿಸಿದ ಎನ್‌ಎಚ್‌ಎ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ಆರ್ ಎಸ್ ಶರ್ಮಾ ಅವರು, ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ (ಎಬಿಹೆಚ್ಎ) ಯಲ್ಲಿ ಕರ್ನಾಟವು ಭಾರತದಲ್ಲಿ 13ನೇ ಸ್ಥಾನದಲ್ಲಿದೆ ಎಂದು ಹೇಳಿದರು.

22.33 ಕೋಟಿಯ ಅಖಿಲ ಭಾರತ ಅಂಕಿ ಅಂಶಗಳ ಪೈಕಿ ಆಂಧ್ರಪ್ರದೇಶವು 2.99 ಕೋಟಿ ಎಬಿಎಚ್‌ಎಗಳೊಂದಿಗೆ ಮುಂಚೂಣಿಯಲ್ಲಿದ್ದರೆ, ಕರ್ನಾಟಕವು 64,42,081 ಎಬಿಡಿಎಂ ಖಾತೆಗಳನ್ನು ಹೊಂದಿದೆ. ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ನಂತರ ಕೋವಿನ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಖಾತೆಗಳು ರಚನೆಗೊಂಡಿವೆ ಎಂದು ತಿಳಿಸಿದರು.

ಭಾರತದಲ್ಲಿ ಹೆಲ್ತ್ ಫೆಸಿಲಿಟಿ ರಿಜಿಸ್ಟ್ರಿನಲ್ಲಿ ನೋಂದಾಯಿಸಲಾದ 80,957 ಪರಿಶೀಲಿಸಿದ ಆರೋಗ್ಯ ಸೌಲಭ್ಯಗಳಲ್ಲಿ, ಉತ್ತರ ಪ್ರದೇಶವು 26,824 ರೊಂದಿಗೆ ಮುಂಚೂಣಿಯಲ್ಲಿದೆ. ಕರ್ನಾಟಕವು ಕೇವಲ 12 ಪರಿಶೀಲಿಸಿದ ಆರೋಗ್ಯ ಸೌಲಭ್ಯಗಳೊಂದಿಗೆ 25 ನೇ ಸ್ಥಾನದಲ್ಲಿದೆ, ಅದರಲ್ಲಿಯೂ 97.37 ರಷ್ಟು ಸರ್ಕಾರಿ ಸಂಸ್ಥೆಗಳಿವೆ.

ಭಾರತದಲ್ಲಿ ಹೆಲ್ತ್ ಪ್ರೊಫೆಷನಲ್ಸ್ ರಿಜಿಸ್ಟ್ರಿಯಲ್ಲಿ ನೋಂದಾಯಿಸಲಾದ 19,467 ಆರೋಗ್ಯ ವೃತ್ತಿಪರರ ಬಗ್ಗೆ ಮಾತನಾಡಿ ಮಾಹಿತಿ ನೀಡಿದ ಶರ್ಮಾ ಅವರು, ಆಂಧ್ರಪ್ರದೇಶವು 9,842 ಅತ್ಯಧಿಕ ಆರೋಗ್ಯ ವೃತ್ತಿಪರರನ್ನು ಹೊಂದಿದೆ. ಆದರೆ, ಕರ್ನಾಟಕವು ಕೇವಲ 96 ವೃತ್ತಿಪರರನ್ನು ಹೊಂದಿದೆ ಎಂದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಮಾತನಾಡಿ, ಮಿಷನ್ ಮೋಡ್ ನಲ್ಲಿ ಎಬಿಡಿಎಂನ್ನು ಕರ್ನಾಟಕದಲ್ಲಿ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಯೋಜನೆಯಡಿ ಪ್ರತಿಯೊಬ್ಬ ಅರ್ಹರಿಗೂ ಒಂದು ಗುರುತಿನ ಸಂಖ್ಯೆ ನೀಡಲಾಗುವುದು. ಜತೆಗೆ, ಸರ್ಜನ್ ಮಟ್ಟದ ಪರಿಣತ ವೈದ್ಯರಿಂದ ಹಿಡಿದು ಸಾಮಾನ್ಯ ವೈದ್ಯರವರೆಗೂ ಸಮಗ್ರ ದತ್ತಾಂಶ ಸಂಗ್ರಹಿಸಲಾಗುವುದು. ಈ ಮೂಲಕ, ಆರೋಗ್ಯ ಕ್ಷೇತ್ರವನ್ನು ಕಾಡುತ್ತಿರುವ ನಕಲಿ ವೈದ್ಯರ ಸಮಸ್ಯೆಗೂ ತೆರೆ ಬೀಳಲಿದೆ. ಅಲ್ಲದೆ. ಎಲ್ಲರ ಆರೋಗ್ಯ ರಕ್ಷಣೆ ಮಾಡುವ ನಮ್ಮ ಗುರಿ ವೇಗಗತಿಯನ್ನು ಪಡೆದುಕೊಳ್ಳಲಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com