'ಎಸಿಬಿ' ಕಲೆಕ್ಷನ್ ಸೆಂಟರ್: ಬೆಕ್ಕಿಗೆ ಗಂಟೆ ಕಟ್ಟಲು ನಾನು ಸಿದ್ಧ, ಯಾವುದಕ್ಕೂ ಜಗ್ಗಲ್ಲ; ವರ್ಗಾವಣೆ ಬೆದರಿಕೆ ವಿರುದ್ಧ ಹೈಕೋರ್ಟ್ ಜಡ್ಜ್  ಆಕ್ರೋಶ!

ಭ್ರಷ್ಟಾಚಾರ ನಿಗ್ರಹ ದಳ ಎಸಿಬಿಯು 'ಕಲೆಕ್ಷನ್ ಸೆಂಟರ್' ಆಗಿದೆ, ಎಸಿಬಿ ಭ್ರಷ್ಟಾಚಾರದ ಕೂಪವಾಗಿದೆ, ಅದರ ಮುಖ್ಯಸ್ಥರೇ ಕಳಂಕಿತ ವ್ಯಕ್ತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಈಗ ವರ್ಗಾವಣೆ ಬೆದರಿಕೆಗೆ ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Updated on

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ ಎಸಿಬಿಯು 'ಕಲೆಕ್ಷನ್ ಸೆಂಟರ್' ಆಗಿದೆ, ಎಸಿಬಿ ಭ್ರಷ್ಟಾಚಾರದ ಕೂಪವಾಗಿದೆ, ಅದರ ಮುಖ್ಯಸ್ಥರೇ ಕಳಂಕಿತ ವ್ಯಕ್ತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಈಗ ವರ್ಗಾವಣೆ ಬೆದರಿಕೆಗೆ ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಹೈಕೋರ್ಟ್​ನಲ್ಲಿ ಸೋಮವಾರ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಯ ವಿರುದ್ಧದ ಲಂಚ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಸಭಾಂಗಣದಲ್ಲೇ ತಮಗೆ ಪರೋಕ್ಷವಾಗಿ ವರ್ಗಾವಣೆ ಬೆದರಿಕೆ ಬಂದಿರುವ ವಿಚಾರ ತಿಳಿಸಿ ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕರ ಹಿತದೃಷ್ಟಿಯಿಂದ ವರ್ಗಾವಣೆ ಬೆದರಿಕೆ ಎದುರಿಸಲು ಸಿದ್ಧವಿರುವುದಾಗಿ ಹೇಳಿದರು.

ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್ ಪಿ.ಎಸ್‌. ಮಹೇಶ್‌ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಸಂದೇಶ್‌, ‘ಸಾಂವಿಧಾನಿಕ ಹುದ್ದೆ ನಿಭಾಯಿಸುವ ನ್ಯಾಯಮೂರ್ತಿಗಳು ಯಾವುದೇ ಪಕ್ಷದ ಸಿದ್ಧಾಂತದ ಪರವಾಗಿ ಇರಬಾರದು. ರಾಜ್ಯ ಸರ್ಕಾರ ಐಎಎಸ್‌ ಮತ್ತು ಐಪಿಎಸ್‌ ಲಾಬಿಯ ಆಣತಿಯಂತೆ ನಡೆಯುತ್ತಿದ್ದು ಸರ್ಕಾರವೂ ಅಪರಾಧದ ಭಾಗವಾಗಿದೆ’ ಎಂದು ಆರೋಪಿಸಿದರು.

ಬೆಳಗಿನ ಕಲಾಪದಲ್ಲಿ, ‘ನನಗೆ ವರ್ಗಾವಣೆ ಬೆದರಿಕೆ ಹಾಕಿದ ನ್ಯಾಯಮೂರ್ತಿ ಯಾರು ಎಂಬ ವಿವರವನ್ನೆಲ್ಲಾ ಮಧ್ಯಾಹ್ನದ ಕಲಾಪದಲ್ಲಿ ಆದೇಶದಲ್ಲೇ ಬರೆಯಿಸಿ ತೀರುತ್ತೇನೆ’ ಎಂದು ಪಟ್ಟು ಹಿಡಿದಿದ್ದರು. ಮಧ್ಯಾಹ್ನ ಕಲಾಪ ಮುಂದುವರಿದಾಗ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ ಹಾಜರಾಗಿ, ‘ಸರ್ಕಾರ ಯಾರನ್ನೂ ರಕ್ಷಣೆ ಮಾಡುತ್ತಿಲ್ಲ. ನಿಮಗೆ ನೋವು ಎನಿಸಿದ್ದರೆ ಅದು ನಮಗೇನೂ ಖುಷಿ ಉಂಟು ಮಾಡುವ ಸಂಗತಿಯಾಗಿರುವುದಿಲ್ಲ. ಆದ್ದರಿಂದ, ತಾವು ಯಾವುದಕ್ಕೂ ಬೇಸರ ಮಾಡಿಕೊಳ್ಳಬಾರದು. ಎಸಿಬಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನೂ ನೀಡುತ್ತೇವೆ. ಬಿ ರಿಪೋರ್ಟ್‌ನ ಸಂಪೂರ್ಣ ಮಾಹಿತಿಯನ್ನೂ ಕೊಡುತ್ತೇವೆ. ಸರ್ಕಾರ ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ’ ಎಂಬ ಭರವಸೆ ನೀಡಿದರು.

ಇದಕ್ಕೆ ಸಂದೇಶ್‌, ‘ನನಗೆ ವರ್ಗಾವಣೆಯ ಪರೋಕ್ಷ ಬೆದರಿಕೆ ಹಾಕಲಾಗಿದೆ. ನಾನೀಗ ನ್ಯಾಯಾಂಗದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕಿದೆ. ಜಡ್ಜ್ ಆದ ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ವರ್ಗಾವಣೆ ಬೆದರಿಕೆ ಎದುರಿಸುತ್ತೇನೆ. ಜನರ ಒಳಿತಿಗಾಗಿ ವರ್ಗಾವಣೆಯಾಗಲು ಸಿದ್ಧನಿದ್ದೇನೆ, ನನಗೆ  500ರಲ್ಲಿ ಜೀವನ ಮಾಡಿಯೂ ಗೊತ್ತು,  5,000 ರುನಲ್ಲಿ ಜೀವನ ಮಾಡಿಯೂ ಗೊತ್ತು. ಯಾರ ಹೆದರಿಕೆಯೂ ಇಲ್ಲ, ಬೆಕ್ಕಿಗೆ ಗಂಟೆ ಕಟ್ಟಲು ಸಿದ್ದನಿದ್ದೇನೆ. ಇವತ್ತು ಭ್ರಷ್ಟಾಚಾರ ಸಮಾಜದಲ್ಲಿ ಕ್ಯಾನ್ಸರ್‌ ಆಗಿ ಪರಿಣಮಿಸಿದೆ’ ಎಂದರು.

ಬೆಳಗಿನ ಕಲಾಪದಲ್ಲಿ ತಾವು ಹೇಳಿದಂತೆ ಎಲ್ಲವನ್ನೂ ಮಧ್ಯಾಹ್ನದ ಕಲಾಪದಲ್ಲಿ ಆದೇಶದಲ್ಲಿ ಬರೆಯಿಸಲು ಮುಂದಾಗುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ನಾವದಗಿ, ‘ತಾವು ಎಲ್ಲವನ್ನೂ ಆದೇಶದಲ್ಲಿ ಕಾಣಿಸುವ ಅವಶ್ಯಕತೆ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲುಪ್ತವಾಗಿ ನಿರ್ದೇಶನ ನೀಡಿದರೆ ಸಾಕು’ ಎಂದು ಮನವಿ ಮಾಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಮೂರ್ತಿಗಳು, ಜಿಲ್ಲಾಧಿಕಾರಿ ಮಂಜುನಾಥ್‌ ಅವರ ಸೇವಾ ದಾಖಲೆಯನ್ನು ಹಾಜರುಪಡಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಇದೇ 7ಕ್ಕೆ ಮುಂದೂಡಿದರು. ಆನೇಕಲ್‌ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ಅನುಕೂಲಕರ ಆದೇಶ ನೀಡಲು ಬೇಗೂರು ನಿವಾಸಿ ಅಜಂ ಪಾಷಾ ಎಂಬುವರಿಂದ  5 ಲಕ್ಷ ಲಂಚ ಪಡೆಯಲಾಗಿದೆ ಎಂಬ ಪ್ರಕರಣದಲ್ಲಿ ಅರ್ಜಿದಾರ ಮಹೇಶ್‌ ಆರೋಪಿಯಾಗಿದ್ದಾರೆ. ಎಸಿಬಿ ಪರ ಪಿ.ಎನ್‌.ಮನಮೋಹನ್‌ ಮತ್ತು ಅರ್ಜಿದಾರ ಮಹೇಶ್‌ ಪರ ಹಿರಿಯ ವಕೀಲ ಎ.ಎಸ್‌.ಪೊನ್ನಣ್ಣ ಹಾಜರಾಗಿದ್ದರು.

 ಹಳೆಯ ಪ್ರಕರಣವೊಂದನ್ನು ಪ್ರಸ್ತಾಪಿಸಿದ ಸಂದೇಶ್‌, ‘ಐಎಎಸ್ ಅಧಿಕಾರಿ ಮನೆ ಮೇಲಿನ ದಾಳಿಯಲ್ಲಿ ನಾಲ್ಕೂವರೆ ಕೋಟಿ ಹಣ ಸಿಗುತ್ತೆ. 5 ಕೆಜಿ ಚಿನ್ನ ಸಿಗುತ್ತದೆ. ಕೇಸಿನಲ್ಲಿ ಬಿ ರಿಪೋರ್ಟ್ ಹಾಕಿದಾಗ, ಬಿ ರಿಪೋರ್ಟ್ ಹಾಕಿದ್ದೇಕೆ ಎಂದು ಪ್ರಶ್ನಿಸಿದ ನ್ಯಾಯಾಧೀಶರು ವರ್ಗಾವಣೆಯಾಗುತ್ತಾರೆ. ಮತ್ತೊಬ್ಬ ನ್ಯಾಯಾಧೀಶರು ಬಂದ ಮೇಲೆ ಬಿ ರಿಪೋರ್ಟ್ ಅಂಗೀಕೃತವಾಗುತ್ತದೆ. ಇಂತಹ ಘಟನೆಗಳು ನೋವು ತರಿಸುತ್ತವೆ. ರೆಡ್ ಹ್ಯಾಂಡ್ ಆಗಿ ಲಂಚ ಸಮೇತ ಸಿಕ್ಕಿಬಿದ್ದಿದ್ದರೂ ಬಿ ರಿಪೋರ್ಟ್ ಹೇಗೆ ಹಾಕ್ತಾರೆ. ಸರ್ಚ್ ವಾರೆಂಟ್ ತೆಗೆದುಕೊಂಡರೂ ಸರ್ಚ್ ಮಾಡುವುದಿಲ್ಲ. ಸರ್ಚ್ ವಾರೆಂಟ್ ತೋರಿಸಿಯೇ ವಸೂಲಿ ಮಾಡುತ್ತಾರೆ’ ಎಂದರು.

‘ರಾಜ್ಯದಲ್ಲಿ ಏನು ನಡೆಯುತ್ತಿದೆ. ಅಡ್ವೊಕೇಟ್‌ ಜನರಲ್ ಅವರೇ, ಜಿಲ್ಲಾಧಿಕಾರಿ ಕಚೇರಿಯಲ್ಲಿ ದುಡ್ಡು ಕಲೆಕ್ಷನ್ ಮಾಡಲು ಖಾಸಗಿ ವ್ಯಕ್ತಿಯನ್ನು ನೇಮಿಸಿಕೊಳ್ಳಲಾಗುತ್ತದೆ, ಖಾಸಗಿ ಪಿಎ ಡಿಸಿ ಹತ್ರ ಎಲ್ಲ ಮಾಡಿಸಿಕೊಡುತ್ತೇನೆ ಎಂದರೆ ಅದರರ್ಥ ಏನು, ಇವೆಲ್ಲಾ ಸಂಭಾಷಣೆ ಫೋನ್‌ನಲ್ಲಿ ರೆಕಾರ್ಡ್ ಆಗಿವೆ. ಡಿಸಿ ಒಪ್ಪಿಗೆ ಇಲ್ಲದೆಯೇ ಆತ  5 ಲಕ್ಷ ಲಂಚ ಪಡೆಯಲು ಸಾಧ್ಯವೇ. ಬೇಲಿಯೇ ಎದ್ದು ಹೊಲ ಮೇಯುತ್ತಿದೆಯಲ್ಲವೇ’ ಎಂದು ಸಂದೇಶ್‌ ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com