'ನಿಮ್ಮ ದುಡ್ಡು ಯಾರಿಗೆ ಬೇಕು, ನಮಗೆ ದುಡ್ಡಲ್ಲ ಶಾಂತಿ ಬೇಕು': ಮಾಜಿ ಸಿಎಂ ಸಿದ್ದರಾಮಯ್ಯ ಕೊಟ್ಟ 2 ಲಕ್ಷ ರೂ. ಎಸೆದ ಮುಸ್ಲಿಂ ಮಹಿಳೆ!

ವಿಪಕ್ಷ ನಾಯಕ ಸಿದ್ದರಾಮಯ್ಯನವರು ತಮ್ಮ ಕ್ಷೇತ್ರ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರಕ್ಕೆ ಇಂದು ಭೇಟಿ ನೀಡಿ ಕೆರೂರು ಪಟ್ಟಣ ಹಿಂಸಾಚಾರದಲ್ಲಿ ಗಾಯಗೊಂಡು ಸಂತ್ರಸ್ತರಾದವರ ಕುಟುಂಬಸ್ಥರಿಗೆ ಪರಿಹಾರ ನೀಡಲು ಹೋದ ವೇಳೆ ಮುಸ್ಲಿಂ ಜನಾಂಗದ ಮಹಿಳೆ ತರಾಟೆ ತೆಗೆದುಕೊಂಡ ಕೊಟ್ಟ 2 ಲಕ್ಷ ರೂಪಾಯಿ ಹಣವನ್ನು ಕಾರಿನತ್ತ ಎಸೆದ ಪ್ರಸಂಗ ನಡೆದಿದೆ.
ಬಾದಾಮಿಯಲ್ಲಿ ಗಾಯಾಳುಗಳನ್ನು ವಿಚಾರಿಸಿದ ಸಿದ್ದರಾಮಯ್ಯ, ಹಣ ಎಸೆದ ಮುಸ್ಲಿಂ ಮಹಿಳೆ
ಬಾದಾಮಿಯಲ್ಲಿ ಗಾಯಾಳುಗಳನ್ನು ವಿಚಾರಿಸಿದ ಸಿದ್ದರಾಮಯ್ಯ, ಹಣ ಎಸೆದ ಮುಸ್ಲಿಂ ಮಹಿಳೆ
Updated on

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು ತಮ್ಮ ಕ್ಷೇತ್ರ ಬಾಗಲಕೋಟೆ ಜಿಲ್ಲೆಯ ಬಾದಾಮಿಗೆ ಇಂದು ಭೇಟಿ ನೀಡಿ ಕೆರೂರು ಪಟ್ಟಣ ಹಿಂಸಾಚಾರದಲ್ಲಿ ಗಾಯಗೊಂಡವರ ಕುಟುಂಬಸ್ಥರಿಗೆ ಪರಿಹಾರ ನೀಡಲು ಹೋದ ವೇಳೆ ಮುಸ್ಲಿಂ ಮಹಿಳೆ ತರಾಟೆ ತೆಗೆದುಕೊಂಡು ಕೊಟ್ಟ 2 ಲಕ್ಷ ರೂಪಾಯಿ ಹಣವನ್ನು ಕಾರಿನತ್ತ ಎಸೆದ ಪ್ರಸಂಗ ನಡೆದಿದೆ.

ಮೊನ್ನೆ ಜುಲೈ 6ರಂದು ಹಿಂದೂ-ಮುಸ್ಲಿಮ್ ಕೋಮಿನ ಯುವಕರ ಮಧ್ಯೆ ಕ್ಷುಲ್ಲಕ ವಿಷಯಕ್ಕೆ ಯುವತಿಯರನ್ನು ಚುಡಾಯಿಸಿದ ಕಾರಣಕ್ಕೆ ಗಲಾಟೆ ಆರಂಭವಾಗಿ ಅದು ಘರ್ಷಣೆ ಹಿಂಸಾಚಾರಕ್ಕೆ ತಿರುಗಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಸಹ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಹಲವು ವಾಹನಗಳು ಜಖಂಗೊಂಡಿದ್ದವು. ಕೆರೂರು ಪಟ್ಟಣದಲ್ಲಿ ಸೆಕ್ಷನ್ 144 ಜಾರಿ ಮಾಡಿ ನಿಷೇಧಾಜ್ಞೆ ಹೇರಲಾಗಿತ್ತು. ಘಟನೆಯಲ್ಲಿ ನಾಲ್ವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಕ್ಷೇತ್ರದ ಶಾಸಕರಾಗಿರುವ ಸಿದ್ದರಾಮಯ್ಯ ಗಾಯಗೊಂಡಿದ್ದವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಅವರ ಕುಟುಂಬಸ್ಥರಿಗೆ ಪರಿಹಾರ ಹಣ ನೀಡಲು ಹೋಗಿದ್ದರು. ಹಲ್ಲೆಯಲ್ಲಿ ಗಾಯಗೊಂಡಿದ್ದ ಹನೀಫ್, ರಫೀಕ್ ಸೇರಿದಂತೆ ನಾಲ್ವರಿಗೆ ಸಾಂತ್ವನ ಹೇಳಿ ತಲಾ 50 ಸಾವಿರ ರೂಪಾಯಿಗಳಂತೆ 2 ಲಕ್ಷ ರೂಪಾಯಿ ನೀಡಿದ್ದರು. ಆಗ ರಫೀಕ್  ಸೋದರಿ ರಜ್ಮಾ, ನಮಗೆ ದುಡ್ಡು ಬೇಡ, ನಾವು ಕಷ್ಟಪಟ್ಟು ಕೆಲಸ ಮಾಡಿ ಜೀವನ ನಡೆಸುತ್ತೇವೆ,. ನಮಗೆ ಶಾಂತಿ ಬೇಕು, ನಮ್ಮನ್ನು ನಮ್ಮ ಪಾಡಿಗೆ ಶಾಂತಿಯಿಂದ ಬದುಕಲು ಬಿಡಿ ಎಂದು ಕಾರಿನತ್ತ ಬಿಸಾಕಿದರು.

ಸಿದ್ದರಾಮಯ್ಯನವರು ಮಹಿಳೆಯನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಮಹಿಳೆಯರು ಸಮಾಧಾನಕ್ಕೆ ಬಗ್ಗಲಿಲ್ಲ.  ಮಹಿಳೆಗೆ ಇದು ಸರ್ಕಾರದ ದುಡ್ಡಲ್ಲ, ನಾನು ವೈಯಕ್ತಿಕವಾಗಿ ಕೊಡುತ್ತಿದ್ದೇನೆ ಎಂದು ಹೇಳಿದರೂ ಮಹಿಳೆ ಕೇಳುವ ಸ್ಥಿತಿಯಲ್ಲಿರಲಿಲ್ಲ. 

ಮಹಿಳೆ ಹೇಳುವುದೇನು?: ಘಟನೆ ನಡೆದು ಇಷ್ಟು ದಿನಗಳಾದ ಮೇಲೆ ಬರುತ್ತಿದ್ದಾರೆ, ಅವರ ದುಡ್ಡು ಯಾರಿಗೆ ಬೇಕು, ನಮ್ಮ ಕಷ್ಟ ಕೇಳುವವರು ಯಾರು ಎಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದರು. 

ಇಲ್ಲಿಯವರೆಗೂ ಯಾರು ಬಂದಿಲ್ಲ. ಈಗ ಸಿದ್ದರಾಮಯ್ಯ ಬಂದಿದ್ದಾರೆ. ವೋಟ್ ಕೇಳಬೇಕಾದ್ರೆ ಇವರಿಗೆ ಯಾವುದೇ ಜಾತಿ ಅಡ್ಡ ಬರುವುದಿಲ್ಲ. ನಿಮಗೆ ಕೈ ಮುಗಿತೀನಿ ವೋಟ್ ಹಾಕಿ ಎಂದು ಕೇಳಿಕೊಳ್ಳುತ್ತಾರೆ. ನಾವು ವೋಟ್ ಹಾಕಿದ್ರೆ ತಾನೇ ಅವರು ಅಧಿಕಾರಕ್ಕೆ ಬರುತ್ತಾರೆ. ನಮಗೂ ನ್ಯಾಯ ಬೇಕು, ಹಿಂದೂಗಳಿಗೂ ನ್ಯಾಯ ಬೇಕು. ಎಲ್ಲರೂ ಒಂದೇ ತಾಯಿ ಮಕ್ಕಳ ರೀತಿ ನಡೆದುಕೊಳ್ಳಬೇಕು ಎಂದು ಹೇಳಿದರು.

ನನಗೆ ಹೊಟ್ಟೆ ಹಸಿದಿದೆ ಎಂದು ಭಿಕ್ಷೆ ಬೇಡಿದ್ರೆ ಹೊಟ್ಟೆ ತುಂಬ ರೊಟ್ಟಿ ಕೊಡುತ್ತಾರೆ. ಯಾರಾದ್ರೂ ಬಡಿತಾರೆ ಎಂದರೆ ಯಾರು ಯಾರಿಗೂ ಸಹಾಯ ಮಾಡುವುದಿಲ್ಲ. ನಮಗೆ ಆ ಕಷ್ಟ ಗೊತ್ತಿದೆ. ನಾವು ನಮ್ಮ ಮಕ್ಕಳ ಮುಖ ನೋಡಿ 8-10 ದಿನವಾಗಿದೆ ಎಂದು ಎಂದು ಅಳಲು ತೋಡಿಕೊಂಡರು. 

ನಮಗೆ ಯಾರ ಪರಿಹಾರವೂ ಬೇಡ. ಈ ರೀತಿಯ ಗಲಭೆಗಳು ಮತ್ತೆ ನಡೆಯದಂತೆ ನೋಡಿಕೊಳ್ಳಬೇಕು. ನಮಗೆ ಬಂದ ಪರಿಸ್ಥಿತಿ ಯಾವ ಹಿಂದೂ, ಮುಸ್ಲಿಮರಿಗೂ ಬರಬಾರದು. ಒಂದು ವೇಳೆ ಈ ಘಟನೆಯಲ್ಲಿ ನಮ್ಮದು ತಪ್ಪು ಎಂದು ತಿಳಿದುಬಂದ್ರೆ, ಕುಟುಂಬ ಸಮೇತ ನಾವು ಪೊಲೀಸರಿಗೆ ಶರಣಾಗುತ್ತೇವೆ ಎಂದು ಸಹ ಮಹಿಳೆಯರು ಹೇಳಿದರು. 

ಇದಕ್ಕೂ ಮುನ್ನ ಆಸ್ಪತ್ರೆಯಲ್ಲಿರುವ ಗಾಯಾಳುಗಳ ಯೋಗಕ್ಷೇಮ ವಿಚಾರಿಸಲು ಸಿದ್ದರಾಮಯ್ಯನವರು ಹೋಗಿದ್ದಾಗ ಅಲ್ಲಿ ಕೂಡ  ರೋಗಿಗಳು ಹಣ ಪಡೆಯಲು ನಿರಾಕರಿಸಿದರು. ನಮಗೆ ಹಣ ಬೇಡ, ನೆಮ್ಮದಿ ಬೇಕು, ಬದುಕು ಬೇಕು ಎಂದು ಅಳಲು ತೋಡಿಕೊಂಡರು. ಕೊನೆಗೆ ಸಿದ್ದರಾಮಯ್ಯನವರು ಅವರನ್ನು ಸಮಾಧಾನಪಡಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com