ಸಿದ್ದರಾಮಯ್ಯ 'ಮಾಸ್ ಲೀಡರ್' ಇಮೇಜ್ ಕುಗ್ಗಿಸಲು ಮೆಗಾ ಪ್ಲಾನ್: ಮೂಲ ಕಾಂಗ್ರೆಸ್ಸಿಗರಿಂದ ಅಹಿಂದ ಸಮಾವೇಶ?

ಸಿದ್ದರಾಮಯ್ಯ ಅವರನ್ನು ಅಹಿಂದದ ಸಮೂಹ ನಾಯಕ ಎಂದು ಬಿಂಬಿಸಲು ಅವರ ಕಟ್ಟಾ ಬೆಂಬಲಿಗರು ಹುಟ್ಟುಹಬ್ಬದ ಅಂಗವಾಗಿ ಸಿದ್ದರಾಮೋತ್ಸವ ಸಂಭ್ರಮಾಚರಣೆಗೆ ಮುಂದಾಗಿರುವ ಬೆನ್ನಲ್ಲೇ, ಮೂಲ ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗದವರಿಗಾಗಿ ಬೃಹತ್ ಸಮಾವೇಶವನ್ನು ನಡೆಸಲು ಮುಂದಾಗಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಸಿದ್ದರಾಮಯ್ಯ ಅವರನ್ನು ಅಹಿಂದದ ಸಮೂಹ ನಾಯಕ ಎಂದು ಬಿಂಬಿಸಲು ಅವರ ಕಟ್ಟಾ ಬೆಂಬಲಿಗರು ಹುಟ್ಟುಹಬ್ಬದ ಅಂಗವಾಗಿ ಸಿದ್ದರಾಮೋತ್ಸವ ಸಂಭ್ರಮಾಚರಣೆಗೆ ಮುಂದಾಗಿರುವ ಬೆನ್ನಲ್ಲೇ, ಮೂಲ ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗದವರಿಗಾಗಿ ಬೃಹತ್ ಸಮಾವೇಶವನ್ನು ನಡೆಸಲು ಮುಂದಾಗಿದ್ದಾರೆ. ಮುಂದಿನ ವರ್ಷ 2023ರ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ ಈ ಸಮುದಾಯದವರ ಸಂಕ್ಷಿಪ್ತ ರೂಪವಾದ ಅಹಿಂದ ಸಮಾವೇಶಕ್ಕೆ ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ. 

ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ಸಿದ್ದರಾಮಯ್ಯ ಅವರನ್ನು ಮಾತ್ರ ಇರಲು ಬಿಡದೆ ದಲಿತರನ್ನೂ ಮುನ್ನಲೆಗೆ ತರುವುದು ಪಕ್ಷದ ನಾಯಕರ ತಂತ್ರವಾಗಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ದಲಿತರ ಜೊತೆಗಿದೆ ಎಂಬ ಸಂದೇಶವನ್ನು ರವಾನಿಸಲು ಮತ್ತು ದಲಿತರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ವಿಫಲವಾಗಿದೆ ಎಂಬ ಬಿಜೆಪಿಯ ವಾದವನ್ನು ಸುಳ್ಳಾಗಿಸಲು ಈ ಸಮಾವೇಶ ನಡೆಯುತ್ತಿದೆ. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಇತ್ತೀಚೆಗೆ ಈ ಕುರಿತು ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಾಗಿರುವ ಕಾರಣ ತಾವಾಗಿಯೇ ಇಂತಹ ಶಕ್ತಿ ಪ್ರದರ್ಶನ ನಡೆಸಲು ಸಿದ್ಧರಿಲ್ಲದ ಕಾರಣ ಪರಮೇಶ್ವರ ಅವರಿಗೆ ಆ ಕಾರ್ಯವನ್ನು ವಹಿಸಲಾಗಿದೆ. ಪರಿಶಿಷ್ಟ ಜಾತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪಕ್ಷದ ಹೈಕಮಾಂಡ್ ಅನುಮತಿ ನೀಡಿದ್ದು, ಮೊದಲಿಗೆ ಬಳ್ಳಾರಿ, ಬೆಳಗಾವಿ ಮತ್ತು ವಿಜಯಪುರದಲ್ಲಿ ಆಯೋಜಿಸಲಾಗುತ್ತದೆ. ನಂತರ ಮೈಸೂರು ಮತ್ತು ಬೆಂಗಳೂರಿನಲ್ಲಿ ಇದೇ ರೀತಿಯ ಕಾರ್ಯಕ್ರಮಗಳು ನಡೆಯಲಿವೆ.

ಸಿದ್ದರಾಮಯ್ಯನವರ ಹುಟ್ಟುಹಬ್ಬದ ನಂತರ ವಿಧಾನಸಭೆ ಚುನಾವಣೆವರೆಗೂ ಪಕ್ಷದ ಶಕ್ತಿ ಪ್ರದರ್ಶನವಾಗಲಿದೆ. ಮುಂದಿನ ವರ್ಷ ಅಸೆಂಬ್ಲಿ ಚುನಾವಣೆಗೆ ಮುನ್ನ ಜನರ ನೆನಪಿನಲ್ಲಿ ಉಳಿಯುವ ರೀತಿಯಲ್ಲಿ ಮೂಲ ಕಾಂಗ್ರೆಸ್ ನಾಯಕರು ಕಾರ್ಯಕ್ರಮಗಳನ್ನು, ಸಮಾವೇಶಗಳನ್ನು ಹಮ್ಮಿಕೊಳ್ಳಲಿದ್ದಾರೆ ಎಂದು ನಾಯಕರೊಬ್ಬರು ತಿಳಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯನವರೊಬ್ಬರೇ ಮಾಸ್ ಲೀಡರ್ ಅಲ್ಲ, ತಮ್ಮದೇ ಆದ ವರ್ಚಸ್ಸು ಹೊಂದಿರುವವರು ಬೇರೆಯವರೂ ಇದ್ದಾರೆ ಎಂಬುದನ್ನು ಹೈಕಮಾಂಡ್ ಮುಂದೆ ತೋರಿಸುವುದೂ ಇದರ ಪ್ರಯತ್ನವಾಗಿದೆ. 

ಸಿದ್ದರಾಮಯ್ಯನವರ ಪರ ನಿಂತ ನಾಯಕರನ್ನು ಹೊರತುಪಡಿಸಿ, ಅವರ ಜೊತೆ ಮನಸ್ತಾಪ ಹೊಂದಿರುವ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಸೇರಿದಂತೆ ಉಳಿದವರೆಲ್ಲ ಈ ಆಯಕಟ್ಟಿನ ನಡೆಗೆ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದ್ದು, ಇದಕ್ಕೆ ಡಿ ಕೆ ಶಿವಕುಮಾರ್ ಅವರು ಯೋಜನೆ ಹಾಕಿದ್ದಾರೆ ಎಂದು ಮೂಲಗಳು ಹೇಳುತ್ತವೆ.

2013ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಡಾ ಜಿ ಪರಮೇಶ್ವರ್ ಅವರು ಕೊರಟಗೆರೆಯಲ್ಲಿ ಸೋತಿದ್ದರಿಂದ ಸ್ವಲ್ಪದರಲ್ಲೇ ಸಿಎಂ ಸ್ಥಾನ ಕೈ ತಪ್ಪಿ ಹೋಗಿತ್ತು. ಇದರಿಂದ ಅವರು ಬಹಳ ನೊಂದಿದ್ದಾರೆ. ನಂತರ ಸಿಎಂ ಹುದ್ದೆ ಸಿದ್ದರಾಮಯ್ಯ ಪಾಲಾಗಿ 5 ವರ್ಷ ಕರ್ನಾಟಕದ ಮುಖ್ಯಮಂತ್ರಿಯಾದರು. ಪರಮೇಶ್ವರ್ ಅವರು ನಂತರ ಸಚಿವರಾಗಲು ಬಹಳ ಹರಸಾಹಸಪಟ್ಟು ಬಹಳ ಸಮಯ ಕಾದ ನಂತರ ಸಚಿವರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com