ಮೈಸೂರು ಪ್ರವಾಸೋದ್ಯಮ ಕೇಂದ್ರ ಸ್ಥಾಪನೆಗೆ ಆದೇಶ, ಈ ಬಾರಿ ಅದ್ಧೂರಿ ದಸರಾ: ಚಾಮುಂಡೇಶ್ವರಿ ದರ್ಶನ ಪಡೆದ ಸಿಎಂ ಬೊಮ್ಮಾಯಿ
ಮೈಸೂರು: ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೆಆರ್ ಎಸ್ ಮತ್ತು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದು ಅದಕ್ಕೂ ಮುನ್ನ ಮೈಸೂರು ನಾಡದೇವತೆ ಚಾಮುಂಡೇಶ್ವರಿಯ ವರ್ಧಂತಿ ಅಂಗವಾಗಿ ಪತ್ನಿ ಸಮೇತ ಆಗಮಿಸಿ ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಕನ್ನಡ ನಾಡಿಗೆ ಸುಭಿಕ್ಷೆ ನೀಡಲಿ, ಅಭಿವೃದ್ಧಿ, ಸಮೃದ್ಧಿ ನೀಡಲಿ ಎಂದು ಇಡೀ ಕರ್ನಾಟಕ, ಕನ್ನಡಿಗರ ಪರವಾಗಿ ಪ್ರಾರ್ಥನೆಯನ್ನು ಮಾಡಿದ್ದೇನೆ ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳ ಕಾಲ ಮೈಸೂರು ದಸರಾವನ್ನು ಸಾಂಪ್ರದಾಯಿಕವಾಗಿ ಮಾತ್ರ ಆಚರಣೆ ಮಾಡಲಾಗಿತ್ತು. ಈ ಬಾರಿ ಅದ್ದೂರಿಯಾಗಿ ಆಚರಿಸುತ್ತಿದ್ದೇವೆ. ದಸರಾವನ್ನು ಹಳೆ ಪದ್ಧತಿಯೊಂದಿಗೆ ಹೊಸ ಆಕರ್ಷಣೆಗಳನ್ನು ಸೇರ್ಪಡೆ ಮಾಡುತ್ತೇವೆ. ವಸ್ತು ಪ್ರದರ್ಶನವನ್ನು ಈ ಬಾರಿ ದಸರಾ ಆರಂಭಕ್ಕೆ 15 ದಿನ ಮೊದಲೇ ಆರಂಭಿಸುತ್ತೇವೆ. ಹೆಚ್ಚಿನ ಜನರನ್ನು ಆಕರ್ಷಿಸಲು ಅಂತಾರಾಷ್ಟ್ರೀಯ ಮಟ್ಟದ ವೆಬ್ ಸೈಟ್ ನ್ನು ತಯಾರಿಸಲಿದ್ದೇವೆ ಎಂದರು.
ಮೈಸೂರು ಟೂರಿಸಂ ಸೆಂಟರ್ ಆದೇಶ: ಇನ್ನು 10 ದಿನಗಳೊಳಗೆ ಸರ್ಕಾರ ಮೈಸೂರು ಟೂರಿಸಂ ಸೆಂಟರ್ ಸ್ಥಾಪನೆಗೆ ಆದೇಶವನ್ನು ಹೊರಡಿಸಲಿದೆ. ಒಟ್ಟಾರೆ ಅದ್ದೂರಿಯಾಗಿ ಈ ಬಾರಿ ಮೈಸೂರು ದಸರಾವನ್ನು ಆಯೋಜಿಸಲಾಗುವುದು. ಈ ಬಾರಿ ದಸರಾ ಉದ್ಘಾಟಕರ ಬಗ್ಗೆ ಎಲ್ಲರಲ್ಲಿಯೂ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

