ನ್ಯಾಷನಲ್ ಹೆರಾಲ್ಡ್ ಕೇಸು: ಇಂದು ಇಡಿ ಮುಂದೆ ವಿಚಾರಣೆಗೆ ಹಾಜರಾಗಲಿರುವ ಸೋನಿಯಾ ಗಾಂಧಿ, ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯ ಮುಂದೆ ಇಂದು ಗುರುವಾರ ವಿಚಾರಣೆಗೆ ಹಾಜರಾಗಲಿದ್ದಾರೆ.
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ

ನವದೆಹಲಿ/ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (National Herald Money Laundering Case) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Congress President Sonia Gandhi) ಅವರಿಗೆ ಜಾರಿ ನಿರ್ದೇಶನಾಲಯ (Enforcement Directorate) ನೀಡಿದ್ದ ಸಮನ್ಸ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯ ಮುಂದೆ ಇಂದು ಗುರುವಾರ ವಿಚಾರಣೆಗೆ ಹಾಜರಾಗಲಿದ್ದಾರೆ.

75 ವರ್ಷದ ಸೋನಿಯಾ ಗಾಂಧಿ ಅವರು ಜೂನ್ ತಿಂಗಳಲ್ಲಿ ಕೋವಿಡ್ ಮತ್ತು ಶ್ವಾಸಕೋಶದ ಸೋಂಕಿನ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾದ ನಂತರ ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಕಟ್ಟುನಿಟ್ಟಾಗಿ ಸಲಹೆ ನೀಡಿದ್ದರು. ಜೂನ್ 2 ರಂದು ಸೋನಿಯಾ ಗಾಂಧಿ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ನಂತರ ಜೂನ್ 8 ರಂದು ಇಡಿ ಮುಂದೆ ಹಾಜರಾಗಬೇಕಿದ್ದ ಅವರು ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯದಿಂದ ಹೆಚ್ಚಿನ ಸಮಯವನ್ನು ಕೋರಿದ್ದರು.

ಬಳಿಕ ಜೂನ್ 12 ರಂದು ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರನ್ನು ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶಿಲೀಂದ್ರ ಸೋಂಕಿಗೆ ಚಿಕಿತ್ಸೆ ಪಡೆದ ನಂತರ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿ ವೈದ್ಯರ ನಿರ್ದೇಶನದಂತೆ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಅಂತಿಮವಾಗಿ ಇಂದು ವಿಚಾರಣೆಗೆ ಹಾಜರಾಗುತ್ತಿದ್ದಾರೆ. 

ಇಂದು ಕಾಂಗ್ರೆಸ್ ಬೃಹತ್ ಪ್ರತಿಭಟನೆ: ಇಡಿ ವಿಚಾರಣೆ ಹೆಸರಿನಲ್ಲಿ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ತಮ್ಮ ಪ್ರಭಾವದಿಂದ ದುರ್ಬಳಕೆ ಮಾಡಿಕೊಳ್ಳುತ್ತಿದೆ, ತಮ್ಮ ಅಧಿನಾಯಕಿಗೆ ಕಿರುಕುಳ ನೀಡಲಾಗುತ್ತಿದೆ, ಇಡಿ ತನಿಖೆಯ ನೆಪದಲ್ಲಿ ಗಾಂಧಿ ಕುಟುಂಬದ ರಾಜಕೀಯ ವರ್ಚಸ್ಸನ್ನು ತಗ್ಗಿಸುವ ದುರುದ್ದೇಶವಿದು ಎಂದು ವಿಚಾರಣೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಇಂದು ದೇಶಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. 

ಬೆಂಗಳೂರಿನಲ್ಲಿ ಬೃಹತ್ ರ್ಯಾಲಿ, ಪ್ರತಿಭಟನೆ: ಸೋನಿಯಾ ಗಾಂಧಿಯವರ ಇಡಿ ವಿಚಾರಣೆಯನ್ನು ಖಂಡಿಸಿ ಕೆಪಿಸಿಸಿ ವತಿಯಿಂದ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಮುಂದೆ ಬೆಳಗ್ಗೆ 11 ಗಂಟೆಗೆ ಸೇರಲಿರುವ ಕಾಂಗ್ರೆಸ್ ನಾಯಕರು, ಮುಖಂಡರು ನಂತರ ರಾಜಭವನದವರೆಗೆ ಪ್ರತಿಭಟನಾ ರ್ಯಾಲಿ ರಾಜಭವನ ಚಲೋ ನಡೆಸಲಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿಯೂ ಪ್ರತಿಭಟನಾ ರ್ಯಾಲಿ ಇಂದು ಮತ್ತು ನಾಳೆ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿ ಕೆ ಹರಿಪ್ರಸಾದ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಲಿದ್ದಾರೆ. 

ಬಿಗಿ ಪೊಲೀಸ್ ಬಂದೋಬಸ್ತ್: ಇಂದು ಫ್ರೀಡಂ ಪಾರ್ಕ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಭದ್ರತೆ ನೇತೃತ್ವವನ್ನು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ಅವರಿಗೆ ವಹಿಸಲಾಗಿದ್ದು, 5 ಎಸಿಪಿ, 15 ಇನ್ಸ್​​ಪೆಕ್ಟರ್, 30 ಪಿಎಸ್​ಐ, 600 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅದಾಗ್ಯೂ ಹೆಚ್ಚುವರಿಯಾಗಿ 5 ಕೆಎಸ್​ಆರ್​ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.

ನಗರದಲ್ಲಿ ಸಂಚಾರ ಮಾರ್ಗ ಬದಲಾವಣೆ: ನಗರದಲ್ಲಿ ಕಾಂಗ್ರೆಸ್ ನಾಯಕರ ಬೃಹತ್ ಪ್ರತಿಭಟನೆ ಹಿನ್ನೆಲೆ ಬೆಳಗ್ಗೆ 9 ಗಂಟೆಯಿಂದಲೇ ವಾಹನ ಸಂಚಾರ ಮಾರ್ಗಗಳಲ್ಲಿ ಬದಲಾವಣೆಗಳಾಗಲಿದ್ದು, ಮೆಜೆಸ್ಟಿಕ್​ನಿಂದ ಬರುವ ವಾಹನಗಳು ಮೌರ್ಯ ಸರ್ಕಲ್, ಹಳೇ ಜೆಡಿಎಸ್ ಕಚೇರಿ, ರೇಸ್ ಕೋರ್ಸ್ ರಸ್ತೆ, ಸಿಐಡಿ ಜಂಕ್ಷನ್, ಮಹಾರಾಣಿ ಜಂಕ್ಷನ್, ಕೆ.ಆರ್ ಸರ್ಕಲ್ ಮೂಲಕ ಹೋಗುವಂತೆ ಸಿದ್ದತೆ ನಡೆಸಲಾಗಿದ್ದು, ಎಷ್ಟು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾರೋ ಅದನ್ನು ನೋಡಿಕೊಂಡು ಸಂಚಾರ ಮಾರ್ಗದಲ್ಲಿ ಬದಲಾವಣೆಗಳು ಆಗಲಿವೆ. ಸಂಚಾರ ದಟ್ಟಣೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿದೆ. 

ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೋನಿಯಾ ಗಾಂಧಿ ಅವರ ಪುತ್ರ ಹಾಗೂ ಸಂಸದ ರಾಹುಲ್ ಗಾಂಧಿ ಅವರು ಕಳೆದ ತಿಂಗಳು ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ರಾಹುಲ್ ಗಾಂಧಿ ಅವರು ಒಟ್ಟು 54 ಗಂಟೆ ವಿಚಾರಣೆ ಎದುರಿಸಿದ್ದರು. ಆಗಲೂ ಕರ್ನಾಟಕ ಸೇರಿದಂತೆ ದೇಶಾದ್ಯಂತ ಕಾಂಗ್ರೆಸ್ ನಾಯಕರು ವಿಚಾರಣೆ ಖಂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಪ್ರತಿಭಟನೆಯಲ್ಲಿ ಹಾನಿಯಾಗಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com