ರಾಜ್ಯದ ಗೋಶಾಲೆಗಳಿಂದ ಆನ್ ಲೈನ್ ನಲ್ಲಿ ಹಸುಗಳ ದತ್ತು ಸ್ವೀಕಾರಕ್ಕೆ ಹೊಸ ಪೋರ್ಟಲ್ ಸ್ಥಾಪನೆ

ಕರ್ನಾಟಕದಲ್ಲಿ "ಪುಣ್ಯಕೋಟಿ ದತ್ತು ಯೋಜನೆ" ಮೂಲಕ ನಮ್ಮ ಗೋ-ಸಂಪತ್ತನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ಕರ್ನಾಟಕದಲ್ಲಿ "ಪುಣ್ಯಕೋಟಿ ದತ್ತು ಯೋಜನೆ" ಮೂಲಕ ನಮ್ಮ ಗೋ-ಸಂಪತ್ತನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿದೆ. ಸರ್ಕಾರದ ಈ ಕಾರ್ಯಕ್ರಮದ ಅಡಿಯಲ್ಲಿ ನಮ್ಮ ಗೋವುಗಳನ್ನು ನೋಡಿಕೊಳ್ಳಲು ಮತ್ತು ಗೋಶಾಲೆಗಳನ್ನು ನಿರ್ವಹಿಸುವುದಕ್ಕೆ ಸರ್ಕಾರದೊಂದಿಗೆ ಜನರೂ ಸಹ ಕೈಜೋಡಿಸಲು ಅವಕಾಶ ತೆರೆದುಕೊಳ್ಳುತ್ತದೆ.

ಪುಣ್ಯಕೋಟಿ ದತ್ತು ಯೋಜನೆ ಎಂಬ ಗೋವಿನ ಕಾರ್ಯಕ್ರಮಕ್ಕೆ ಜುಲೈ 28ರಂದು ಕರ್ನಾಟಕದ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಚಾಲನೆ ನೀಡಲಿದ್ದಾರೆ  ಈ ಕಾರ್ಯಕ್ರಮ ಅಡಿಯಲ್ಲಿ ಗೋಶಾಲೆಗಳಲ್ಲಿನ ಹಸುಗಳನ್ನು ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳು ದತ್ತು ಪಡೆದುಕೊಳ್ಳುವುದಕ್ಕೆ ಪ್ರೋತ್ಸಾಹ ನೀಡುತ್ತದೆ. ಗೋಶಾಲೆಗಳಲ್ಲಿರುವ ಹಸುಗಳಿಗೆ ಉತ್ತಮ ಸೌಕರ್ಯ ಮತ್ತು ಸೌಲಭ್ಯ ಒದಗಿಸುವಂತೆ ಸಾರ್ವಜನಿಕರನ್ನು ಉತ್ತೇಜಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.  ಕರ್ನಾಟಕದಲ್ಲಿ ಸರ್ಕಾರವೇ ನಿರ್ಮಿಸಿದ ಸುಮಾರು 200 ಗೋಶಾಲೆಗಳಿದ್ದು, ಗೋವುಗಳ ಆರೈಕೆಯೇ ಅವುಗಳ ಮುಖ್ಯ ಧ್ಯೇಯವಾಗಿದೆ.

ರಾಜ್ಯದಲ್ಲಿ ಒಟ್ಟು 200 ಕ್ಕೂ ಹೆಚ್ಚಿನ ಖಾಸಗಿ ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಆಶ್ರಯ ಕಲ್ಪಿಸಲಾಗಿದೆ. 100 ಸರ್ಕಾರಿ ಗೋಶಾಲೆಗಳನ್ನು  ಹಂತಹಂತವಾಗಿ ಪ್ರಾರಂಭ ಮಾಡುತ್ತಿದ್ದು, ಈ ಎಲ್ಲಾ ಗೋಶಾಲೆಗಳಲ್ಲಿ ದೇಶಿತಳಿ, ಮಿಶ್ರತಳಿ ಜಾನುವಾರಗಳು, ನಿರ್ಗತಿಕ, ನಿಶ್ಯಕ್ತ, ವಯಸ್ಸಾದ, ರೋಗಗ್ರಸ್ಥ, ರೈತರು ಸಾಕಲಾಗದೆ ತಂದು ಬಿಡುವ ಜಾನುವಾರುಗಳು, ಗಂಡು ಕರುಗಳು ಮತ್ತು ನ್ಯಾಯಾಲಯ ಹಾಗೂ ಪೋಲಿಸ್‌ ಕಸ್ಟಡಿಯಿಂದ ವಶಪಡಿಸಿಕೊಂಡ ಜಾನುವಾರುಗಳಿಗೆ ಆಶ್ರಯ ನೀಡಿ ಪೋಷಣೆ ಮಾಡಲಾಗುತ್ತಿದೆ.

ಗೋಶಾಲೆಗಳಲ್ಲಿರುವ ಜಾನುವಾರುಗಳಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಮತ್ತು ಗೋಶಾಲೆಯ ಗೋವುಗಳನ್ನು ಸಂರಕ್ಷಿಸಲು ಸಾರ್ವಜನಿಕರನ್ನು ಪ್ರೇರೇಪಿಸುವುದು, ಗೋಶಾಲೆಗಳನ್ನು ಆರ್ಥಿಕವಾಗಿ ಸದೃಡಗೊಳಿಸುವುದು ಮತ್ತು ಗೋಶಾಲೆಗಳನ್ನು ಸಾರ್ವಜನಿಕರ ಸಹಕಾರದಿಂದ ನಿರಂತರವಾಗಿ ಯಾವುದೇ ಅಡಚಣೆಯಿಲ್ಲದೆ ನಡೆಸುವುದು ಈ ಯೋಜನೆಯ ಉದ್ದೇಶವಾಗಿದೆ.

ಒಂದು ಹಸುವನ್ನು ದತ್ತು ಪಡೆದುಕೊಳ್ಳುವುದಕ್ಕೆ ಒಬ್ಬ ವ್ಯಕ್ತಿಯು ವಾರ್ಷಿಕ 11 ಸಾವಿರ ರೂಪಾಯಿ ಪಾವತಿಸಬೇಕಾಗುತ್ತದೆ. 3 ರಿಂದ 5 ವರ್ಷಗಳ ಅವಧಿಗೆ ಹಸು ದತ್ತು ಪಡೆದುಕೊಳ್ಳುವುದಕ್ಕೆ ಈ ಯೋಜನೆಯಡಿ ಅವಕಾಶವಿದೆ. ಪುಣ್ಯಕೋಟಿ ದತ್ತು ಪೋರ್ಟಲ್‌ನಲ್ಲಿ ಯಾವುದೇ ವ್ಯಕ್ತಿಯು ಗೋಶಾಲೆಯಿಂದ ಹಸುವನ್ನು ದತ್ತು ಪಡೆಯಬಹುದು. ಇದರ ಜೊತೆಗೆ ಗೋವುಗಳನ್ನು ಪೋಷಿಸಬಹುದು ಮತ್ತು ಗೋಶಾಲೆಗಳಿಗೆ ಹಣ ದಾನ ಮಾಡಬಹುದು.

ಗೋಶಾಲೆಗಳಿಗೆ ದೇಣಿಗೆ (Donation) ಯೋಜನೆಯಡಿ ಸಾರ್ವಜನಿಕರು ಪುಣ್ಯಕೋಟಿ ದತ್ತು ಪೋರ್ಟಲ್‌ನಲ್ಲಿರುವ ಯಾವುದೇ ಗೋಶಾಲೆಗಳಿಗೆ ಕನಿಷ್ಠ ರೂ.10 ರುಪಾಯಿಯಿಂದ ತಮ್ಮ ಶಕ್ತಾನುಸಾರ ಎಷ್ಟು ಬೇಕಾದರೂ ಮೂಲಭೂತ ಸೌಕರ್ಯ ಹಾಗೂ ಇತರೆ ವೆಚ್ಚಗಳಿಗಾಗಿ ದೇಣಿಗೆ ನೀಡಬಹುದು. ದೇಣಿಗೆ ನೀಡಲು, https://punyakoti.karahvs.in ಗೆ ಲಾಗಿನ್ ಆಗಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com