ಹುಬ್ಬಳ್ಳಿ: ಹುಲಿ ಗಣತಿ ಕಾರ್ಯ ಕಷ್ಟಸಾಧ್ಯ ಎನ್ನುವ ಇತರ ಹುಲಿ ಮೀಸಲು ಪ್ರದೇಶಗಳಿಗೆ ಉತ್ತರ ಕನ್ನಡ ಜಿಲ್ಲೆಯ ಹುಲಿ ಮೀಸಲು ಪ್ರದೇಶ ಕಾಳಿ ಹುಲಿ ಸಂರಕ್ಷಿತಾ ಪ್ರದೇಶ ಮಾದರಿಯಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಿತಾ ಪ್ರಾಧಿಕಾರ ಮತ್ತು ಭಾರತದ ವನ್ಯಜೀವಿ ಸಂಸ್ಥೆ ಹುಲಿ ಗಣತಿಗೆ ಅಳವಡಿಸಿರುವ ಶಿಷ್ಟಾಚಾರವನ್ನು ಕಾಳಿ ಮೀಸಲು ಪ್ರದೇಶ ಸರಿಯಾದ ರೀತಿಯಲ್ಲಿ ಅನುಸರಿಸುತ್ತಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುವ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಸುಂದರವಾದ ಅರಣ್ಯ ಪ್ರದೇಶ ಮತ್ತು ಪ್ರಮುಖ ಪ್ರವಾಸಿ ತಾಣವೂ ಆಗಿದೆ. ಈ ಹಿಂದೆ 2018ರಲ್ಲಿ ನಡೆಸಲಾದ ಗಣತಿಯಲ್ಲಿ 12 ಹುಲಿಗಳಿರುವುದಾಗಿ ಹೇಳಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಇರಬಹುದು ಅಥವಾ ನಿರೀಕ್ಷೆಗಿಂತ ಕಡಿಮೆ ಇರಬಹುದು ಎಂದು ಅರಣ್ಯಾಧಿಕಾರಿಗಳು ವಿಶ್ವಾಸ ಹೊಂದಿದ್ದಾರೆ.
ಈ ಬಾರಿ ಕ್ಯಾಮರ್ ಟ್ರಾಪ್ ಪ್ರಯೋಗ ಮೂಲಕ ಹುಲಿ ಗಣತಿ ನಡೆಸಲಾಗುತ್ತಿದೆ. ಇದರಿಂದ ಮೀಸಲು ಪ್ರದೇಶದಲ್ಲಿರುವ ವಾಸ್ತವ ಹುಲಿಗಳ ಸಂಖ್ಯೆ ತಿಳಿಯಲು ನೆರವಾಗಲಿದೆ. ಕಾಳಿ ಹುಲಿ ಮೀಸಲು ಪ್ರದೇಶವಲ್ಲದೆ ಉತ್ತರ ಕನ್ನಡ ಜಿಲ್ಲೆಯ ಇತರ ಅರಣ್ಯ ಪ್ರದೇಶಗಳಲ್ಲಿಯೂ ಗಣತಿ ನಡೆಸಲಾಗುತ್ತಿದೆ. ಆಂತರಿಕ ವರದಿ ಪ್ರಕಾರ, ಜಿಲ್ಲೆಯಲ್ಲಿ 30 ಹುಲಿಗಳಿದ್ದು, ಅವುಗಳಲ್ಲಿ ಬಹುತೇಕ ಕಾಳಿ ಮೀಸಲು ಅರಣ್ಯ ಪ್ರದೇಶದಲ್ಲಿವೆ. ಯಲ್ಲಾಪುರ, ಶಿರಸಿ, ಹಳಿಯಾಳ ವಿಭಾಗದಿಂದಲೂ ಹುಲಿಗಳು ಇರುವ ಬಗ್ಗೆ ವರದಿಯಾಗಿದೆ.
ಎನ್ ಟಿಸಿಎ ಮತ್ತು ಭಾರತದ ವನ್ಯಜೀವಿ ಸಂಸ್ಥೆಯ ಶಿಷ್ಠಾಚಾರದಂತೆ ಹುಲಿ ಗಣತಿ ಕಾರ್ಯ ನಡೆಸಲಾಗುತ್ತದೆ. ಈ ಉದ್ದೇಶಕ್ಕಾಗಿ ಸ್ವಯಂ ಸೇವಕರಿಗೆ ಲೈನ್ ಟ್ರಾನ್ಸೆಕ್ಟ್ ಸಮೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಹುಲಿಗಳ ನಿಖರವಾದ ಸಂಖ್ಯೆ ತಿಳಿಯಲು ಸರಿಯಾಗಿ ಈ ಕಾರ್ಯವಿಧಾನವನ್ನು ಅನುಸರಿಸಬೇಕು ಎಂದು ಅರಣ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆಯ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯ ಹುಲಿಗಳಿರುವುದಾಗಿ ಅರಣ್ಯ ಇಲಾಖೆ ಹೇಳಿದೆ.
ಕೇರಳ, ತಮಿಳುನಾಡಿನೊಂದಿಗೆ ಕರ್ನಾಟಕ ಹುಲಿಗಳಿಗೆ ಪ್ರಮುಖ ಆವಾಸ ಸ್ಥಳವಾಗಿದೆ. ಇದೇ ರೀತಿಯಾಗಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿವಿಧ ರೀತಿಯ ಪ್ರಾಣಿಗಳಿವೆ. ಇಲ್ಲಿ ಹುಲಿಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement