ಈಗಿನ ಪೀರ್ ಪಾಷಾ ಬಂಗಲೆ ಇರುವ ಜಾಗ ಮೂಲ ಅನುಭವ ಮಂಟಪವಾಗಿತ್ತು: ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ

ಬಸವಕಲ್ಯಾಣದ ಈಗಿನ ಪೀರ್ ಪಾಷಾ ಬಂಗಲೆ ಮೂಲ ಅನುಭವ ಮಂಟಪವಾಗಿದೆ. ಕೂಡಲೇ ಅದನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಭಾರತ ಪುರಾತತ್ವ ಇಲಾಖೆಯಿಂದ ಸಂಶೋಧನೆಯಾಗಬೇಕೆಂದು ರಾಜೇಶ್ವರ ಶಿವಾಚಾರ್ಯರು ಹೇಳಿದ್ದಾರೆ.
ಬಸವಕಲ್ಯಾಣದಲ್ಲಿ ಬೀದರ್ ಡಿಸಿ ಗೋವಿಂದರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದ ಸ್ವಾಮೀಜಿಗಳು.
ಬಸವಕಲ್ಯಾಣದಲ್ಲಿ ಬೀದರ್ ಡಿಸಿ ಗೋವಿಂದರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದ ಸ್ವಾಮೀಜಿಗಳು.
Updated on

ಬೀದರ್: ಬಸವಕಲ್ಯಾಣದ ಈಗಿನ ಪೀರ್ ಪಾಷಾ ಬಂಗಲೆ ಮೂಲ ಅನುಭವ ಮಂಟಪವಾಗಿದೆ. ಕೂಡಲೇ ಅದನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಭಾರತ ಪುರಾತತ್ವ ಇಲಾಖೆಯಿಂದ ಸಂಶೋಧನೆಯಾಗಬೇಕೆಂದು ರಾಜೇಶ್ವರ ಶಿವಾಚಾರ್ಯರು ಹೇಳಿದ್ದಾರೆ.

ಬಸವಕಲ್ಯಾಣದ ಥೇರ್ ಮೈದಾನದ ಸಭಾಭವನದಲ್ಲಿ ಭಾನುವಾರ 'ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ' ಸಮಾವೇಶ ನಡೆಯಿತು.

ಈ ವೇಳೆ ಮಾತನಾಡಿದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿಗಳು, ನಗರದ ಪೀರ ಪಾಷಾ ಬಂಗಲೆ ಮೂಲ ಅನುಭವ ಮಂಟಪವೆಂದು ಸ್ಥಳೀಯ ಮತ್ತು ದಾಖಲಾತಿಗಳ ಮೂಲಕ ತಿಳಿದುಬಂದಿದೆ. ರಾಜ್ಯ ಸರ್ಕಾರ ಕೂಡಲೇ ಭಾರತ ಪುರಾತತ್ವ ಇಲಾಖೆಗೆ ಸಂಶೋಧನೆ ನಡೆಸಲು ಶಿಫಾರಸ್ಸು ಮಾಡಬೇಕು. ಪ್ರಧಾನಿ ಮೋದಿಗೆ ಖುದ್ದಾಗಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಕೆಲ ಗೊಂದಲದ ಕಾರಣದಿಂದ ಮಠಾಧೀಶರು ಭಾಗಿಯಾಗಲು ಆಗಿಲ್ಲ. ಅಷ್ಟಕ್ಕೂ ಸಮಾವೇಶದ ಬಗ್ಗೆ ಕೆಲವು ಕಡೆ ತಪ್ಪಾಗಿ ಮಾಹಿತಿ ರವಾನೆಯಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಠಾಧೀಶರು ಭಾಗಿಯಾಗಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿ ಹಲವೆಡೆಯಿಂದ ಮಠಾಧೀಶರು ಆಗಮಿಸಿದ್ದಾರೆ. ಕಾರಣಾಂತರದಿಂದ ಕೆಲ ಮಠಾಧೀಶರು ಬರಲಾಗಿಲ್ಲ. ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಸರ್ಕಾರ ಸ್ಪಂದಿಸದೇ ಹೋದರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ತಿಳಿಸಿದರು.

12ನೇ ಶತಮಾನದಲ್ಲಿ ಶರಣರು ವಚನ ಸಾಹಿತ್ಯ ಮುಖಾಂತರ ನಮ್ಮ ಆಚಾರ ವಿಚಾರ ಮತ್ತು ಸಂಸ್ಕೃತಿ ಎತ್ತಿ ಹಿಡಿದಿದ್ದರು. ಹೀಗಾಗಿ ನಿಖರವಾದ ವಿಷಯಗಳನ್ನು ಜಗತ್ತಿಗೆ ತಿಳಿಸಬೇಕಾದರೆ ನಿರಂತರ ಸಂಶೋಧನೆ ಅವಶ್ಯಕತೆ ಇದ್ದು, ಸಂಬಂಧಪಟ್ಟ ಇಲಾಖೆಗಳನ್ನು ಒಟ್ಟುಗೂಡಿಸಿ ಬಸವಕಲ್ಯಾಣದಲ್ಲಿ ಸಂಶೋಧನೆ ಕೇಂದ್ರ ಸ್ಥಾಪಿಸಬೇಕೆಂದು ಆಗ್ರಹಿಸಲಾಗಿದೆ. ವಿಶ್ವದ ಪ್ರಥಮ ಸಂಸತ್ತಾದ ಮೂಲ ಅನುಭವ ಮಂಟಪದ ಜೊತೆಗೆ ಶರಣರ ಕುರುಹು ಇರುವ ಸ್ಥಳಗಳನ್ನು ಗುರುತಿಸಿ ಅನುಭವ ಮಂಟಪ ಕಾರಿಡಾರ್ ಯೋಜನೆ ಹಾಕಿಕೊಂಡು ವಿಶ್ವದ ಸ್ಮಾರಕ ಮಾಡಲು ಸುಮಾರು ರೂ.5 ಸಾವಿರ ಕೋಟಿ ಮೀಸಲಿಡಬೇಕು ಎಂದು ಆಗ್ರಹಿಸಿದರು.

ಬಸವಕಲ್ಯಾಣ ಜಾಗತಿಕ ಕೇಂದ್ರವಾಗಬೇಕೆಂಬುದು ಮಠಾಧೀಶರ ಹಾಗೂ ಜನತೆಯ ಒತ್ತಾಸೆಯಾಗಿದ್ದು, ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಬಸವಕಲ್ಯಾಣ ಶಾಸಕ ಶರಣು ಸಲ್ಗಾರ್ ಅವರು ಮಾತನಾಡಿ, ಸ್ವಾಮೀಜಿಗಳ ಆಗ್ರಹಕ್ಕೆ ನನ್ನ ಬೆಂಬಲವಿದೆ. ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ, ಭೂಮಿ ವಶಪಡಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಗುತ್ತದೆ. ಬೀದರ್ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮೂಲಕ ಮನವಿ ಪತ್ರ ಸಲ್ಲಿಸಿ, ಸಮೀಕ್ಷೆ ನಡೆಸುವಂತೆ ಮನವಿ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಮಠಾಧೀಶರು ಸರ್ಕಾರದ ಮೇಲೆ ಒತ್ತಡ ಹೇರಲು ಪೀರ್ ಪಾಷಾ ಬಂಗಲೆಯವರೆಗೆ ಪಾದಯಾತ್ರೆ ನಡೆಸಲು ಚಿಂತನೆ ನಡೆಸಿದ್ದರು. ಆದರೆ, ಸ್ಥಳೀಯ ಆಡಳಿತ ಮಂಡಳಿಯ ಮನವಿ ಹಿನ್ನೆಲೆಯಲ್ಲಿ ಬಸವಕಲ್ಯಾಣದ ಥೇರ್ ಮೈದಾನದ ರ್ಯಾಲಿ ನಡೆಸಿದರು.

ನ್ಯಾಯಾಲಯ ಷರತ್ತುಬದ್ಧ ಅನುಮತಿ ನೀಡಿದ್ದರಿಂದ ರ್ಯಾಲಿಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭಾಗಿಯಾಗಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com