ಬೆಂಗಳೂರು: 153 ಆನೆಗಳ ದತ್ತು ಪಡೆದು ಪೋಷಣೆ ಮಾಡುತ್ತಿರುವ ಗುಜರಾತ್‌ನ ಜಾಮ್‌ನಗರದ ರಾಧಾ ಕೃಷ್ಣ ದೇವಾಲಯ ಕಲ್ಯಾಣ ಟ್ರಸ್ಟ್'ಗೆ ಹೈಕೋರ್ಟ್ ಮಂಗಳವಾರ ಆನೆಗಳ ಆರೈಕೆ ಹಾಗೂ ಪಾಲನೆಗೆ ಮಾರ್ಗಸೂಚಿಗಳನ್ನು ನೀಡಿದೆ.
ಮೈಸೂರು ರಾಜಮನೆತನದ ನಾಲ್ಕು ಆನೆಗಳನ್ನು ಗುಜರಾತ್ ಮೂಲದ ರಾಧಾಕೃಷ್ಣ ದೇವಾಲಯ ಕಲ್ಯಾಣ ಟ್ರಸ್ಟ್‌ಗೆ ಹಸ್ತಾಂತರಿಸುವುದನ್ನು ಪ್ರಶ್ನಿಸಿ ಎಂ ಎಸ್ ಮುರುಳೀಧರ ಎಂಬುವವರು ಹೈಕೋರ್ಟ್'ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ಪರಿಶೀಲಿಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠ, ಅರ್ಜಿಯನ್ನು ವಜಾಗೊಳಿಸಿ, ಆನೆಗಳ ಆರೈಕೆ ಹಾಗೂ ಪೋಷಣೆಗೆ ಮಾರ್ಗಸೂಚಿಯನ್ನು ಹೊರಡಿಸಿದೆ.
ಕೆಲ ವರ್ಷಗಳ ಹಿಂದೆ ನಾಲ್ಕು ಆನೆಗಳನ್ನು ಸರ್ಕಸ್‌ನಿಂದ ರಕ್ಷಿಸಲಾಗಿತ್ತು. ನ್ಯಾಯಾಲಯದ ಆದೇಶ ನಂತರ ಮೈಸೂರು ರಾಜಮನೆತನ ಆನೆಗಳ ಪೋಷಣೆ ಮಾಡಲು ಸ್ವಯಂಪ್ರೇರಿತವಾಗಿ ಮುಂದೆ ಬಂದಿತ್ತು. 2017ರಲ್ಲಿ ಆನೆಗಳನ್ನು ಮಾವುತರು ಸರಿಯಾಗಿ ನೋಡುಕೊಳ್ಳುತ್ತಿಲ್ಲ ಎಂದು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದರು. ಬಳಿಕ ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಟ್ರಸ್ಟ್'ಗೆ ದತ್ತು ನೀಡಿದ್ದರು.
ವಿಚಾರಣೆ ವೇಳೆ ಟ್ರಸ್ಟ್ ಪರ ವಕೀಲರು, 'ಪ್ರಾಣಿಗಳ ಕಲ್ಯಾಣದ ಉದ್ದೇಶದಿಂದಲೇ ಗುಜರಾತ್‌ನ ಜಾಮ್‌ನಗರದಲ್ಲಿ ಟ್ರಸ್ಟ್ ರಚಿಸಿ, ಉತ್ತಮ ಕಾರ್ಯದಲ್ಲಿ ತೊಡಗಿವೆ. ಅನೆಗಳನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡಲಾಗುತ್ತಿದೆ. ಟ್ರಸ್ಟ್ ಆನೆಗಳನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿಲ್ಲ' ಎಂದು ಹೇಳಿದರು.
ಈ ವೇಳೆ ನ್ಯಾಯಾಲಯವು ನ್ಯಾಯಾಲಯದ ಮುಂದೆ ಹೇಳಿದಂತೆಯೇ ಆನೆಗಳ ಕೊನೆಯುಸಿರುವವರೆಗೂ ಅವುಗಳ ಕಾಳಜಿ, ಪೋಷಣೆ ಹಾಗೂ ಅವುಗಳಿಗೆ ಸೌಲಭ್ಯ ನೀಡುವುದನ್ನು ಟ್ರಸ್ಟ್ ಮುಂದುವರೆಸಬೇಕು ಎಂದು ತಿಳಿಸಿತು.
Advertisement