ಬೆಂಗಳೂರಿನಲ್ಲಿ ಪ್ರಧಾನಿ ಮೋದಿ: ಐಐಎಸ್ಸಿಯಲ್ಲಿ ಮೆದುಳು ಸಂಶೋಧನಾ ಕೇಂದ್ರ ಉದ್ಘಾಟನೆ

ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿ ಸೋಮವಾರ ಮಧ್ಯಾಹ್ನ ಬೆಂಗಳೂರಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಸುಮಾರು 15 ಸಾವಿರ ಕೋಟಿ ರೂಪಾಯಿಗಳ ಬೆಂಗಳೂರು ಉಪ ನಗರ ರೈಲು ಯೋಜನೆ ಸೇರಿದಂತೆ 33 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ  ಹಲವು ಮಹತ್ವದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ. 
ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ಮಿದುಳಿನ ಸಂಶೋಧನಾ ಕೇಂದ್ರವನ್ನು ಸೋಮವಾರ ಉದ್ಘಾಟಿಸಿದರು
ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ಮಿದುಳಿನ ಸಂಶೋಧನಾ ಕೇಂದ್ರವನ್ನು ಸೋಮವಾರ ಉದ್ಘಾಟಿಸಿದರು
Updated on

ಬೆಂಗಳೂರು: ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿ ಸೋಮವಾರ ಮಧ್ಯಾಹ್ನ ಬೆಂಗಳೂರಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸುಮಾರು 15 ಸಾವಿರ ಕೋಟಿ ರೂಪಾಯಿಗಳ ಬೆಂಗಳೂರು ಉಪ ನಗರ ರೈಲು ಯೋಜನೆ ಸೇರಿದಂತೆ 33 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ  ಹಲವು ಮಹತ್ವದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ. 

ನಾಳೆ ಬೆಳಗ್ಗೆ 6.30ಕ್ಕೆ ಮೈಸೂರು ಅರಮನೆ ಮುಂಭಾಗ ಅಂತಾರಾಷ್ಟ್ರೀಯ ಯೋಗ ದಿನ (International yoga day) ಕಾರ್ಯಕ್ರಮದಲ್ಲಿ ಪ್ರಧಾನಿಯವರು ಭಾಗಿಯಾಗಲಿದ್ದು ಈ ಸಂದರ್ಭದಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ಜೊತೆಯಾಗಲಿದ್ದಾರೆ. 

ಯಲಹಂಕ ವಾಯುನೆಲೆಗೆ ಆಗಮನ: ಇಂದು ಮಧ್ಯಾಹ್ನ 12 ಗಂಟೆ 5 ನಿಮಿಷಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿನ ಯಲಹಂಕ ವಾಯುನೆಲೆಗೆ ಬಂದಿಳಿದ ಮೋದಿಯವರನ್ನು ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೊಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ರಕ್ಷಣಾ ಇಲಾಖೆಯ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು.

ನಂತರ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಕ್ಯಾಂಪಸ್‌ಗೆ ರಸ್ತೆಮಾರ್ಗ ಮೂಲಕ ಆಗಮಿಸಿದ ಮೋದಿ ಅವರು ಸೆಂಟರ್ ಫಾರ್ ಬ್ರೈನ್ ರಿಸರ್ಚ್ (CBR) ಮೆದುಳು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದರು, ಇದಕ್ಕಾಗಿ ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಶ್ ಗೋಪಾಲಕೃಷ್ಣ ಅವರು 450 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ ನಂತರ ಪ್ರಧಾನಿಯವರು ಬಾಗ್ಚಿ-ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಅಡಿಪಾಯ ಹಾಕಿದರು.

ಕೆಂಗೇರಿ ಬಳಿಯ ಕೊಮ್ಮಘಟ್ಟಕ್ಕೆ ತೆರಳಿರುವ ಮೋದಿ ಅಲ್ಲಿ 50,000ಕ್ಕೂ ಅಧಿಕ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಡಾ. ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್) ಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ಬೇಸ್ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ನ್ನು ಉದ್ಘಾಟಿಸಿದರು. ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. 

ಸಾಯಂಕಾಲ ಮೈಸೂರಿಗೆ: ಇಂದು ಸಂಜೆ 5.30ಕ್ಕೆ ಮೈಸೂರಿಗೆ ತೆರಳಿ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿ ನಾಗನಹಳ್ಳಿ ರೈಲು ನಿಲ್ದಾಣದಲ್ಲಿ ಕೋಚಿಂಗ್ ಟರ್ಮಿನಲ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ (AIISH) ‘ಸಂಪರ್ಕ ದೋಷ ಹೊಂದಿರುವ ವ್ಯಕ್ತಿಗಳ ಶ್ರೇಷ್ಠತಾ ಕೇಂದ್ರ’ವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ನಂತರ ಸಂಜೆ 7 ಗಂಟೆಗೆ ಸುತ್ತೂರು ಮಠಕ್ಕೆ ಭೇಟಿ ನೀಡಲಿರುವ ಪ್ರಧಾನಿ, ರಾತ್ರಿ 7:45ಕ್ಕೆ  ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಚಾಮುಂಡಿ ಬೆಟ್ಟದ ಮೇಲಿರುವ ನಾಡದೇವತೆಯ ಆಶೀರ್ವಾದ ಪಡೆಯಲಿದ್ದಾರೆ. ಅಲ್ಲಿ ವಿಶೇಷ ಸಂಕಲ್ಪ ಮಾಡಿ ಪೂಜೆ ಸಲ್ಲಿಸಲಿದ್ದಾರೆ. 

ಪ್ರಧಾನ ಮಂತ್ರಿಯವರು ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಸ್ಟಾರ್ ಹೋಟೆಲ್‌ನಲ್ಲಿ ರಾತ್ರಿ ತಂಗುತ್ತಾರೆ. ನಾಳೆ ಬೆಳಗ್ಗೆ 6.30ರಿಂದ ಮೈಸೂರು ಅರಮನೆಯಲ್ಲಿ ಆರಂಭವಾಗುವ ಯೋಗ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುಮಾರು 9.45 ಕ್ಕೆ ಪಾದಯಾತ್ರೆಯಲ್ಲಿ ಭಾಗವಹಿಸಿದ ನಂತರ ರಾಷ್ಟ್ರ ರಾಜಧಾನಿಗೆ ತೆರಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com