ಪ್ರಧಾನಿ ಮೋದಿ ಇಂದು ಆಗಮನ: ಬೆಂಗಳೂರು, ಮೈಸೂರಿನಲ್ಲಿ ಭಾರೀ ಭದ್ರತೆ, ಸಂಚಾರ ಮಾರ್ಗ ಬದಲಾವಣೆ, ಪರ್ಯಾಯ ವ್ಯವಸ್ಥೆ

ಪ್ರಧಾನಿ ನರೇಂದ್ರ ಮೋದಿ(PM Narendra Modi) ಎರಡು ದಿನಗಳ ಭೇಟಿಗೆ ಕರ್ನಾಟಕಕ್ಕೆ ಆಗಮಿಸುತ್ತಿದ್ದು ಬೆಂಗಳೂರು ಹಾಗೂ ಮೈಸೂರು ಅವರ ಪ್ರವಾಸ ಕಾರ್ಯಕ್ರಮದಲ್ಲಿ ನಿಗದಿಯಾಗಿವೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on

ಬೆಂಗಳೂರು/ಮೈಸೂರು: ಪ್ರಧಾನಿ ನರೇಂದ್ರ ಮೋದಿ(PM Narendra Modi) ಎರಡು ದಿನಗಳ ಭೇಟಿಗೆ ಕರ್ನಾಟಕಕ್ಕೆ ಆಗಮಿಸುತ್ತಿದ್ದು ಬೆಂಗಳೂರು ಹಾಗೂ ಮೈಸೂರು ಅವರ ಪ್ರವಾಸ ಕಾರ್ಯಕ್ರಮದಲ್ಲಿ ನಿಗದಿಯಾಗಿವೆ.

ದೆಹಲಿಯಿಂದ ಇಂದು ಬೆಳಗ್ಗೆ 11.55ಕ್ಕೆ ಯಲಹಂಕ ವಾಯು ನೆಲೆಗೆ ಬಂದಿಳಿಯುವ ಪ್ರಧಾನ ಮಂತ್ರಿಗಳು, ಮಲ್ಲೇಶ್ವರದ ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಡಾ| ಬಿ.ಆರ್‌.ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್‌ ಹಾಗೂ ಕೆಂಗೇರಿ ಸಮೀಪದ ಕೊಮ್ಮಘಟ್ಟದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಗಳ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಸೇನಾ ನೇಮಕಾತಿ ಯೋಜನೆ ‘ಅಗ್ನಿಪಥ್‌’ ವಿರೋಧಿಸಿ ಕೆಲ ಸಂಘಟನೆಗಳು ‘ಭಾರತ್‌ ಬಂದ್‌’ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ಕಾರ್ಯಕ್ರಮಗಳಿಗೆ ಮತ್ತು ಅವರು ಸಂಚರಿಸುವ ಪ್ರದೇಶಗಳಿಗೆ ಮುಂಜಾಗ್ರತಾ ಕ್ರಮವಾಗಿ ಸುಮಾರು 10 ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಸಂಚಾರ ವ್ಯವಸ್ಥೆ ಬದಲಾವಣೆ, ಪರ್ಯಾಯ ಮಾರ್ಗ: ಪ್ರಧಾನ ಮಂತ್ರಿಗಳು ಪಾಲ್ಗೊಳ್ಳುವ ಕಾರ್ಯಕ್ರಮಗಳ ಸುತ್ತಮುತ್ತಲಿನ ಪ್ರದೇಶ ವ್ಯಾಪ್ತಿಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

ಬೆಳಗ್ಗೆ 11ರಿಂದ 1ರವರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮತ್ತು ಅಲ್ಲಿಂದ ನಗರಕ್ಕೆ ಆಗಮಿಸುವ ಸಾರ್ವಜನಿಕರು ಕಾವೇರಿ ವೃತ್ತ, ಮೇಖ್ರಿವೃತ್ತ ಮತ್ತು ಹೆಬ್ಬಾಳ ಫ್ಲೈಓವರ್‌ ಬಳಸದೆ ಬೇರೆ ಮಾರ್ಗದಲ್ಲಿ ಸಾಗಬೇಕು. ತುಮಕೂರು ರಸ್ತೆ, ಕೆ.ಆರ್‌.ಪುರ, ಯಶವಂತಪುರ, ಯಲಹಂಕ, ದೇವನಹಳ್ಳಿ ಕಡೆ ಸಾಗುವ ಜನರು ಅನ್ಯ ಮಾರ್ಗದಲ್ಲಿ ಸಾಗಬೇಕು.

ಮೈಸೂರು ರಸ್ತೆ ಮತ್ತು ನೈಸ್‌ ಬ್ರಿಡ್ಜ್‌ ಕಡೆಯಿಂದ ಕೆಂಗೇರಿ ಹಾಗೂ ಉತ್ತರಹಳ್ಳಿ ರಸ್ತೆ ಕಡೆಯಿಂದ ಕೆಂಗೇರಿ ಮತ್ತು ಮೈಸೂರು ರಸ್ತೆಗೆ ಸಂಚಾರ ನಿರ್ಬಂಧ, ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಮೈಸೂರು-ಬೆಂಗಳೂರು ರಸ್ತೆ ಮತ್ತು ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾರೀ ವಾಹನ ಸಂಚಾರ ನಿಷೇಧಸಲಾಗಿದೆ. ಮಧ್ಯಾಹ್ನ 1ರಿಂದ 3.30ವರೆಗೆ ಕೊಮ್ಮಘಟ್ಟಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಹೇರಲಾಗಿದೆ.

ಪ್ರಧಾನಿ ಮಂತ್ರಿಗಳು ಸಂಚರಿಸುವ ಮಾರ್ಗದ ಉದ್ದಕ್ಕೂ ನಿನ್ನೆಯಿಂದಲೇ ಪೊಲೀಸರನ್ನು ಕಾವಲು ಹಾಕಲಾಗಿದೆ. ಭಾರತ್‌ ಬಂದ್‌ ಕರೆ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳು ಭಾಗವಹಿಸುವ ಕಾರ್ಯಕ್ರಮಗಳ ವೇಳೆ ಕೂಡಾ ಕೆಲವರು ಪ್ರತಿಭಟನೆ ನಡೆಸಬಹುದು ಎಂದು ಸರ್ಕಾರಕ್ಕೆ ಗುಪ್ತಚರ ವರದಿ ಸಲ್ಲಿಸಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪ್ರಧಾನಿಗಳ ಕಾರ್ಯಕ್ರಮಗಳಿಗೆ ಹದ್ದಿನ ಕಣ್ಣಿಡಲಾಗಿದೆ.

ಮೈಸೂರಿನಲ್ಲಿ ಸಂಚಾರ ಬದಲಾವಣೆ, ವ್ಯವಸ್ಥೆ: ಪ್ರಧಾನಿ ಮೋದಿಯವರು ಇಂದು ಸಂಜೆ ಮೈಸೂರಿಗೆ ತೆರಳುತ್ತಿದ್ದು, ಬಸ್ ಸಂಚಾರ ಹಾಗೂ ನಿಲ್ದಾಣಗಳಲ್ಲಿ ಬದಲಾವಣೆ ಮಾಡಲಾಗಿದೆ. ಹೊರಭಾಗದಿಂದ ಬಸ್‌ಗಳು ಸಿಟಿ ಪ್ರವೇಶ ಮಾಡದಂತೆ ಮಾರ್ಗ ಬದಲಾವಣೆ ಮಾಡಲಾಗಿದ್ದು, ದ್ವಿಚಕ್ರ, ನಾಲ್ಕು ಚಕ್ರ ಹಾಗೂ ಬಸ್ ನಿಲುಗಡೆಯಲ್ಲೂ ಬದಲಾವಣೆ ಮಾಡಲಾಗಿದೆ. ನಗರಕ್ಕೆ ನಾಲ್ಕು ದಿಕ್ಕುಗಳಿಂದ ಆಗಮಿಸುವ ಬಸ್, ಕಾರ್ ತಾತ್ಕಾಲಿಕ ಬಸ್ ನಿಲುಗಡೆಗೆ ಸ್ಥಳ ನಿಗದಿಪಡಿಸಲಾಗಿದೆ. ನಗರ ಪೊಲಿಸ್ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗಿದೆ. 

ಹುಣಸೂರು ಹಾಸನ ಮಾರ್ಗವಾಗಿ ಬರುವ ಬಸ್‌ಗಳಿಗೆ ವಿಲೇಜ್ ಹಾಸ್ಟೆಲ್ ಮೈದಾನ ಬಳಿ ನಿಲ್ದಾಣ, ಪಿರಿಯಾಪಟ್ಟಣ, ಕೆ ಆರ್ ನಗರ ಮಾರ್ಗದ ಬಸ್‌ಗಳಿಗೆ ಮೈಸೂರು ವಿವಿ ಪಾರ್ಕಿಂಗ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ನಂಜನಗೂಡು ಚಾಮರಾಜನಗರ ಮಾರ್ಗದ ಬಸ್‌ಗಳಿಗೆ ಎನ್‌ಎಸ್‌ಎಸ್ ಕಚೇರಿ ಮೈದಾನ ಹಾಗು ಸೊಮಾನಿ ಬಿಎಡ್ ಕಾಲೇಜು ಮೈದಾನದ ಆವರಣದಲ್ಲಿ, ಎಚ್ ಡಿ ಕೋಟೆ ಕಡೆಯಿಂದ ಬರುವ ಬಸ್‌ಗಳಿಗೆ ಮಹಾಬೋದಿ ಹಾಸ್ಟೆಲ್ ಮೈದಾನದ ಬಳಿ, ಟಿ ನರಸೀಪುರ ಕಡೆಯಿಂದ ಬರುವ ಬಸ್ ಗಳು ಸ್ಕೌಟ್ ಅಂಡ್ ಗೈಡ್ ಮೈದಾನದಲ್ಲಿ ಸೇರಿದಂತೆ ಯಾವುದೇ ಬಸ್‌ಗಳು ಮೋದಿ ಸಂಚರಿಸುವ ಮಾರ್ಗದಲ್ಲಿ ಸಂಚಾರ ಮಾಡದಂತೆ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ಇನ್ನು ನಿಗದಿತ ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಮೈಸೂರಿನ ಹೊರ ವಲಯದ ರಿಂಗ್ ರಸ್ತೆ ಮೂಲಕ ಆಗಮಿಸಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com