ರೇಣುಕಾಚಾರ್ಯ ತಮ್ಮನ ಪುತ್ರನ ಸಾವು ಪ್ರಕರಣ: ಗೌರಿಗದ್ದೆ ಆಶ್ರಮಕ್ಕೆ ತೆರಳಿ ವಿನಯ್ ಗುರೂಜಿಯಿಂದ ಮಾಹಿತಿ ಕಲೆ ಹಾಕಿದ ಪೊಲೀಸರು

ದಾವಣಗೆರೆಯ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಸಾವಿನ ತನಿಖೆ ನಡೆಸುತ್ತಿರುವ ಪೊಲೀಸರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ.
ಚಂದ್ರಶೇಖರ್, ವಿನಯ್ ಗುರೂಜಿ(ಸಂಗ್ರಹ ಚಿತ್ರ)
ಚಂದ್ರಶೇಖರ್, ವಿನಯ್ ಗುರೂಜಿ(ಸಂಗ್ರಹ ಚಿತ್ರ)

ಚಿಕ್ಕಮಗಳೂರು: ದಾವಣಗೆರೆಯ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಸಾವಿನ ತನಿಖೆ ನಡೆಸುತ್ತಿರುವ ಪೊಲೀಸರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ.

25 ವರ್ಷದ ಚಂದ್ರಶೇಖರ್ ನಾಪತ್ತೆಯಾಗುವ ಮೊದಲು ತನ್ನ ಸ್ನೇಹಿತ ಕಿರಣ್ ಜೊತೆ ರಾತ್ರಿ ಹೊತ್ತು ಆಶ್ರಮಕ್ಕೆ ಭೇಟಿ ನೀಡಿದ್ದರು. ಅಲ್ಲಿಂದ ತಡರಾತ್ರಿ ಕಾರಿನಲ್ಲಿ ಹೊರಟ ಚಂದ್ರಶೇಖರ್ ಕಿರಣ್ ನನ್ನು ಶಿವಮೊಗ್ಗದಲ್ಲಿ ಕಾರಿನಿಂದ ಇಳಿಸಿ ದಾವಣಗೆರೆಯ ಹೊನ್ನಾಳಿಯತ್ತ ಒಬ್ಬರೇ ಹೊರಟಿದ್ದರು. 

ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಮನೆಗೆ ತಲುಪಬೇಕೆನ್ನುವಷ್ಟರಲ್ಲಿ ಕಳೆದ ಗುರುವಾರ ಮಧ್ಯಾಹ್ನ ಹೊನ್ನಾಳಿ-ನ್ಯಾಮತಿ ನಡುವೆ ಬರುವ ತುಂಗಾ ಮೇಲ್ದಂಡೆ ನಾಲೆಗೆ ಕಾರು ಬಿದ್ದಿತ್ತು. ಚಂದ್ರಶೇಖರ್ ನಾಪತ್ತೆಯಾದ 5 ದಿನಗಳ ನಂತರ ಚಂದ್ರಶೇಖರ್ ಮೃತದೇಹ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 

ಶಾಸಕ ರೇಣುಕಾಚಾರ್ಯ ಮತ್ತು ಕುಟುಂಬಸ್ಥರು ಕಾರು ಅಪಘಾತಕ್ಕೀಡಾಗಿದ್ದಲ್ಲ, ವ್ಯವಸ್ಥಿತ ಸಂಚು ನಡೆಸಿ ಚಂದ್ರಶೇಖರ್ ನನ್ನು ಕೊಲೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದು ನಿನ್ನೆ ವಿನಯ್ ಗುರೂಜಿ ಆಶ್ರಮಕ್ಕೆ ತೆರಳಿ ಗುರೂಜಿ ಬಳಿ ಹೇಳಿಕೆ ಮತ್ತು ಮಾಹಿತಿ ಸಂಗ್ರಹಿಸಿದ್ದಾರೆ.

ಪೊಲೀಸರು ಕೇಳಿದ ಪ್ರಶ್ನೆಗಳಿಗೆಲ್ಲಾ ವಿನಯ್ ಗುರೂಜಿಯವರು ಉತ್ತರಿಸಿದ್ದು, ಆಶ್ರಮಕ್ಕೆ ರಾತ್ರಿ ಹೊತ್ತು ಬಂದಿದ್ದರು, ಅವರಲ್ಲಿ ಹೆಚ್ಚು ಮಾತನಾಡಿರಲಿಲ್ಲ. ಇಷ್ಟು ತಡವಾಗಿ ಏಕೆ ಬಂದಿರಿ, ಇದು ಬರುವ ಹೊತ್ತೇ ಎಂದು ಕೇಳಿದ್ದೆ. ಹುಷಾರಾಗಿ ಹೋಗಿ ಎಂದು ಹೇಳಿ ಕಳುಹಿಸಿದ್ದೆ, ಘಟನೆ ಬಗ್ಗೆ ನನಗೂ ನೋವಿದೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com