ಬೈಕ್ ಗೆ ಟಚ್ ಆಗಿದ್ದಕ್ಕೆ ಕಾರಿನ ಗಾಜು ಒಡೆದ ಸವಾರ; ಬಾಲಕನ ಕಣ್ಣಿಗೆ ಗಂಭೀರ ಗಾಯ; ತಿಂಗಳು ಕಳೆದರೂ ಆರೋಪಿ ಬಂಧಿಸದ ಪೊಲೀಸರು

ಒಂದು ಸಣ್ಣ ವಿಚಾರಕ್ಕೆ ರಸ್ತೆಯಲ್ಲಿ ನಡೆದ ಜಗಳದಿಂದ ಹನ್ನೊಂದು ವರ್ಷದ ಬಾಲಕ ಆದಿತ್ಯ (ಹೆಸರು ಬದಲಾಯಿಸಲಾಗಿದೆ) ತೀವ್ರವಾಗಿ ಗಾಯಗೊಂಡಿದ್ದು, ತನ್ನ ಬಲಗಣ್ಣಿನ ದೃಷ್ಟಿಯನ್ನೇ ಕಳೆದುಕೊಳ್ಳುವ ಅಪಾಯದಲ್ಲಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಒಂದು ಸಣ್ಣ ವಿಚಾರಕ್ಕೆ ರಸ್ತೆಯಲ್ಲಿ ನಡೆದ ಜಗಳದಿಂದ ಹನ್ನೊಂದು ವರ್ಷದ ಬಾಲಕ ಆದಿತ್ಯ (ಹೆಸರು ಬದಲಾಯಿಸಲಾಗಿದೆ) ತೀವ್ರವಾಗಿ ಗಾಯಗೊಂಡಿದ್ದು, ತನ್ನ ಬಲಗಣ್ಣಿನ ದೃಷ್ಟಿಯನ್ನೇ ಕಳೆದುಕೊಳ್ಳುವ ಅಪಾಯದಲ್ಲಿದ್ದಾನೆ.

ಅಕ್ಟೋಬರ್ 15 ರಂದು ಬೈಕ್ ಸವಾರನೊಬ್ಬ ತನ್ನ ಬೈಕ್ ಗೆ ತಗುಲಿದ ಕಾರಿನ ಮೇಲೆ ದಾಳಿ ನಡೆಸಿ ಕಿಟಕಿ ಗಾಜು ಒಡೆದು ಹಾಕಿದ್ದಾನೆ. ಈ ವೇಳೆ ಕಾರಿನ ಒಳಗೆ ಕುಳಿತಿದ್ದ 5ನೇ ತರಗತಿ ವಿದ್ಯಾರ್ಥಿ ಆದಿತ್ಯನ ಬಲ ಕಣ್ಣುಗುಡ್ಡೆಗೆ ಗಾಜಿನ ತುಂಡು ಚುಚ್ಚಿದೆ. ಅಚ್ಚರಿ ಎಂದರೆ ಈ ಘಟನೆ ನಡೆದು ಸುಮಾರು ಒಂದು ತಿಂಗಳು ಕಳೆದಿದೆ. ಆದರೂ ಪೊಲೀಸರು ಇದುವರೆಗೂ ಆರೋಪಿಯನ್ನು ಬಂಧಿಸಿಲ್ಲ.

ಬೈಕ್ ಸವಾರ ಕಾರಿನ ಗಾಜು ಒಡೆದಾಗ ಹಿಂದಿನ ಸೀಟಿನಲ್ಲಿ ಬಾಲಕ ಕುಳಿತಿದ್ದನು. ಹಲ್ಲೆಯ ನಂತರ ಬಾಲಕನ ತಂದೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಆದಿತ್ಯ ತಂದೆ ಅಕ್ಟೋಬರ್ 15ರಂದು ಮಗನ ಜತೆ ಹೋಟೆಲ್‌ಗೆ ಹೋಗಿದ್ದರು. ಜಯನಗರ ಐವಿ ‘ಟಿ’ ಬ್ಲಾಕ್‌ನ 11ನೇ ಮುಖ್ಯ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿದ್ದರು. ಸಂಜೆ 7 ಗಂಟೆ ಸುಮಾರಿಗೆ ಹೋಟೆಲ್ ನಿಂದ ಹಿಂತಿರುಗಿದ ನಂತರ, ದಾರಿಗೆ ಅಡ್ಡವಾಗಿ ಬೈಕ್ ನಿಲ್ಲಿಸಿದ್ದರಿಂದ ಅವರಿಗೆ ಕಾರನ್ನು ತೆಗೆಯಲು ಸಾಧ್ಯವಾಗಲಿಲ್ಲ.

ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಆರೋಪಿ ತನ್ನ ಬೈಕ್ ತೆಗೆಯಲು ನಿರಾಕರಿಸಿದ್ದಾನೆ. ಟೆಕ್ಕಿ ಕಾರನ್ನು ಹೊರ ತೆಗೆಯಲು ಯತ್ನಿಸಿದಾಗ ಕಾರು ತಗುಲಿ ಬೈಕ್ ಕೆಳಗೆ ಬಿದ್ದಿದೆ. ಇದರಿಂದ ಕುಪಿತಗೊಂಡ ಆರೋಪಿ ಕಾರಿನ ಹಿಂದೆ ಓಡಿ ಹೋಗಿ ಎಡಭಾಗದ ಹಿಂಬದಿಯ ಗಾಜು ಒಡೆದಿದ್ದಾನೆ. ಗಾಜಿನ ತುಂಡು ಹುಡುಗನ ಕಣ್ಣಿಗೆ ಚುಚ್ಚಿದೆ.

“ಬೈಕ್ ಸವಾರ ಅತ್ಯಂತ ಸೊಕ್ಕಿನ ಮತ್ತು ಅಸಭ್ಯವಾಗಿ ವರ್ತಿಸಿದ. ನಾನು ನನ್ನ ಮಗನನ್ನು ಕಣ್ಣಿನ ಆಸ್ಪತ್ರೆಗೆ ಕರೆದೊಯ್ದ ನಂತರ, ಆಸ್ಪತ್ರೆಯ ಸಿಬ್ಬಂದಿ ಸ್ವತಃ ವೈದ್ಯಕೀಯ-ಕಾನೂನು ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಜಯನಗರ ಪೊಲೀಸರಿಗೆ ವಿಷಯವನ್ನು ತಿಳಿಸಿದರು” ಎಂದು ಬಾಲಕನ ತಂದೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಮಗನಿಗೆ ಎರಡು ಶಸ್ತ್ರಚಿಕಿತ್ಸೆಗಳಾಗಿವೆ
“ಪೊಲೀಸರಿಗೆ ಘಟನೆಯ ಬಗ್ಗೆ ತಿಳಿದಿದ್ದರಿಂದ ನನ್ನ ಮಗನ ಬಗ್ಗೆ ಗಮನ ಹರಿಸಿದೆ. ಹೀಗಾಗಿ ಅಧಿಕೃತವಾಗಿ ದೂರು ದಾಖಲಿಸಲು ಸಮಯ ಹಿಡಿಯಿತು. ನನ್ನ ಮಗನಿಗೆ ಎರಡು ಶಸ್ತ್ರಚಿಕಿತ್ಸೆಗಳು ನಡೆದಿವೆ. 20 ಹೊಲಿಗೆ ಹಾಕಲಾಗಿದೆ. ಇನ್ನೂ ಕೆಲವು ಶಸ್ತ್ರಚಿಕಿತ್ಸೆಗಳ ಅಗತ್ಯವಿದೆ” ಎಂದು ಹೊಸೂರು ರಸ್ತೆಯಲ್ಲಿರುವ ದುಬಾರಿ ಅಪಾರ್ಟ್‌ಮೆಂಟ್‌ ನಿವಾಸಿ ಬಾಲಕನ ತಂದೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com