
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸಂದ್ರದಲ್ಲಿ ಎಎಸ್‌ಐ ನಾರಾಯಣಸ್ವಾಮಿ ಅವರ ಮನೆಯಲ್ಲಿ ನಡೆದ ರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳ ಪತ್ತೆಗೆ 5 ವಿಶೇಷ ತಂಡಗಳನ್ನು ರಚಿಸಲಾಗಿದೆ.
ಆರೋಪಿಗಳ ಪತ್ತೆಗಾಗಿ ಈ ವಿಶೇಷ ತಂಡಗಳು ನೆರೆಯ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧೆಡೆ ಪರಿಶೀಲನೆಗಳನ್ನು ನಡೆಸುತ್ತಿದೆ.
ಎಎಸ್ಐ ನಾರಾಯಣಸ್ವಾಮಿ ಅವರ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು, ನಾರಾಯಣಸ್ವಾಮಿಯವರ ಪುತ್ರ ಶರತ್, ಅವರ ಪತ್ನಿ ಮತ್ತು ಸೊಸೆಯ ಮೇಲೆ ಹಲ್ಲೆ ನಡೆಸಿದ್ದರು ಎಂದು ಪೊಲೀಸ್ ಉಪ ಅಧೀಕ್ಷಕ ವಿ ಕೆ ವಾಸುದೇವ್ ಅವರು ಮಾಹಿತಿ ನೀಡಿದ್ದಾರೆ.
ಗುಂಡೇಟಿನಿಂದ ಗಾಯಗೊಂಡ ಶರತ್ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಷ್ಕರ್ಮಿಗಳು ಚಿನ್ನಾಭರಣ ದೋಚಿ ನಗದು ಸಮೇತ ಸ್ಥಳದಿಂದ ಪರಾರಿಯಾಗಿದ್ದಾರೆ. ದೂರಿನ ಮೇರೆಗೆ ಕೊಲೆ ಯತ್ನ, ದರೋಡೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಬೆರಳಚ್ಚು ತಜ್ಞರು ಮತ್ತು ಶ್ವಾನದಳದ ಸಿಬ್ಬಂದಿಯನ್ನು ಕೂಡ ತನಿಖೆಯಲ್ಲಿ ಕೈಜೋಡಿಸಿವೆ. ತಂಡಗಳು ಈಗಾಗಲೇ ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ತೆರಳಿದ್ದು, ನಾವು ಆಯಾ ರಾಜ್ಯ ಪೊಲೀಸರೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ, ಎಲ್ಲಾ ಚೆಕ್ ಪೋಸ್ಟ್‌ಗಳಲ್ಲಿ ಎಚ್ಚರಿಕೆ ನೀಡಲಾಗಿದೆ ಮತ್ತು ಲಾಡ್ಜ್‌ಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಹೇಳಿದ್ದಾರೆ.
Advertisement