'ಮಹಿಳೆ ಖಾತೆಗೆ 6.4 ಲಕ್ಷ ರೂ. ಮರು ಜಮಾ ಮಾಡಿ': ಕೆನರಾ ಬ್ಯಾಂಕ್‌ಗೆ ಹೈಕೋರ್ಟ್ ಸೂಚನೆ

73 ವರ್ಷದ ವೃದ್ಧ ಮಹಿಳೆಯೊಬ್ಬರ ನೆರವಿಗೆ ಧಾವಿಸಿದ ರಾಜ್ಯ ಹೈಕೋರ್ಟ್ ರೂ.6.40ಲಕ್ಷ ಹಣವನ್ನು ಮಹಿಳೆಯ ಖಾತೆಗೆ ಮರು ಜಮಾ ಮಾಡುವಂತೆ ಕೆನರಾ ಬ್ಯಾಂಕ್'ಗೆ ಸೂಚನೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 73 ವರ್ಷದ ವೃದ್ಧ ಮಹಿಳೆಯೊಬ್ಬರ ನೆರವಿಗೆ ಧಾವಿಸಿದ ರಾಜ್ಯ ಹೈಕೋರ್ಟ್ ರೂ.6.40ಲಕ್ಷ ಹಣವನ್ನು ಮಹಿಳೆಯ ಖಾತೆಗೆ ಮರು ಜಮಾ ಮಾಡುವಂತೆ ಕೆನರಾ ಬ್ಯಾಂಕ್'ಗೆ ಸೂಚನೆ ನೀಡಿದೆ.
    
ಪತಿಯ ಹೆಸರಿನಲ್ಲಿ ಸುಮಾರು 6.4 ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ಪಿಂಚಣಿ ಸ್ವೀಕರಿಸಿದ್ದ ವಿಮಲಾ ರಾಮನಾಥ ಪವಾರ್​ ಎಂಬುವರಿಗೆ ಬ್ಯಾಂಕ್​​ನಿಂದ ರಿಕವರಿಗೆ ನೋಟಿಸ್​ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಮೇಲಿನಂತೆ ಸೂಚನೆ ನೀಡಿದೆ.

ಹೆಚ್ಚುವರಿಯಾಗಿ ಪಡೆದುಕೊಂಡಿರುವ ಮೊತ್ತವನ್ನು ವಸೂಲಿ ಮಾಡಬೇಕು ಎಂದು ಬ್ಯಾಂಕ್​ಗಳ ಸುತ್ತೋಲೆಯಿದೆ. ಅರ್ಜಿದಾರರು 73 ವರ್ಷದವರಾಗಿದ್ದು, ಕುಟುಂಬ ನಿರ್ವಹಣೆ ಮತ್ತು ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಏಕಾಏಕಿ 6.4 ಲಕ್ಷ ರೂ.ಗಳನ್ನು ಕಡಿತ ಮಾಡಿದಲ್ಲಿ ಸಮಸ್ಯೆಗೆ ಒಳಗಾಗಬೇಕಾಗುತ್ತದೆ. ಆದ್ದರಿಂದ ಪ್ರತಿ ತಿಂಗಳು ಕೇವಲ 4 ಸಾವಿರ ರೂ.ಗಳಂತೆ ಕಡಿತ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದೆ.

ಅರ್ಜಿದಾರರ ಪತಿ ಸರ್ಕಾರದ ಇಲಾಖೆಯೊಂದರಲ್ಲಿ ಸಹಾಯಕ ತಾಂತ್ರಿಕ ಕಾರ್ಯನಿರ್ವಾಹಕ ಎಂಜಿನಿಯರ್​ ಆಗಿ ಕೆಲಸ ಮಾಡಿ 2002ರಲ್ಲಿ ನಿವೃತ್ತರಾಗಿದ್ದರು. ಅವರು ಕಸ್ತೂರಿ ನಗರದ ಕೆನರಾ ಬ್ಯಾಂಕ್​​ನಿಂದ ಮಾಸಿಕ 38,604 ರೂ.ಗಳನ್ನು ಮಾಸಿಕ ಪಿಂಚಣಿ ಪಡೆಯುತ್ತಿದ್ದರು. 2019ರಲ್ಲಿ ಮೃತಪಟ್ಟಿದ್ದರೂ, 2019ರ ಮಾರ್ಚ್ ಮತ್ತು 2021ರ ಪೆಬ್ರವರಿಯವರೆಗೆ ತಿಂಗಳಿಗೆ 38,604 ರೂ.ಗಳ ಬದಲಿಗೆ 96,998 ರೂ.ಗಳನ್ನು ಬ್ಯಾಂಕ್​ ಅಧಿಕಾರಿಗಳು ಅರ್ಜಿದಾರರ ಖಾತೆಗೆ ಜಮೆ ಮಾಡಿದ್ದರು. ಇದರಿಂದ ಒಟ್ಟು 13,40,261 ರೂ.ಗಳು ಜಮೆ ಆಗಿತ್ತು. ಆದರಲ್ಲಿ 6,40,000 ಮೊತ್ತವನ್ನು ರಿಕವರಿ ಮಾಡುವುದಕ್ಕೆ ಕೋರಿ ಅರ್ಜಿದಾರರಿಗೆ ನೀಡಿದ್ದ ನೋಟಿಸ್​ ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

ಬ್ಯಾಂಕ್​ ಸಿಬ್ಬಂದಿಯ ಬೇಜವಾಬ್ದಾರಿಯಿಂದ ಈ ರೀತಿಯಲ್ಲಿ ಹೆಚ್ಚುವರಿ ಹಣ ಸಂದಾಯವಾಗಿದೆ. ಅರ್ಜಿದಾರರ ಖಾತೆಗೆ ಜಮೆಯಾಗಿರುವ ಹಣ ಸಾರ್ವಜನಿಕರ ಸ್ವತ್ತಾಗಿದ್ದು, ತಪ್ಪಿತಸ್ಥ ಬ್ಯಾಂಕ್​ನ ಅಧಿಕಾರಿ ಅಥವಾ ಅರ್ಜಿದಾರರಿಗೆ ಸೇರಿದ್ದಲ್ಲ. ಹೀಗಾಗಿ ಈ ಹಣವನ್ನು ಮಾಸಿಕವಾಗಿ 4 ಸಾವಿರ ರೂ.ಗಳಂತೆ ವಸೂಲಿ ಮಾಡಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ. ಜೊತೆಗೆ, ಅರ್ಜಿದಾರರ ಖಾತೆಗೆ ಹೆಚ್ಚುವರಿ ಮೊತ್ತವನ್ನು ಪಿಂಚಣಿ ರೂಪದಲ್ಲಿ ವರ್ಗಾವಣೆ ಮಾಡಿರುವ ಸಿಬ್ಬಂದಿಯನ್ನು ಇದಕ್ಕೆ ಜವಾಬ್ದಾರರನ್ನಾಗಿ ಮಾಡಬೇಕು. ಜೊತೆಗೆ, ಕಾನೂನಿನ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಬ್ಯಾಂಕ್​ನ ಹಿರಿಯ ಅಧಿಕಾರಿಗಳಿಗೆ ನ್ಯಾಯಪೀಠ ಸೂಚನೆ ನೀಡಿದೆ.

ಸಂಪೂರ್ಣ ತಪ್ಪು ನಡೆದಿರುವುದು ಬ್ಯಾಂಕ್​ ಕಡೆಯಿಂದಾದರೂ, ಪಿಂಚಣಿ ಎಂಬುವುದು ವರದಾನವಲ್ಲ. ಅಥವಾ ಪಿಂಚಣಿದಾರರ ಪತ್ನಿಗೆ ಉಚಿತವಾಗಿ ನೀಡುವ ಉಡುಗೊರೆಯೂ ಅಲ್ಲ. ಹೀಗಾಗಿ ಪಿಂಚಣಿ ಮಂಜೂರು ಮಾಡುವ ವಿಚಾರವನ್ನು ಮನಸೋ ಇಚ್ಛೆ ನಡೆದುಕೊಳ್ಳುವುದಕ್ಕೆ ಅವಕಾಶವಿರುವುದಿಲ್ಲ ಎಂದು ನ್ಯಾಯಪೀಠ ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥ ಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com