ಮೂಡಿಗೆರೆ: ಕಾಡಾನೆ ದಾಳಿಗೆ ಮಹಿಳೆ ಬಲಿ; ಶಾಸಕ ಎಂ.ಪಿ ಕುಮಾರಸ್ವಾಮಿಗೆ ಹಿಗ್ಗಾ-ಮುಗ್ಗಾ ಥಳಿಸಿದ ಗ್ರಾಮಸ್ಥರು!
ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರ ಮೇಲೆ ಹಲ್ಲೆ ಮಾಡಲಾಗಿದೆ.
ಕಾಡಾನೆ ದಾಳಿಯಿಂದ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಮಹಿಳೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಮಹಿಳೆಯ ಶವವಿಟ್ಟು, ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮೃತದೇಹ ನೋಡಲು ಬಂದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ.
45 ವರ್ಷದ ಶೋಭಾ ಎಂಬ ಮಹಿಳೆ ಮೇಲೆ ಕಾಡಾನೆ ದಾಳಿ ಮಾಡಿ ಗಾಯಗೊಂಡು ಸಾವನ್ನಪ್ಪಿದ ನಂತರ ಈ ಘಟನೆ ಸಂಭವಿಸಿದೆ. ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ಬೆಳೆ ನಷ್ಟ ಮತ್ತು ಹಾನಿ ಕುರಿತು ಪದೇ ಪದೇ ದೂರು ನೀಡಿದರೂ ಸಮಾಧಾನಪಡಿಸಲು ವಿಫಲರಾದ ಜಿಲ್ಲಾಧಿಕಾರಿಗಳ ನಿರಾಸಕ್ತಿ ಬಗ್ಗೆ ಆಕ್ರೋಶಗೊಂಡ ಗ್ರಾಮಸ್ಥರನ್ನು ಸಮಾಧಾನಪಡಿಸಲು ಕುಮಾರಸ್ವಾಮಿ ಗ್ರಾಮಕ್ಕೆ ಧಾವಿಸಿದ್ದರು.
ಈ ವೇಳೆ ಆಕ್ರೋಶಗೊಂಡ ಗ್ರಾಮಸ್ಥರು ಅವರ ಅಂಗಿಯನ್ನು ಹರಿದು ಹಾಕಿದರು. ಕೆಲ ಗ್ರಾಮಸ್ಥರು ಶಾಸಕರ ರಕ್ಷಣೆಗೆ ಧಾವಿಸಿದ್ದರು. ಶಾಸಕರು ಗ್ರಾಮಸ್ಥರ ವರ್ತನೆಯನ್ನು ತೀವ್ರವಾಗಿ ಟೀಕಿಸಿದರು. ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿರುವ ಜಿಲ್ಲಾ ಪೊಲೀಸರು ದಾಳಿಯನ್ನು ಖಚಿತಪಡಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮೃತ ಮಹಿಳೆಯನ್ನು ಶೋಭಾ (45) ಎಂದು ಗುರುತಿಸಲಾಗಿದೆ. ಶೋಭಾ ಅವರು ತಮ್ಮ ಮನೆ ಸಮೀಪದ ಗದ್ದೆಯಲ್ಲಿ ಹುಲ್ಲು ಕತ್ತರಿಸುತ್ತಿದ್ದ ವೇಳೆ ಕಾಡಾನೆ ತುಳಿದು ಸಾವನ್ನಪ್ಪಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಪತಿ ಸತೀಶ್ ಗೌಡ ಅವರ ಹತ್ತಿರವೇ ಇದ್ದರು.
ದಂಪತಿಗೆ 20 ವರ್ಷದ ಮಗನಿದ್ದಾನೆ. ಆನೆಗಳ ಹಾವಳಿ ಹೆಚ್ಚಾಗಿದ್ದು, ತೋಟಗಳಲ್ಲಿ ಕೆಲಸ ಮಾಡಲು ರೈತರು ಭಯಪಡುವಂತಾಗಿದೆ ಎಂದು ಗ್ರಾಮದ ನಿವಾಸಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಭಾಗದಲ್ಲಿ ಆನೆಗಳು ಬೆಳೆ ಹಾನಿ ಮಾಡುತ್ತಿದ್ದು, ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಮೂರು ತಿಂಗಳ ಅವಧಿಯಲ್ಲಿ ಆನೆ ದಾಳಿಗೆ ಮೂವರು ಬಲಿಯಾಗಿದ್ದಾರೆ ಎಂದು ಅವರು ದೂರಿದರು.
ಇದೇ ವೇಳೆ ಮೂಡಿಗೆರೆ ತಾಲೂಕು ಕಾಫಿ ಬೆಳೆಗಾರರ ಅಧ್ಯಕ್ಷ ಬಾಲಕೃಷ್ಣ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವಂತೆ ಕೋರಿದ್ದು, ಕಾಡುಪ್ರಾಣಿಗಳನ್ನು ಹತೋಟಿಯಲ್ಲಿಡಲು ಇದೊಂದೇ ಮಾರ್ಗ ಎಂದರು. ಶೋಭಾ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದ ಅವರು, ಆನೆ ಹಾವಳಿ ತಡೆಗೆ ವಿಶೇಷ ಕಾರ್ಯಪಡೆ ರಚನೆಯ ಮಹತ್ವವನ್ನು ಒತ್ತಿ ಹೇಳಿದರು. ರೈತರು ಕೃಷಿಯನ್ನು ಸಂಪೂರ್ಣವಾಗಿ ಕೈಬಿಡುವ ಮುನ್ನ ಟಾಸ್ಕ್ ಫೋರ್ಸ್ ರಚಿಸಬೇಕು ಮತ್ತು ರೈತರನ್ನು ಉಳಿಸಬೇಕು ಎಂದು ಅವರು ಹೇಳಿದರು.