ಬ್ಯಾಂಕ್‌ಗೆ ನುಗ್ಗಿ 14 ಲಕ್ಷ ರೂ. ನಗದು, 3.5 ಕೋಟಿ ರೂ. ಮೌಲ್ಯದ ಚಿನ್ನ ದೋಚಿ ನಾಲ್ವರು ಮುಸುಕುಧಾರಿಗಳು ಪರಾರಿ

ದೊಡ್ಡಬಳ್ಳಾಪುರ ಸಮೀಪದ ಹೊಸಹಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ಭಾನುವಾರ ಮಧ್ಯರಾತ್ರಿ ನುಗ್ಗಿದ ನಾಲ್ವರು ಮುಸುಕುಧಾರಿಗಳ ತಂಡವು, 14 ಲಕ್ಷ ನಗದು ಹಾಗೂ 3.5 ಕೋಟಿ ಮೌಲ್ಯದ 5 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ದೊಡ್ಡಬಳ್ಳಾಪುರ ಸಮೀಪದ ಹೊಸಹಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ಭಾನುವಾರ ಮಧ್ಯರಾತ್ರಿ ನುಗ್ಗಿದ ನಾಲ್ವರು ಮುಸುಕುಧಾರಿಗಳ ತಂಡವು, 14 ಲಕ್ಷ ನಗದು ಹಾಗೂ 3.5 ಕೋಟಿ ಮೌಲ್ಯದ 5 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಶನಿವಾರ ಬ್ಯಾಂಕ್ ಮುಚ್ಚಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬ್ಯಾಂಕ್‌ನ ಮುಖ್ಯ ಬಾಗಿಲು ತುಂಡಾಗಿ ಕತ್ತರಿಸಿರುವುದನ್ನು ಕಂಡ ದಾರಿಹೋಕರೊಬ್ಬರು ಹೊಸಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದುಷ್ಕರ್ಮಿಗಳು ಗ್ಯಾಸ್ ಕಟರ್ ಬಳಸಿ ಶೆಟರ್ ಒಡೆದು ಸ್ಟ್ರಾಂಗ್ ರೂಮ್‌ಗೆ ನುಗ್ಗಿದ್ದಾರೆ.

ಫೋರೆನ್ಸಿಕ್ ತಜ್ಞರೊಂದಿಗೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಅಪರಾಧ ನಡೆದ ಸ್ಥಳವನ್ನು ಪರಿಶೀಲಿಸಿದ್ದಾರೆ. ಬ್ಯಾಂಕ್ ಮ್ಯಾನೇಜರ್ ತನು ಚೌಬೆ ನೀಡಿದ ದೂರಿನ ಮೇರೆಗೆ ಕಳ್ಳತನ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.

ಬ್ಯಾಂಕ್ ಅತ್ಯಂತ ಹಳೆಯ ಕಟ್ಟಡದಲ್ಲಿದ್ದು, ಭದ್ರತಾ ಸಿಬ್ಬಂದಿಯ ನಿಯೋಜನೆ ಸೇರಿದಂತೆ ಯಾವುದೇ ಸೂಕ್ತ ಭದ್ರತಾ ಕ್ರಮಗಳಿರಲಿಲ್ಲ. ಸ್ಟ್ರಾಂಗ್ ರೂಂನ ಅಲಾರಾಂ ಕೂಡ ಬಡಿಯಲಿಲ್ಲ. ಶುಕ್ರವಾರ ಮೂವರು ಸಿಬ್ಬಂದಿ ಬ್ಯಾಂಕ್‌ನಲ್ಲಿದ್ದರು ಮತ್ತು ಅವರು ಸಂಜೆ 5.30ರ ಸುಮಾರಿಗೆ ಬ್ಯಾಂಕ್ ಅನ್ನು ಮುಚ್ಚಿದ್ದರು.

ಬ್ಯಾಂಕ್ ಒಳಗಡೆ ಇದ್ದ ಸಿಸಿಟಿವಿ ಕ್ಯಾಮೆರಾಗೆ ಅಳವಡಿಸಿದ್ದ ಡಿವಿಆರ್ ಅನ್ನು ಸಹ ಕಳ್ಳರು ಧ್ವಂಸ ಮಾಡಿದ್ದಾರೆ. ಅವರು ಪ್ರವೇಶಿಸಿದ ದೃಶ್ಯಗಳು ಮಾತ್ರ ಲಭ್ಯವಾಗಿವೆ. ಅವರು ಒಳಗೆ ಏನು ಮಾಡಿದ್ದಾರೆ ಎಂಬುದರ ಯಾವುದೇ ದೃಶ್ಯಗಳು ಕಂಡುಬಂದಿಲ್ಲ.

ದರೋಡೆಗೆ ಸಂಚು ರೂಪಿಸಿದ್ದ ಅವರು, ಒಂದು ತಿಂಗಳಿಗೂ ಹೆಚ್ಚು ಕಾಲ ಆವರಣದ ಸುತ್ತಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಿದ್ದರು. ಅಪರಾಧದಲ್ಲಿ ಸ್ಥಳೀಯರು ಭಾಗಿಯಾಗಿರಬಹುದು. ಬ್ಯಾಂಕ್ ಸಿಬ್ಬಂದಿಯನ್ನೂ ವಿಚಾರಣೆ ನಡೆಸುತ್ತಿದ್ದೇವೆ ಎಂದು ಅಧಿಕಾರಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com