ಕೊಲೆಯಾದ ಹರ್ಷ
ಕೊಲೆಯಾದ ಹರ್ಷ

ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗೆ ಷರತ್ತುಬದ್ಧ ಜಾಮೀನು

ಶಿವಮೊಗ್ಗದಲ್ಲಿ ನಡೆದಿದ್ದ ಭಜರಂಗ ದಳ ಕಾರ್ಯಕರ್ತ ಹರ್ಷ ಉರುಫ್‌ ಹಿಂದೂ ಹರ್ಷ ಹತ್ಯೆ ಪ್ರಕರಣದ ಆರೋಪಿ ಜಾಫರ್‌ ಸಾದಿಕ್‌ (52) ಎಂಬಾತನಿಗೆ ಎನ್‌ಐಎ ವಿಶೇಷ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ನೀಡಿದೆ.

ಬೆಂಗಳೂರು: ಶಿವಮೊಗ್ಗದಲ್ಲಿ ನಡೆದಿದ್ದ ಭಜರಂಗ ದಳ ಕಾರ್ಯಕರ್ತ ಹರ್ಷ ಉರುಫ್‌ ಹಿಂದೂ ಹರ್ಷ ಹತ್ಯೆ ಪ್ರಕರಣದ ಆರೋಪಿ ಜಾಫರ್‌ ಸಾದಿಕ್‌ (52) ಎಂಬಾತನಿಗೆ ಎನ್‌ಐಎ ವಿಶೇಷ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ನೀಡಿದೆ.

ಸೆಕೆಂಡ್‌ ಹ್ಯಾಂಡ್‌ ಕಾರ್‌ ಡೀಲರ್‌ ಆಗಿರುವ ಸಾದಿಕ್‌ನನ್ನು ಫೆಬ್ರುವರಿ 24 ರಂದು ಬಂಧಿಸಿದ್ದ ಪೊಲೀಸರು, ಹರ್ಷ ಕೊಲೆ ಪ್ರಕರಣದಲ್ಲಿ 10ನೇ ಆರೋಪಿಯಾಗಿ ಮಾಡಿದ್ದರು. ಪ್ರಕರಣದ 6ನೇ ಆರೋಪಿ ಜಿಲಾನ್‌ನ ತಂದೆಯಾದ ಸಾದಿಕ್‌, ಜಾಮೀನು ಕೋರಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಸಾದಿಕ್‌ ಪರ ವಕೀಲರು, 'ಕಕ್ಷಿದಾರರು ಹರ್ಷ ಕೊಲೆ ಪ್ರಕರಣದ ಆರೋಪಿಯಾದ ತಮ್ಮ ಮಗ ಜಿಲಾನ್‌ಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಬೆಂಗಳೂರಿನ ಸ್ನೇಹಿತನ ಮನೆಯಲ್ಲಿ ಆಶ್ರಯ ಕೊಡಿಸಿದ್ದರು. ಅದನ್ನು ಹೊರತುಪಡಿಸಿದರೆ ಕಕ್ಷಿದಾರರ ವಿರುದ್ಧ ಬೇರೆ ಯಾವುದೇ ಆರೋಪವಿಲ್ಲ' ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿದ್ದರು.

ಎನ್‌ಐಎ ಪರ ವಾದ ಮಂಡಿಸಿದ ವಕೀಲರು, 'ಸಾದಿಕ್‌ ಖರೀದಿಸಿದ್ದ ಕಾರುಗಳನ್ನು ಇತರೆ ಆರೋಪಿಗಳು ಅಪರಾಧ ಕೃತ್ಯ ಎಸಗಲು ಮತ್ತು ಕೃತ್ಯದ ಬಳಿಕ ಸ್ಥಳದಿಂದ ತಪ್ಪಿಸಿಕೊಳ್ಳಲು ಬಳಕೆ ಮಾಡಿದ್ದಾರೆ. ಜತೆಗೆ ಸಾದಿಕ್‌, ತಮ್ಮ ಮಗನಿಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾನೆ ಮತ್ತು ಸ್ನೇಹಿತನ ಮನೆಯಲ್ಲಿ ಆಶ್ರಯ ಕೊಡಿಸಿದ್ದಾನೆ. ಹೀಗಾಗಿ, ಇತರೆ ಆರೋಪಿಗಳ ಅಪರಾಧ ಕೃತ್ಯವು ಸಾದಿಕ್‌ಗೆ ಚೆನ್ನಾಗಿ ತಿಳಿದಿತ್ತು. ಈ ಕಾರಣಕ್ಕೆ ಸಾದಿಕ್‌ಗೆ ಜಾಮೀನು ನೀಡಬಾರದು' ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಎನ್ ಐಎ ವಿಶೇಷ ನ್ಯಾಯಾಲಯ ಆರೋಪಿಯು 50 ಸಾವಿರ ರೂ. ವೈಯಕ್ತಿಕ ಬಾಂಡ್ ಮತ್ತು ಶ್ಯೂರಿಟಿ ನೀಡಬೇಕು. ನ್ಯಾಯಾಲಯ ವಿನಾಯಿತಿ ನೀಡದ ಹೊರತು ಪ್ರತಿಬಾರಿ ಪ್ರಕರಣದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಮತ್ತು ಸಾಕ್ಷ್ಯ ನಾಶ ಮಾಡಬಾರದು. ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದು ನ್ಯಾಯಾಲಯ ಷರತ್ತುಗಳನ್ನು ವಿಧಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com