ತುಮಕೂರು: ಏಷ್ಯಾದ ಅತೀ ದೊಡ್ಡ ಸೌರ ಘಟಕ ಅನ್ನೋ ಹೆಗ್ಗಳಿಕೆ ಪಡೆದಿರವ ತುಮಕೂರು ಜಿಲ್ಲೆಯ ಪಾವಗಡದ ಸೋಲಾರ್ ಪಾರ್ಕ್ ಭಾರೀ ಮಳೆಯಿಂದಾಗಿ ಮುಳುಗಡೆಯಾಗಿದೆ.
12 ಸಾವಿರ ಎಕರೆ ವಿಸ್ತೀರ್ಣದ ಪಾರ್ಕ್ ಸಂಪೂರ್ಣ ಮುಳುಗಡೆಯಾಗಿದೆ. ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಯಿಂದಾಗಿ ಪಾವಗಡದಲ್ಲಿ ನೀರು ತುಂಬಿದ್ದು, ತಗ್ಗು ಪ್ರದೇಶಗಳಲ್ಲಿ ಮತ್ತು ತಿರುಮಣಿಯ ಟ್ಯಾಂಕ್ ಬೆಡ್‌ನಲ್ಲಿ ಅವೈಜ್ಞಾನಿಕವಾಗಿ ಫಲಕಗಳನ್ನು ಅಳವಡಿಸಿರುವುದು ಬಹಿರಂಗವಾಗಿದೆ.
ಕೆರೆ ತುಂಬಿ ತುಳುಕುತ್ತಿರುವುದರಿಂದ ಸೋಲಾರ್ ಪಾರ್ಕ್ ನ ಒಂದು ಭಾಗ ಮುಳುಗಡೆಯಾಗಿದೆ. ಸೋಲಾರ್ ಪಾರ್ಕ್ ಯೋಜನೆಗೆ ಜಮೀನು ತೆಗೆದುಕೊಳ್ಳದ ಕಾರಣ ಕೆಳಭಾಗದ ಕೆಲವು ರೈತರು ತಮ್ಮ ಹೊಲಗಳಿಗೆ ನೀರು ಹರಿಸುವುದನ್ನು ನಿರ್ಬಂಧಿಸಿದ್ದಾರೆ, ಹೀಗಾಗಿ ಹೆಚ್ಚುವರಿ ನೀರು ಹೊರಹೋಗಲು ಯಾವುದೇ ಮಾರ್ಗವಿಲ್ಲ ಎಂದು ನಿವಾಸಿಯೊಬ್ಬರು ಹೇಳಿದ್ದಾರೆ.
ಸೋಲಾರ್ ಪ್ಯಾನೆಲ್ ಸ್ಥಾಪಿಸಿದಾಗ, ಟ್ಯಾಂಕ್ ಬೆಡ್ ಒಣಗಿತ್ತು. ಹಲವು ದಶಕಗಳಿಂದ ಈ ಭಾಗದಲ್ಲಿ ಹೆಚ್ಚಿನ ಮಳೆಯಾಗಿಲಿಲ್ಲ, ಪಾವಗಡದಲ್ಲಿ ಭಾರೀ ಮಳೆಯಾಗಿರುವುದು ಇದೇ ಮೊದಲು. ಪ್ಯಾನಲ್ ಗಳಿಗೆ ಆಗಿರುವ ನಷ್ಟದ ಬಗ್ಗೆ ಇನ್ನೂ ತಿಳಿದುಬಂದಿಲ್ಲ.
ಸುಮಾರು 30-40 ಎಕರೆ ಪ್ರದೇಶದಲ್ಲಿ ನೀರು ಸಂಗ್ರಹವಾಗಿದ್ದು, ಖಾಸಗಿ ಕಂಪನಿಯ ಉದ್ಯೋಗಿ ನೀರಿನಲ್ಲಿ ಈಜುತ್ತಿರುವ ವಿಡಿಯೋ ವೈರಲ್ ಆಗಿದೆ. ರಾಯಚೆರ್ಲು ಮತ್ತು ಕ್ಯಾಟಗಣಾಚಾರ್ಲು ನಡುವಿನ ತಾಟಿಕುಂಟೆ ಕೆರೆ ತುಂಬಿ ತುಳುಕುತ್ತಿದೆ. ಸ್ಥಳಕ್ಕೆ ತಹಶೀಲ್ದಾರ್ ವರದರಾಜ್ ಭೇಟಿ ನೀಡಿ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು.
Advertisement